Advertisement

ಎನ್‌ಸಿಸಿ ಶಿಕ್ಷಕರಿಗೆ ಕಡ್ಡಾಯ ವರ್ಗ

10:04 AM Jun 18, 2019 | Team Udayavani |

ಬೆಳ್ತಂಗಡಿ: ರಾಜ್ಯದ ಬಹುತೇಕ ಸರಕಾರಿ ಶಾಲೆಗಳಲ್ಲಿ 10 ವರ್ಷ ಸೇವೆ ಸಲ್ಲಿಸಿದ ಎನ್‌ಸಿಸಿ ಶಿಕ್ಷಕರಿಗೆ ಹೆಚ್ಚುವರಿ ಮತ್ತು ಕಡ್ಡಾಯ ವರ್ಗಾವಣೆ ನೀತಿ ಜಾರಿಗೊಳಿಸಿದ್ದರಿಂದ ಸರಕಾರಿ ಶಾಲೆಗಳಲ್ಲಿ ಎನ್‌ಸಿಸಿ ಘಟಕ ಮುಚ್ಚುವ ಭೀತಿ ಎದುರಾಗಿದೆ.

Advertisement

ಸದ್ಯ ರಾಜ್ಯದಲ್ಲಿರುವ ಸರಕಾರಿ ಶಾಲೆಗಳ ಪೈಕಿ ಕೇವಲ 47 ಪ್ರೌಢಶಾಲೆ ಮತ್ತು 62 ಕಾಲೇಜುಗಳಲ್ಲಿ ಮಾತ್ರ ಎನ್‌ಸಿಸಿ ಘಟಕ ಉಳಿದುಕೊಂಡಿದೆ. ಎನ್‌ಸಿಸಿ ತರಬೇತಿ ಪಡೆದು ಮಕ್ಕಳಿಗೆ ಸನ್ನಡತೆ ಕಲಿಸುವ ಎ ವಲಯದಲ್ಲಿ 10 ವರ್ಷ ಸೇವೆ ಸಲ್ಲಿಸಿದ ಶಿಕ್ಷಕರನ್ನು ಕಡ್ಡಾಯವಾಗಿ ವರ್ಗಾಯಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

ಎನ್‌ಸಿಸಿ ಇಲ್ಲದ ಸಿ ವಲಯಕ್ಕೆ ವರ್ಗಾವಣೆಗೊಳ್ಳುವುದರಿಂದ ಸರಕಾರಿ ಶಾಲೆಯಲ್ಲಿ ಈಗಾಗಲೇ ಎನ್‌ಸಿಸಿ ವಿಂಗ್‌ನಲ್ಲಿರುವ ಮಕ್ಕಳು ಪ್ರಯೋಜನದಿಂದ ವಿಮುಖರಾಗಲಿದ್ದಾರೆ. ಜತೆಗೆ ಈಗಿರುವ ಎನ್‌ಸಿಸಿ ಘಟಕಗಳು ಮುಚ್ಚುವ ಭೀತಿ ಎದುರಾಗಿದೆ.

ಶಿಕ್ಷಕರಿಂದ ಮನವಿ
ಈ ಕುರಿತು ರಾಜ್ಯದ 47 ಶಾಲೆಗಳ ಎನ್‌ಸಿಸಿ ಶಿಕ್ಷಕರು ಶಿಕ್ಷಣ ಇಲಾಖೆ ಆಯುಕ್ತರ ಕದ ತಟ್ಟಿದ್ದಾರೆ. ವರ್ಗಾವಣೆ ಮಾಡುವುದೇ ಆದಲ್ಲಿ ಎನ್‌ಸಿಸಿ ಇರುವ ಪ್ರೌಢ ಶಾಲೆಗಳಿಗೆ ವರ್ಗಾಯಿಸುವಂತೆ ಕೋರಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸತತ 3 ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದಿದ್ದಾರೆ.

2018ರ ಅಕ್ಟೋಬರ್‌ನಲ್ಲಿ ಪ್ರಧಾನ ಕಾರ್ಯದರ್ಶಿಗಳು ಮನವಿ ಪುರಸ್ಕರಿಸಿ, ಎನ್‌ಸಿಸಿ ಇರುವ ಸ್ಥಳಕ್ಕೆ ಮಾತ್ರ ವರ್ಗಾಯಿಸುವಂತೆ ಆದೇಶ ನೀಡಿದ್ದರು. ಆದರೆ ಆಯುಕ್ತರು ಆದೇಶವನ್ನು 3 ಬಾರಿ ಪುನರ್‌ ಪರಿಶೀಲನೆಗಾಗಿ ಪ್ರಧಾನ ಕಾರ್ಯದರ್ಶಿಗಳಿಗೆ ಹಿಂದಿರುಗಿಸಿದ್ದಾರೆ ವಿನಾ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ ಎಂಬುದು ಶಿಕ್ಷಕರ ಅಳಲು. ಆದರೆ ಆಯುಕ್ತರಲ್ಲಿ ಪ್ರಶ್ನಿಸಿದರೆ ಕೌನ್ಸಿಲಿಂಗ್‌ ಸಮಯದಲ್ಲಿ ಶಿಕ್ಷಕರ ಆಯ್ಕೆ ಮಾಡಿದ ಶಾಲೆಗೆ ವರ್ಗಾಯಿಸುತ್ತೇವೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ಹಾಗಾದಲ್ಲಿ ಹಾಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಪಾಡೇನು ಎಂಬುದು ಪ್ರಶ್ನೆ. ಇನ್ನೊಂದೆಡೆ, ಸರಕಾರವು ಶಿಕ್ಷಕರಿಗೆ ಎನ್‌ಸಿಸಿ ತರಬೇತಿಗಾಗಿ ತಲಾ 60 ಸಾವಿರ ರೂ. ವಿನಿಯೋಗಿಸಿದ್ದು, ಸರಕಾರದ ಬೊಕ್ಕಸಕ್ಕಾಗುವ ನಷ್ಟ ಭರಿಸುವವರಾರು ಎಂಬ ಪ್ರಶ್ನೆಯೂ ಇದೆ. ಹೊಸ ಶಿಕ್ಷಕರನ್ನು ತರಬೇತಿಗೆ ಕಳುಹಿಸಿದರೂ ಸರಕಾರಕ್ಕೆ ಅನಗತ್ಯ ಆರ್ಥಿಕ ಹೊರೆಯಾಗಲಿದೆ.

Advertisement

ಈ ಹಿಂದೆ ವಿಧಾನ ಪರಿಷತ್‌ ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಮತ್ತು 15 ಮಂದಿ ವಿಧಾನ ಪರಿಷತ್‌ ಸದಸ್ಯರು ಹಾಗೂ ಶಿಕ್ಷಣ ಇಲಾಖೆಯ ವರಿಷ್ಠರ ಸಮ್ಮುಖ ಕೈಗೊಂಡ ಸಭಾ ನಡವಳಿಯಲ್ಲಿ ಪ್ರಧಾನ ಕಾರ್ಯದರ್ಶಿಗಳು ಎನ್‌ಸಿಸಿ ಶಿಕ್ಷಕರನ್ನು ಎನ್‌ಸಿಸಿ ಘಟಕ ಇರುವ ಶಾಲೆಗಳಿಗೆ ವರ್ಗಾವಣೆ ಮಾಡುತ್ತೇವೆ ಎಂದು ಒಪ್ಪಿಗೆ ಸೂಚಿಸಿದ್ದರು. ಆದರೂ ತತ್ಸಂಬಂಧಿ ಆದೇಶ ಹೊರಬಿದ್ದಿಲ್ಲ.

ಸಿಎಂ ಆದೇಶ ಕಡೆಗಣನೆ
ವಿಧಾನ ಪರಿಷತ್‌ ಸದಸ್ಯ ಭೋಜೇ ಗೌಡ ಅವರ ಮನವಿಯ ಮೇರೆಗೆ ಸಿಎಂ ಎಚ್‌.ಡಿ. ಕುಮಾರಸ್ವಾಮಿಯೂ ಶಿಕ್ಷಕರ ಮನವಿಯನ್ನು ಪರಿಗಣಿಸಿ ಎಂದು ನಮೂದಿಸಿ ಪ್ರಧಾನ ಕಾರ್ಯದರ್ಶಿಗೆ ಕಳುಹಿಸಿದ್ದರು. ಆದರೆ ಅದನ್ನು ಕಡೆಗಣಿಸಿರುವುದು ಸರಕಾರಿ ಶಾಲೆಗಳಲ್ಲಿ ಎನ್‌ಸಿಸಿ ಮುಚ್ಚಲು ಪರೋಕ್ಷವಾಗಿ ಇಲಾಖೆ ಅಥವಾ ಕಾಣದ ಕೈಗಳು ಕೆಲಸ ಮಾಡುತ್ತಿವೆಯೇ ಎಂಬ ಅನುಮಾನ ಹುಟ್ಟಿಸುತ್ತಿದೆ.

 ಮುಚ್ಚುವ ಹಂತದಲ್ಲಿ ರಾಜ್ಯದ 47 ಪ್ರೌಢ ಶಾಲಾ ಎನ್‌ಸಿಸಿ ವಿಂಗ್‌
 ಶಾಲೆಯೊಂದರಲ್ಲಿ 100 ವಿದ್ಯಾರ್ಥಿಗಳು ಅವಕಾಶ ವಂಚಿತರು
 ಜಿಲ್ಲೆಗೆ 2ರಂತೆ ಇರುವ ಎನ್‌ಸಿಸಿ ಶಾಲೆಗಳೂ ಮುಚ್ಚುವ ಭೀತಿ

ಕಾನೂನಿನಲ್ಲಿ ಯಾವ ರೀತಿ ಅವಕಾಶಗಳಿವೆ ಎಂಬುದನ್ನು ಪರಿಗಣಿಸಿ ವರ್ಗಾವಣೆ ಅವಕಾಶ ಕಲ್ಪಿಸಲಾಗುವುದು. ಶಿಕ್ಷಕರ ಕೌನ್ಸೆಲಿಂಗ್‌ ಸಂದರ್ಭ ಅವರು ಬಯಸಿದ ಶಾಲೆಗಳಿಗೆ ವರ್ಗಾವಣೆ ಮಾಡಲು ಅವಕಾಶ ಕಲ್ಪಿಸಲಾಗುವುದು.
ಪಿ.ಸಿ. ಜಾಫರ್‌ ಆಯುಕ್ತರು, ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು

ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next