ಬ್ರಹ್ಮಾವರ: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಕಳೆದ ಸಾಲಿನಲ್ಲಿ ರೂ.85ಲಕ್ಷಕ್ಕೂ ಅಧಿಕ ವಿದ್ಯಾರ್ಥಿವೇತನ ಮತ್ತು 25ಲಕ್ಷಕ್ಕೂ ಮಿಕ್ಕಿ ವಿಮಾ ಪರಿಹಾರ ಮೊತ್ತವನ್ನು ವಿತರಿಸಲಾಗಿತ್ತು ಎಂದು ಒಕ್ಕೂಟದ ಅಧ್ಯಕ್ಷ ಕೊಡವೂರು ರವಿರಾಜ್ ಹೆಗ್ಡೆ ಹೇಳಿದರು.
ಅವರು ಮಂದಾರ್ತಿ ಶೇಡಿಕೊಡ್ಲು ದುರ್ಗಾ ಸಭಾಭವನದಲ್ಲಿ ಶನಿವಾರ ದಕ್ಷಿಣಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಹಾಗೂ ಭಾರತೀಯ ಜೀವ ವಿಮಾ ನಿಗಮದ ಸಂಯುಕ್ತ ಆಶ್ರಯದಲ್ಲಿ ಜನಶ್ರೀ ವಿಮಾ ಯೋಜನೆಯಡಿ ಶಿûಾ ಸಹಯೋಗ ಯೋಜನೆಯಲ್ಲಿ ಒಕ್ಕೂಟದ ವಿದ್ಯಾರ್ಥಿಗಳಿಗೆ ಸುಮಾರು 3,85,000 ರೂ.ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದರು.
ಉತ್ತಮ ಸಂಸ್ಕೃತಿ, ಸಂಸ್ಕಾರದಿಂದ ವಿದ್ಯಾರ್ಥಿಗಳಿಗೆ ಮುಂದಿನ ಗುರಿ ತಲುಪಲು ಸಾಧ್ಯ ಎಂದರು.
ಜನಶ್ರೀ ಯೋಜನೆ ಸಂಘಗಳ ಸದಸ್ಯರನ್ನು ವಿಮಾ ಯೋಜನೆಗೆ ಅಳವಡಿಸಿಕೊಂಡು ಸಾಮಾಜಿಕ ಭದ್ರತೆ ಒದಗಿಸಿಕೊಡುತ್ತಿದೆ. ಈ ಯೋಜನೆಯಡಿ ಸಾಮಾನ್ಯ ಮರಣಕ್ಕೆ 35ಸಾವಿರ, ಅನಿರೀಕ್ಷಿತ ಸಾವಿಗೆ 75ಸಾವಿರ ಪರಿಹಾರ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು. ಮಂಗಳೂರು ದಕ್ಷಿಣಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಮಾಜಿ ಅಧ್ಯಕ್ಷ ಶೇಡಿಕೊಡ್ಲು ವಿಠಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಒಕ್ಕೂಟದ ನಿರ್ದೇಶಕ ಅಶೋಕ್ ಕುಮಾರ್ ಶೆಟ್ಟಿ, ಸಹಾಯಕ ವ್ಯವಸ್ಥಾಪಕ ಶಿವಪ್ಪ, ವಿವಿಧ ಸಂಘಗಳ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಭಾರತಿ ಶೆಟ್ಟಿ ಸ್ವಾಗತಿಸಿದರು. ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಸುಧಾಕರ್ ಕಾರ್ಯಕ್ರಮ ನಿರೂಪಿಸಿದರು. ಮಂದಾರ್ತಿ ಹಾಲು ಉತ್ಪಾದಕರ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್. ಜಯಶೀಲ ಶೆಟ್ಟಿ ವಂದಿಸಿದರು.