ಪಡುತೋನ್ಸೆ: ಗ್ರಾಮದಲ್ಲಿ ಸಿಕ್ಕಿಬಿದ್ದ ಬಾಂಗ್ಲಾ ಅಕ್ರಮ ವಲಸಿಗರು ಸುಮಾರು ಐದು ವರ್ಷಗಳಿಂದ ನೆಲೆಸಿದ್ದರೂ ಯಾರಿಗೂ ಲವಲೇಶದಷ್ಟೂ ಅನುಮಾನವೇ ಬಂದಿರಲಿಲ್ಲ !
ಬಾಂಗ್ಲಾ ಅಕ್ರಮ ವಲಸಿಗರ ಚಟುವಟಿಕೆ ಬಗ್ಗೆ ಸ್ಥಳೀಯರಲ್ಲಿ ಮಾಹಿತಿ ಕೇಳಿದಾಗ ಹಲವರು ಅಚ್ಚರಿ ವ್ಯಕ್ತಪಡಿಸಿದರು.
ಪಡುತೋನ್ಸೆ ಗ್ರಾಮದ ಕೆಮ್ಮಣ್ಣು, ನೇಜಾರು, ಹೂಡೆ ಪರಿಸರದಲ್ಲಿ ಒಡಿಶಾ, ಉತ್ತರ ಪ್ರದೇಶ ಮೊದಲಾದ ಹೊರ ರಾಜ್ಯಗಳ ಕಾರ್ಮಿಕರು ಹಲವೆಡೆ ವಾಸವಿದ್ದಾರೆ. ಹಲವು ವರ್ಷಗಳಿಂದ ಮೀನುಗಾರಿಕೆ, ಕಟ್ಟಡ ನಿರ್ಮಾಣ ಕೆಲಸಗಳಲ್ಲಿ ಕಾರ್ಯ ನಿರತರಾಗಿದ್ದು, ಅವರಂತೆಯೇ ಇವರೂ ಎಂದುಕೊಂಡಿದ್ದೆವು ಎನ್ನುತ್ತಾರೆ ಸ್ಥಳೀಯರೊಬ್ಬರು.
ಆರೋಪಿಗಳು ಮಲ್ಪೆ ಮತ್ತು ಉಡುಪಿ ನಗರದ ಕಟ್ಟಡ ನಿರ್ಮಾಣ ಸೈಟ್‌ಗಳಲ್ಲಿ ಗಾರೆ ಮತ್ತು ಲಪ್ಪ ಹೊಡೆಯುವ ಕೆಲಸ ಮಾಡಿಕೊಂಡಿದ್ದರು. ಬಾಡಿಗೆ ಮನೆಗಳಲ್ಲಿ ತಮ್ಮ ನಕಲಿ ಆಧಾರ್ ಕಾರ್ಡ್‌ಗಳನ್ನು ನೀಡಿ ನೆಲೆಸಿದ್ದರು. ತಾವು ವಾಸ್ತವ್ಯ ಇದ್ದ ಪರಿಸರದಲ್ಲಿ, ಕೆಲಸ ಮಾಡುವ ಸ್ಥಳದಲ್ಲಿ ಈ ಬಗ್ಗೆ ಅನುಮಾನ ಬಾರದಂತಿದ್ದರು. ಸಿಕ್ಕಿಂನ ಅಗರ್ತಲ ನಿವಾಸಿ ಕಾಜೋಲ…, ಬಾಂಗ್ಲಾದೇಶದ ಉಸ್ಮಾನ್ ಇವರಿಗೆ ನಕಲಿ ದಾಖಲಾತಿ ಹಾಗೂ ಉದ್ಯೋಗಕ್ಕೆ ಸೇರಲು ಸಹಾಯ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇವರನ್ನೂ ಪ್ರಮುಖ ಆರೋಪಿಗಳೆಂದು ಪರಿಗಣಿಸಿದ್ದು, ಎಫ್ಐಆರ್‌ನಲ್ಲಿ ಸೇರಿಸಲಾಗಿದೆ.
ಪೊಲೀಸರು ಆರೋಪಿಗಳನ್ನು ಬಂಧಿಸಿದ ಅನಂತರ ಅಚ್ಚರಿಯಾಗಿದೆ. ಆತಂಕದ ಜತೆಗೆ ನಾವೂ ಎಚ್ಚರ ವಹಿಸಬೇಕಿದೆ. ಪೊಲೀಸ್ ಮತ್ತು ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹೊರ ರಾಜ್ಯಗಳ ಕಾರ್ಮಿಕರ ದಾಖಲಾತಿಗಳ ವಾಸ್ತವಾಂಶ ಅರಿಯಬೇಕಿದೆ ಎನ್ನುತ್ತಾರೆ ಕೆಲವು ಸ್ಥಳೀಯರು.
ಬಾಡಿಗೆ ಮನೆಯಲ್ಲಿ ತಂಗಿದ್ದರು :
ಮಲ್ಪೆಯಿಂದ ಸುಮಾರು ಐದು ಕಿ.ಮೀ. ದೂರವಿರುವ ಕೆಮ್ಮಣ್ಣು, ನೇಜಾರಿನಲ್ಲಿ ಪ್ರತ್ಯೇಕ ಬಾಡಿಗೆ ಮನೆಗಳಲ್ಲಿ ಆರೋಪಿಗಳೆಲ್ಲರೂ ವಾಸವಿದ್ದರು. ಒಬ್ಬ ಆರೋಪಿ 3 ವರ್ಷ, ಇನ್ನೊಬ್ಬ 2 ವರ್ಷಗಳಿಂದ ಇಲ್ಲಿ ನೆಲೆಸಿದ್ದಾಗಿ ಪೊಲೀಸರಲ್ಲಿ ತಿಳಿಸಿದ್ದಾರೆ. ಇವರಿಗೆ ಬಾಡಿಗೆ ನೀಡಿದ ಮನೆಯ ಮಾಲಕರನ್ನು ಕೂಡ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಸಹಕರಿಸಿದವರಿಗಾಗಿ ಪೊಲೀಸರ ಶೋಧ:
ಎಲ್ಲ ಏಳು ಮಂದಿ ಆರೋಪಿಗಳು ತಮಗೆ ನಕಲಿ ಆಧಾರ್ ಕಾರ್ಡ್ ಒದಗಿಸಲು ಮತ್ತು ಉದ್ಯೋಗ ಅರಸಿ ಇಲ್ಲಿಗೆ ಬರಲು ಇಬ್ಬರು ಸಹಕರಿಸಿದ್ದಾರೆ ಎಂದು ಪೊಲೀಸರಲ್ಲಿ ಬಾಯಿಬಿಟ್ಟಿದ್ದಾರೆ. ಈ ಇಬ್ಬರ ಹೆಸರನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಸೇರಿಸಿದ್ದು, ಈ ಇಬ್ಬರ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.