Advertisement

ವಾಪಸ್ಸಾಗುವ ವಲಸಿಗರಿಗೆ ಕಡ್ಡಾಯ ಗೃಹ ದಿಗ್ಬಂಧನ?

04:36 AM May 16, 2020 | Lakshmi GovindaRaj |

ಬೆಂಗಳೂರು: ಹೊರ ರಾಜ್ಯಗಳಿಂದ ರಾಜ್ಯಕ್ಕೆ ವಾಪಸ್ಸಾಗುತ್ತಿರುವವರನ್ನು 14 ದಿನ ಕ್ವಾರಂಟೈನ್‌ನಲ್ಲಿ ಇಡಲು ಸ್ಥಳಾವಕಾಶದ ಕೊರತೆ ಹಾಗೂ ಅಷ್ಟೂ ದಿನ ಅವರ ಮೇಲೆ ನಿಗಾ ಇರಿಸುವುದು ಸವಾಲಾಗುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ  ಕಡ್ಡಾಯ “ಗೃಹ ದಿಗ್ಬಂಧನ’ ವಿಧಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಗಂಭೀರ ಚಿಂತನೆ ನಡೆಸಿದೆ. ಹೊರ ರಾಜ್ಯಗಳಿಂದ ರಾಜ್ಯಕ್ಕೆ ರೈಲು ಇತರೆ ಸಾರಿಗೆ ಮೂಲಕ ಸಾವಿರಾರು ಜನ ರಾಜ್ಯಕ್ಕೆ ಹಿಂತಿರುಗುತ್ತಿದ್ದಾರೆ.

Advertisement

ಇಷ್ಟೂ  ಮಂದಿಯನ್ನು ಕ್ವಾರಂಟೈನ್‌ನಲ್ಲಿ ಇರಿಸುವುದು ಸರ್ಕಾರ ಹಾಗೂ ಸ್ಥಳೀಯ ಆಡಳಿತಗಳಿಗೂ ಸವಾಲಾಗಿ ಪರಿಣಮಿಸಿದೆ. ಮುಖ್ಯವಾಗಿ ಕ್ವಾರಂಟೈನ್‌ಗೆ ಒಳಪಡಿಸಲು ಸೂಕ್ತ ಸ್ಥಳಗಳನ್ನು ಗುರುತಿಸುವುದು ಕಷ್ಟವಾಗಿದೆ. ಬೆಂಗಳೂರಿನಲ್ಲಿ  ಸೇರಿದಂತೆ ಇತರೆ ನಗರಗಳಲ್ಲಿ ಕ್ವಾರೆಂಟೈನ್‌ಗೆ ಗುರುತಿಸಿರುವ ಸ್ಥಳಾವಕಾಶಗಳು ಬಹುತೇಕ ಭರ್ತಿಯಾಗಿದ್ದು, ಇನ್ನು ನೂರಾರು ಮಂದಿ ಆಗಮಿಸಿದರೆ ಅವರಿಗೆ ಕ್ವಾರಂಟೈನ್‌ನಲ್ಲಿ ಇಡಲು ಸೂಕ್ತ ಸ್ಥಳಾವಕಾಶ ಹುಡುಕುವುದು ಎಲ್ಲಿ ಎಂಬ  ಪ್ರಶ್ನೆ ಮೂಡಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು.

ಕ್ವಾರೆಂಟೈನ್‌ಗೆ ಗುರುತಿಸುವ ಕಟ್ಟಡದ ಸುತ್ತಮುತ್ತಲಿನ ಜನ ಕೂಡ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಹಾಗೆಂದು ದೂರದ ಪ್ರದೇಶಗಳನ್ನು ಶೋಧಿಸಿದರೂ  ಅಗತ್ಯ ಸೌಲಭ್ಯಗಳುಳ್ಳ ಸುಸ್ಥಿತಿಯ ಕಟ್ಟಡಗಳು ಸಿಗದಿರುವುದು ತಲೆನೋವಾಗಿ ಪರಿಣಮಿಸಿದೆ ಎಂದು ಹೇಳಿದರು.

ನಿಗಾ ವಹಿಸುವುದು ಕಷ್ಟ: ಆರ್ಥಿಕವಾಗಿ ಸುಸ್ಥಿತಿಯಲ್ಲಿರುವವರಿಂದ ಶುಲ್ಕ ಪಡೆದು ಕ್ವಾರೆಂಟೈನ್‌ ನಲ್ಲಿ ಇರಿಸಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಸರ್ಕಾರವೇ ಉಚಿತವಾಗಿ ಕ್ವಾರಂಟೈನ್‌ನಲ್ಲಿ ಇರಿಸುತ್ತಿದೆ. ಇಷ್ಟೂ ಮಂದಿಯ  ಮೇಲೆ ಹಗಲು ರಾತ್ರಿ ನಿಗಾ ಇರಿಸುವುದು ಕಷ್ಟವಾಗಿದೆ. ಈ ಹಂತದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಮುಂದೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಿದರು.

ಗೃಹ ದಿಗ್ಬಂಧನ ಸೂಕ್ತ: ಹೊರ ರಾಜ್ಯಗಳಿಂದ ಬಂದವರನ್ನು ತಪಾಸಣೆಗೆ ಒಳಪಡಿಸಿ ಬಳಿಕ ಅವರನ್ನು ಅವರ ಮನೆಗಳಲ್ಲೇ ದಿಗ್ಬಂಧನಕ್ಕೆ ಒಳಪಡಿಸುವುದು ಸೂಕ್ತ ಎಂಬ ಬಗ್ಗೆ ಗಂಭೀರ ಚರ್ಚೆಯಾಗಿದೆ. ಒಂದೆಡೆ ಅವರ ಕುಟುಂಬದ  ಸದಸ್ಯರು ಹೊರ ಹೋಗದಂತೆ ನೋಡಿಕೊಳ್ಳುತ್ತಾರೆ. ಜತೆಗೆ ಮನೆಯ ಮುಂದೆ ಕ್ವಾರಂಟೈನ್‌ನಲ್ಲಿರುವ ಬಗ್ಗೆ ಫಲಕ ಹಾಕುವುದರಿಂದ ನೆರೆಹೊರೆಯವರು ನಿಗಾ ಇರಿಸುತ್ತಾರೆ. ಇದರಿಂದ ಸಾಂಸ್ಥಿಕ ದಿಗ್ಬಂಧನಕ್ಕಿಂತ ಗೃಹ ದಿಗ್ಬಂಧನವೇ ಪರಿಣಾಮಕಾರಿ ಎನಿಸುತ್ತದೆ ಎಂದು ಹೇಳಿದ್ದಾರೆ.

Advertisement

ಕ್ವಾರಂಟೈನ್‌ಗೆ ಆಕ್ಷೇಪ: ಸರ್ಕಾರಕ್ಕೆ ಮನವಿ ಸಲ್ಲಿಸಲು ಸೂಚನೆ: ವಿದೇಶಗಳಿಂದ ರಾಜ್ಯಕ್ಕೆ ವಾಪಸ್‌ ಕರೆಸಿಕೊಂಡವರನ್ನು ದೊಡ್ಡಬಳ್ಳಾಪುರ ತಾಲೂಕಿನ ವಿವಿಧ ಹಾಸ್ಟೆಲ್‌, ಕಾಲೇಜು ಹಾಗೂ ಕಲ್ಯಾಣ ಮಂಟಪದಲ್ಲಿ ಕ್ವಾರಂಟೈನ್‌ ಮಾಡುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ ಆದೇಶ ರದ್ದುಪಡಿಸಲು ಕೋರುವ ವಿಚಾರವಾಗಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸುವಂತೆ ಅರ್ಜಿದಾರರಿಗೆ ಹೈಕೋರ್ಟ್‌ ಸೂಚಿಸಿತು.

ಈ ಕುರಿತು ವಕೀಲ ವೆಂಕಟೇಶ್‌ ಎಂಬುವರು  ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಎ.ಎಸ್‌.ಓಕಾ ಹಾಗೂ ನ್ಯಾ. ವಿ. ಶ್ರೀಶಾನಂದ ಅವರಿದ್ದ ವಿಭಾಗೀಯ ಪೀಠ, ಈ ವಿಚಾರವಾಗಿ ಅರ್ಜಿದಾರರು ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಬೇಕು. ಅದನ್ನು ಸರ್ಕಾರ ಎರಡು  ವಾರಗಳಲ್ಲಿ ಪರಿಗಣಿಸಬೇಕು ಎಂದು ಸೂಚಿಸಿ ಅರ್ಜಿ ಇತ್ಯರ್ಥಪಡಿಸಿತು. ವಿದೇಶಗಳಿಂದ ಬಂದವರನ್ನು ದೊಡ್ಡಬಳ್ಳಾಪುರ ತಾಲೂಕಿನ ವಿವಿಧ ಹಾಸ್ಟೆಲ್‌, ಕಾಲೇಜು, ವಿಶ್ವವಿದ್ಯಾಲಯ, ಸಮುದಾಯ ಭವನ, ಕಲ್ಯಾಣ ಮಂಟಪದಲ್ಲಿ  ಕ್ವಾರಂಟೈನ್‌ ಮಾಡಲು ಸರ್ಕಾರ ಆದೇಶಿಸಿತ್ತು. ಆದರೆ, ಅಲ್ಲಿ ಶೌಚಾಲಯ ಸೇರಿದಂತೆ ಸರಿಯಾದ ವ್ಯವಸ್ಥೆಯಿಲ್ಲ. ಇಂದರಿಂದ ಸೋಂಕು ಮತ್ತಷ್ಟು ಹರಡುವ ಸಾಧ್ಯತೆಯಿದೆ. ಹೀಗಾಗಿ ಸರ್ಕಾರದ ಆದೇಶ ರದ್ದುಪಡಿಸುವಂತೆ ಅರ್ಜಿದಾರರು  ಕೋರಿದ್ದರು.

* ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next