ಬದುಕಿನಲಿ ಏನೇ ಎದುರಾದರೂ, ನಿನ್ನ ಮಾತು ನಿಲ್ಲದಿರಲಿ. ನಗುವಿಗೆ ಕೊರತೆಯಾಗದಿರಲಿ ಗೆಳತಿ. ನೀ ಎಲ್ಲೆ ಹೋದರೂ ಹಿಂದೆ ಮುಂದೆ ಅರಸಿ ಬರುವೆ. ನೂರು ಜನ್ಮ ಸಾಲದು ನೀ ನೀಡಿದ ಪ್ರೀತಿಯ ಮರಳಿ ನಿನಗೆ ನೀಡಲು.
ನಿಜ ಹೇಳಬೇಕು ಅಂದರೆ, ನಾನಂದುಕೊಂಡಿದ್ದ ಜೀವನ ನನ್ನದಾಗಲಿಲ್ಲ. ನನಗೇನು ಬೇಡವಾಗಿತ್ತೋ ಅದೇ ನನ್ನ ಜೀವನದ ಒಡನಾಡಿಯಾಯಿತು. ಆಗ, ಒಬ್ಬಂಟಿಯಾಗಿದ್ದ ಬದುಕಿಗೆ ಜೊತೆಯಾಗಿ ಬಿಟ್ಟಳು ಅವಳು. ಪ್ರೀತಿಯ ಬಲೆಯನ್ನು ಬೀಸಿದಳು. ಬರೀ ಪ್ರೀತಿಯಲ್ಲ, ಮಮತೆಯ ಒಲವಿನ ನಿಷ್ಕಲ್ಮಷ ಪ್ರೀತಿಯದು.
ನಿಜ.. ಈ ಬದುಕೇ ಹೀಗೆ, ಪ್ರೀತಿ ಎಂಬುದು ಅಲೆಯೋ ಬಿರುಗಾಳಿಯೋ ಎಂಬ ಅರಿಯದ ವಯಸ್ಸದು. ಆದರೆ, ಅವಳು ನನ್ನ ಬದುಕಿಗೆ ದೀಪದಂತೆ ಬಂದು ಬೆಳಕಾದಳು. ಸೋತಾಗ ಸಾಂತ್ವನ ತುಂಬಿ, ಗೆದ್ದಾಗ ನಕ್ಕು ನಲಿಯುತ್ತಿದ್ದ. ಮುದ್ದು ಮನಸ್ಸಿನ ಪೆದ್ದು ಹುಡುಗಿ ಅವಳು.
ನಂದನವನದಲ್ಲಿ ಅರಳುತ್ತಿರುವ ನಿತ್ಯ ಪುಷ್ಟವೇ, ನನ್ನ ಮನದ ಕದವ ತೆರೆಸಿ, ಪ್ರೀತಿಯೆಂಬ ದೀಪದ ಪ್ರಜ್ವಲಿಸಿ, ಅದು ಆರದಂತೆ ಭಾವನೆಗಳೆಂಬ ತೈಲವ ಸುರಿಸಿ, ಮಾತೆಂಬ ಬೀಗದಿಂದ ಬಂಧಿಸಿರುವೆಯಲ್ಲಾ ಗೆಳತಿ? ನನ್ನೊಳಗಿನ ಮೌನವೇ ನಿನ್ನ ಪಟಪಟ ಮಾತಿಗೆ ಕಾರಣವಾಗಿರಬಹುದೇನೋ ಗೊತ್ತಿಲ್ಲ. ನೀ ಎಷ್ಟೇ ಕೋಪಿಸಿಕೊಂಡರೂ ನಾ ನಕ್ಕರೆ ಸಾಕಲ್ಲವೇ? ಆ ಕೋಪ ಬಾನಾಚೆ ಹೋಗಿ ಮಾಯವಾಗಲು…
ಸಮಯವಿಲ್ಲವೆಂದು ನೆಪವೊ\ಡ್ಡುವ ನನಗೆ, ಇದ್ದ ಸಮಯವನ್ನೇ ಮೀಸಲಿಡುವ ನಿನ್ನನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗಲಿಲ್ಲವಲ್ಲ. ಕ್ಷಮಿಸುವೆಯಾ ಈ ಮುಂಗೋಪಿ ಹುಡುಗನನ್ನು. ಮಲ್ಲಿಗೆಯ ಮೇಲೆ ಯಾಕಷ್ಟು ಮೋಹ ನಿನಗೆ ನಾ ಕಾಣೇ. ಎನ್ನ ಮನದ ಮಿಡಿತಕ್ಕೆ ಒಲಿದ ರಾಧೆ ನೀನಲ್ಲವೇ? ನೋವಿರಲಿ ನಲಿವಿರಲಿ ಮನ ತುಂಬ ನಕ್ಕು, ನಿನ್ನ ನೋವ ಮರೆಮಾಚಿ ಎನ್ನ ನಗೆಗಡಲಲಿ ಈಜಾಡುವಂತೆ ಮಾಡುವೆಯಲ್ಲ !
ಬದುಕಿನಲಿ ಏನೇ ಎದುರಾದರೂ, ನಿನ್ನ ಮಾತು ನಿಲ್ಲದಿರಲಿ. ನಗುವಿಗೆ ಕೊರತೆಯಾಗದಿರಲಿ ಗೆಳತಿ. ನೀ ಎಲ್ಲೆ ಹೋದರೂ ಹಿಂದೆ ಮುಂದೆ ಅರಸಿ ಬರುವೆ. ನೂರು ಜನ್ಮ ಸಾಲದು ನೀ ನೀಡಿದ ಪ್ರೀತಿಯ ಮರಳಿ ನಿನಗೆ ನೀಡಲು. ಅರಿತೋ ಅರಿಯದೆಯೋ ತಪ್ಪುಗಳ ಮೇಲೆ ತಪ್ಪು ಮಾಡಿ ಮುಗ್ಧ ಮನಸ್ಸನ್ನು ನೋಯಿಸುವೆ.
ಕ್ಷಮಿಸು ಗೆಳತಿ ಈ ಕೋಪಿಷ್ಟನನ್ನು.
ನನ್ನ ಎದೆಯ ರಂಗದಲಿ ನಿನ್ನದೇ ಹೆಜ್ಜೆಗಳ ಗುರುತು. ನಾ ಹೇಗೆ ಬಾಳಲಿ ಹೇಳು ನಿನ್ನ ಮರೆತು?
ನಂದನ್ ಕುಮಾರ್