Advertisement

ಎನ್‌ಸಿಸಿ ತರಬೇತಿ ಕಡ್ಡಾಯಗೊಳಿಸಿ

05:21 PM Sep 24, 2018 | |

ಚಿಕ್ಕಮಗಳೂರು: ಪದವಿ ವಿದ್ಯಾರ್ಥಿಗಳಿಗೆ ಎನ್‌ಸಿಸಿ ತರಬೇತಿ ಕಡ್ಡಾಯಗೊಳಿಸಬೇಕೆಂದು ಶಿಕ್ಷಣ ತಜ್ಞ ಬಿ.ಎಚ್‌. ನರೇಂದ್ರ ಪೈ ಹೇಳಿದರು. ಎನ್‌ಸಿಸಿ 15 ಕರ್ನಾಟಕ ಬೆಟಾಲಿಯನ್‌ ನಗರದ ಐಡಿಎಸ್‌ಜಿ ಸರ್ಕಾರಿ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ವಿಭಾಗೀಯ ಸಿಎಟಿ ಕ್ಯಾಂಪ್‌ ಮುಕ್ತಾಯ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.

Advertisement

ಯುವಸಮುದಾಯದಲ್ಲಿ ಶಿಸ್ತು ಮತ್ತು ಜೀವನ ಮೌಲ್ಯಗಳು ಕಡಿಮೆಯಾಗಿರುವ ಈ ಸಂದರ್ಭದಲ್ಲಿ ಮೂರು ವರ್ಷದ ಪದವಿ ವ್ಯಾಸಂಗದ ಅವಧಿಯಲ್ಲಿ ಕನಿಷ್ಟ ಒಂದು ವರ್ಷವಾದರೂ ಎನ್‌ಸಿಸಿ ತರಬೇತಿ ಕಡ್ಡಾಯಗೊಳಿಸುವುದು ಸೂಕ್ತ. ಇದರಿಂದ ಅವರ ಬದುಕಿಗೊಂದು ದೃಷ್ಟಿಕೋನ ನೀಡಿದಂತಾಗುತ್ತದೆ. ದೇಶಭಕ್ತಿ, ಸಾಮಾಜಿಕ ಕಾಳಜಿ, ಉತ್ತಮ ನೇತೃತ್ವ, ಸೇವಾ ಮನೋಭಾವ, ಶಿಸ್ತಿನ ಜೀವನ ಕ್ರಮವನ್ನು ಎನ್‌ಸಿಸಿ ಕಲಿಸುವ ಮೂಲಕ ಸಾರ್ಥಕ ಕೆಲಸ ಮಾಡುತ್ತಿದೆ ಎಂದರು. 

ಎನ್‌ಸಿಸಿ 15 ಕರ್ನಾಟಕ ಬೆಟಾಲಿಯನ್‌ ಹಾಸನ ಕಮಾಂಡಿಂಗ್‌ ಆಫಿಸರ್‌ ಡಿ.ಕೆ.ಸಿಂಗ್‌ ದೇವೊ ಅಧ್ಯಕ್ಷತೆವಹಿಸಿ ಮಾತನಾಡಿ, ಬಿ ಮತ್ತು ಸಿ ಪ್ರಮಾಣಪತ್ರ ಹೊಂದಿರುವ 600ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದಾರೆ. ಶಿಸ್ತು, ನಾಯಕತ್ವಗುಣ, ನಡತೆ, ಸ್ವಾರ್ಥ ರಹಿತಸೇವೆ, ಸಾಹಸದಂತಹ ಪ್ರವೃತ್ತಿಯನ್ನು ದೇಶ ನಿರ್ಮಾಣ ಕಾರ್ಯದಲ್ಲಿ ಬಳಸಿಕೊಳ್ಳುವ ಬಗ್ಗೆ ತರಬೇತಿ ನೀಡಲಾಗಿದೆ. ನೇತ್ರ ಶಿಬಿರ, ರಕ್ತದಾನ ಶಿಬಿರ ಆಯೋಜಿಸಿದ್ದು, ಬಂದೂಕು ತರಬೇತಿ, ಸೇನಾ ಕವಾಯಿತ್‌, ಪಥಸಂಚಲನ, ಸಾಹಸ ಕ್ರೀಡೆ, ಆರ್ಥಿಕ ಸಾಕ್ಷರತೆ, ಸ್ವತ್ಛಭಾರತದ ಆಂದೋಲನ ಕುರಿತಂತೆ ವಿಶೇಷ ತರಬೇತಿ ನೀಡಲಾಗಿದೆ ಎಂದರು.

ಎನ್‌ಸಿಸಿ ತರಬೇತಿಯನ್ನು ಮತ್ತಷ್ಟು ಸುಸಜ್ಜಿತಗೊಳಿಸುವ ಹಿನ್ನಲೆಯಲ್ಲಿ ರಾಜ್ಯಸರ್ಕಾರ 5ಕೋಟಿ ರೂ.ವೆಚ್ಚದಲ್ಲಿ ಹಾಸನದಲ್ಲಿ ವಿಶೇಷ ಕಟ್ಟಡ ಸಂಕೀರ್ಣವನ್ನು ನಿರ್ಮಿಸಲಿದೆ. ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲಾವ್ಯಾಪ್ತಿಯನ್ನೊಳಗೊಂಡಿರುವ ಎನ್‌ಸಿಸಿ 15ಕರ್ನಾಟಕ ಬೆಟಾಲಿಯನ್‌ಗೆ ಈ ಹಿಂದೆ ಹಾಸನದ ಆರ್‌.ಸಿ.ರಸ್ತೆಯಲ್ಲಿ 35ಗುಂಟೆ ಜಾಗವನ್ನು ಮಂಜೂರು ಮಾಡಲಾಗಿತ್ತು. ಇದೇ ಸ್ಥಳದಲ್ಲಿ ತಾತ್ಕಾಲಿಕವಾದ ಚಟುವಟಿಕೆ ಕಚೇರಿ ಹೊಂದಿದ್ದು, ಸಿಎಟಿಸಿ ಸೇರಿದಂತೆ ವಸತಿ ಶಿಬಿರಗಳನ್ನು ಬೇರೆ ಸ್ಥಳಗಳಲ್ಲಿ ಆಯೋಜಿಸುವುದು ಅನಿವಾರ್ಯವಾಗಿತ್ತು. ಸಚಿವ ರೇವಣ್ಣ ಅವರ ಆಸಕ್ತಿಯಿಂದಾಗಿ 5ಕೋಟಿ ರೂ. ವೆಚ್ಚದ ಬೃಹತ್‌ ಕಟ್ಟಡ ಸಂಕೀರ್ಣಕ್ಕೆ ಮುಖ್ಯಮಂತ್ರಿಗಳು ಶಿಲಾನ್ಯಾಸ ನಡೆಸುತ್ತಿದ್ದಾರೆ ಎಂದರು. 

ಐಡಿಎಸ್‌ಜಿ ಸರ್ಕಾರಿ ಕಾಲೇಜಿನ ಎನ್‌ಸಿಸಿ ಅಧಿಕಾರಿ ಲೆಪ್ಟಿನೆಂಟ್‌ ಗುರುಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಚಿಕ್ಕಮಗಳೂರು, ಹಾಸನ ಮತ್ತು ಮೈಸೂರು ಜಿಲ್ಲೆಯ ಜಿಲ್ಲಾವ್ಯಾಪ್ತಿ ಒಳಗೊಂಡ ಕಂಬೈಂಡ್‌ ಆ್ಯನುವಲ್‌ ಟ್ರೈನಿಂಗ್‌ಕ್ಯಾಂಪ್‌(ಸಿಎಟಿಸಿ) 10ದಿನಗಳ ವಸತಿ ಶಿಬಿರ ಯಶಸ್ವಿಯಾಗಿ ನಡೆದಿದೆ. ಸಿನಿಯರ್‌ ಡಿವಿಜನ್‌ನ 186, ಸಿನಿಯರ್‌ ವಿಂಗ್‌ನ 109, ಜ್ಯೂನಿಯರ್‌ ಡಿವಿಜನ್‌ನ 161 ಮತ್ತು ಜ್ಯೂನಿಯರ್‌ ವಿಂಗ್‌ನ 144 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ ಎಂದು ಹೇಳಿದರು. 

Advertisement

ಶಿಬಿರದಲ್ಲಿ ಹಾಡು, ನೃತ್ಯ, ಪಥ ಸಂಚಲನ ಹಾಗೂ ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಿದ್ದು ವಿಜೇತರಿಗೆ ರೋಟರಿ ಅಧ್ಯಕ್ಷ ಅಭಿಜಿತ್‌ ಪೈ ಮತ್ತು ಐಡಿಎಸ್‌ಜಿ ಸರ್ಕಾರಿ ಕಾಲೇಜು ಪ್ರಭಾರಿ ಪ್ರಾಂಶುಪಾಲ ನಟರಾಜ್‌ ಬಹುಮಾನ ವಿತರಿಸಿದರು. ಲೆ.ಕಮಾಡೆಂಟ್‌ ರಿಪೋನ್‌ತ್ರಿಪಾಠಿ ಸ್ವಾಗತಿಸಿದರು. ಪ್ರೊ| ಕುಸುಮಾ ವಂದಿಸಿದರು. ಶಿಬಿರಾರ್ಥಿಗಳಿಂದ ವಿಶೇಷ ಕ್ಯಾಂಪ್‌ಫೈರ್‌-ಸಾಂಸ್ಕೃತಿ ಕಾರ್ಯಕ್ರಮ ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next