Advertisement

7 ದಿನಗಳಲ್ಲಿ ಭೂ ಪರಿವರ್ತನೆ ಕಡ್ಡಾಯ: ರಾಜ್ಯದ ಇತರ ಜಿಲ್ಲೆಗಳಲ್ಲಿ ಹೂಡಿಕೆ ಉತ್ತೇಜನ

11:43 PM Dec 20, 2022 | Team Udayavani |

ಬೆಳಗಾವಿ: ಕೃಷಿ ಭೂಮಿ ಕೃಷಿಯೇತರ ಬಳಕೆಗೆ ಪರಿವರ್ತನೆ 7 ದಿನಗಳಲ್ಲಿ ಕಡ್ಡಾಯವಾಗಿ ಮಾಡಿಕೊಡುವ ಉದ್ದೇಶದ ಕರ್ನಾಟಕ ಭೂ ಕಂದಾಯ ಎರಡನೇ ತಿದ್ದುಪಡಿ ಮಸೂದೆ ಹಾಗೂ ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಕೈಗಾರಿಕೆ ಉತ್ತೇಜಿಸಿ ಹೆಚ್ಚಿನ ಹೂಡಿಕೆ ತರುವ ಉದ್ದೇಶದ ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಮಸೂದೆ ಸೇರಿದಂತೆ ಮೂರು ಮಸೂದೆಗಳನ್ನು ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಲಾಯಿತು.

Advertisement

ಸಚಿವ ಮುರುಗೇಶ್‌ ನಿರಾಣಿ ಪರವಾಗಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು, ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಮಸೂದೆ ಮಂಡಿಸಿ ಗುಜರಾತ್‌ ಮತ್ತು ರಾಜಸ್ಥಾನ ಮಾದರಿಯಲ್ಲಿ ವಿಶೇಷ ಹೂಡಿಕೆ ಪ್ರದೇಶವನ್ನು ಸ್ಥಾಪಿಸುವುದು ಸರಕಾರದ ಉದ್ದೇಶವಾಗಿದೆ. ಆರಂಭದಲ್ಲಿ ತುಮಕೂರು ಮತ್ತು ಧಾರವಾಡ ಜಿಲ್ಲೆಯಲ್ಲಿ ಹೂಡಿಕೆ ಪ್ರದೇಶವನ್ನು ಸ್ಥಾಪಿಸುವ ಚಿಂತನೆ ಇದೆ. 2,500 ಎಕರೆಗಿಂತ ಹೆಚ್ಚಿನ ಪ್ರದೇಶವನ್ನು ಹೊಂದಿರುವ ಹೂಡಿಕೆ ಪ್ರದೇಶ ಅಥವಾ 1,250 ಎಕರೆಗಿಂತ ಕಡಿಮೆ ಇಲ್ಲದ ವಿಸ್ತೀರ್ಣ ಹೊಂದಿರುವ ಪ್ರದೇಶಗಳನ್ನು ವಿಶೇಷ ಹೂಡಿಕೆ ಪ್ರದೇಶ ಎಂದು ಪರಿಗಣಿಸುವುದು ಮಸೂದೆಯಲ್ಲಿದೆ ಎಂದು ಹೇಳಿದರು.

ಕಂದಾಯ ಸಚಿವ ಆರ್‌. ಅಶೋಕ್‌ ಅವರು, ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ಮಸೂದೆ ಮಂಡಿಸಿದರು. ಭೂ ಪರಿವರ್ತನೆಗೆ ಈ ಮೊದಲು 5-6 ತಿಂಗಳುಗಳ ಕಾಲ ತೆಗೆದುಕೊಳ್ಳಲಾಗಿತ್ತಿತ್ತು. ಇದನ್ನು ಏಳು ದಿನದಲ್ಲಿ ಮಾಡಿಕೊಡಲು ಈ ಮಸೂದೆಯನ್ನು ಮಂಡಿಸಲಾಗಿದೆ. ಇದರಿಂದ ಭ್ರಷ್ಟಾಚಾರ ಮತ್ತು ಕಿರುಕುಳ ತಪ್ಪಿಸಿದಂತಾಗುತ್ತದೆ ಎಂದು ತಿಳಿಸಿದರು.

ಗಡಿ ಪ್ರದೇಶ ಮಸೂದೆ:
ಸುನಿಲ್‌ ಮಂಡನೆ
ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ಕುಮಾರ್‌, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ ಮಂಡಿಸಿದರು. ರಾಜ್ಯದಲ್ಲಿ ಹೊಸದಾಗಿ ಸೇರ್ಪಡೆಗೊಂಡಿರುವ 47 ತಾಲೂಕುಗಳಲ್ಲಿ 7 ತಾಲೂಕುಗಳು ಗಡಿ ಭಾಗದಲ್ಲಿ ಬರಲಿದ್ದು, ಗಡಿ ಪ್ರದೇಶಕ್ಕೆ ಹೊಸದಾಗಿ ಸೇರ್ಪಡೆ ಅಥವಾ ಕೈ ಬಿಡುವ ಮಾರ್ಪಾಟು ಅಧಿಕಾರ ಇನ್ನು ಮುಂದೆ ಸರಕಾರಕ್ಕೆ ನೀಡುವ ಉದ್ದೇಶ ಮಸೂದೆ ಹೊಂದಿದೆ. ಪ್ರತೀ ಬಾರಿ ಗಡಿ ಭಾಗದ ಪ್ರದೇಶ ಸೇರ್ಪಡೆ ವಿಷಯಕ್ಕೆ ಮಸೂದೆ ತರಬೇಕಾಗಿತ್ತು. ಆದರೆ ಈ ಸಮಸ್ಯೆಯನ್ನು ನಿವಾರಣೆ ಮಾಡಲು ಸರಕಾರದ ತೀರ್ಮಾನಕ್ಕೆ ಬಿಡುವುದು ಮಸೂದೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next