Advertisement
“ಉದಯವಾಣಿ’ ಜತೆಗೆ ರಾಮಮಂದಿರ ನಿರ್ಮಾಣ ಟ್ರಸ್ಟ್‌ನ ಸದಸ್ಯರೂ ಆಗಿರುವ ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥರ ಮುಕ್ತ ಮಾತು
Related Articles
ಶ್ರೀರಾಮ ದೇವರು ಸದ್ಗುಣಗಳ ಗಣಿ. ವಾಲ್ಮೀಕಿ ಮಹರ್ಷಿಗಳು ಮತ್ತು ನಾರದರು ಶ್ರೇಷ್ಠ ಗುಣಗಳ ಬಗ್ಗೆ ಚರ್ಚೆ ನಡೆಸುತ್ತಿ ರುವ ಸಂದರ್ಭವದು. ಮಹರ್ಷಿ ವಾಲ್ಮೀಕಿ ಯವರು ಒಂದಿಷ್ಟು ಗುಣಗಳನ್ನು ಪಟ್ಟಿ ಮಾಡುತ್ತಾರೆ. ಅನಂತರ ನಾರದರಲ್ಲಿ ಇಂತಹ ಗುಣಗಳಿರುವ ಯಾರಾದರೂ ಇದ್ದಾರೆಯೇ ಎಂದು ಕೇಳುತ್ತಾರೆ. ಅದಕ್ಕೆ ನಾರದರು ಆ ಪಟ್ಟಿಗೆ ಇನ್ನೂ ಒಂದಿಷ್ಟು ಸದ್ಗುಣಗಳನ್ನು ಸೇರಿಸಿ, ಈ ಎಲ್ಲ ಸದ್ಗುಣ ಗಳನ್ನು ಒಳಗೊಂಡಿರುವ ಒಬ್ಬ ವ್ಯಕ್ತಿ ಇದ್ದಾನೆ.ಅವನೇ ಶ್ರೀ ರಾಮಚಂದ್ರ ಎನ್ನುತ್ತಾರೆ. “ರಾಮೋ ವಿಗ್ರಹವಾನ್ ಧರ್ಮಃ’ ಎಂಬಂತೆ ಇಲ್ಲಿ ಧರ್ಮವೆಂದರೆ ಒಳ್ಳೆಯ ಗುಣಗಳು. ಶ್ರೀ ರಾಮನು ಸತ್ಯವಂತಿಕೆ, ಸದಾಚಾರದ ಮೂರ್ತರೂಪ. ನಮ್ಮ ಯಾವುದೇ ಕಾರ್ಯದಿಂದ ಇನ್ನೊಬ್ಬರಿಗೆ ಸಮಸ್ಯೆ, ಸಂಕಷ್ಟ ಎದುರಾಗಬಾರದು. ನಮ್ಮ ಸುಖ ಸಂತೋಷಕ್ಕೆ ಮಾಡುವ ಕಾರ್ಯದಿಂದ ಇತರರಿಗೆ ಸಮಸ್ಯೆಯಾದರೆ ಇತರರು ಅವರ ಸಂತೋಷಕ್ಕಾಗಿ ಮಾಡುವ ಕಾರ್ಯದಿಂದ ಖಂಡಿತ ನಮಗೂ ಸಮಸ್ಯೆಯಾಗಬಹುದು ಎನ್ನುವ ಆಲೋಚನೆಯ ಹಂದರವದು. ಇಂತಹ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಸೂಕ್ತ. ರಾಮಚಂದ್ರನ ಸದ್ಗುಣಗಳಿಗೆ ಅನೇಕ ನಿದರ್ಶ ನಗಳಿವೆ. ಇಲ್ಲೊಂದು ನೋಡಿ. ರಾವಣನ ಸಂಹಾರದ ಅನಂತರ ಸ್ವರ್ಣ ಲಂಕೆಯನ್ನು ನೋಡಿ ಲಕ್ಷ್ಮಣನು ಅಣ್ಣನಾದ ರಾಮನಲ್ಲಿ ಹೀಗೆ ಹೇಳುತ್ತಾನೆ, “ನಾವು ಇಲ್ಲಿಯೇ ಇದ್ದುಬಿಡೋಣ’. ಅದಕ್ಕೆ ಪ್ರತಿಯಾಗಿ ಶ್ರೀರಾಮನು ಅಷ್ಟೇ ವಿನಯದಿಂದ ತಮ್ಮನಿಗೆ ಹೇಳುವ ಮಾತು ಇದು- “ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಅಂದರೆ ಹೆತ್ತ ತಾಯಿ, ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು. ಎಂಥ ಆದರ್ಶವಾದ ಮತ್ತು ಎಲ್ಲರೂ ಪಾಲಿಸಲೇಬೇಕಾದ ಮಾತಲ್ಲವೇ ಇದು! ಹೀಗಾಗಿಯೇ ರಾಮ ಭಕ್ತಿ ಬೇರೆಯಲ್ಲ ರಾಷ್ಟ್ರಭಕ್ತಿ ಬೇರೆಯಲ್ಲ. ಮಾತೃಭೂಮಿ, ದೇಶಪ್ರೇಮ ಮತ್ತು ಮಹಿಳೆಯರಿಗೆ ನೀಡಬೇಕಾದ ಗೌರವಕ್ಕೂ ಶ್ರೀ ರಾಮನೇ ಶ್ರೇಷ್ಠ ಆದರ್ಶ. ಹಾಗಾಗಿಯೇ ಅವನು ಭರತಭೂಮಿಯ, ಭಾರತೀಯರ ಅಸ್ಮಿತೆ.
Advertisement
ಮಂದಿರ ಕಟ್ಟುವುದಕ್ಕಿಂತ ಉಳಿಸಿಕೊಳ್ಳುವುದು ಮುಖ್ಯ ಎಂದು ನೀವು ಆಗಾಗ್ಗೆ ಹೇಳುತ್ತಿರುತ್ತೀರಿ. ಅದರ ಸೂಕ್ಷ್ಮಾರ್ಥವೇನು?ಭಾರತೀಯರ ಶತಮಾನಗಳ ಬೇಡಿಕೆ/ಕೋರಿಕೆ/ ಪ್ರಾರ್ಥನೆ ಈಗ ಈಡೇರುತ್ತಿದೆ, ಭೌತಿಕವಾಗಿ. ಇದು ಕ್ರಾಂತಿಯ ಹೋರಾಟದಿಂದ ಅಷ್ಟೇ ಅಲ್ಲ. ದೇಶದ ಸಂವಿಧಾನಬದ್ಧವಾದ ನ್ಯಾಯಾಲಯದ ತೀರ್ಮಾನ ದಂತೆಯೇ ರಾಮಮಂದಿರ ನಿರ್ಮಾಣವಾಗುತ್ತಿದೆ. ಸರಕಾರದ ಅನುದಾನವಿಲ್ಲದೆ, ಭಕ್ತರ ತನು-ಮನ- ಧನಗಳ ಬಲದಿಂದ ಮಂದಿರ ನಿರ್ಮಾಣವಂತೂ ಆಗಿಯೇ ಬಿಟ್ಟಿತು. ಈಗ ಭಾರತೀಯರ ಜವಾ ಬ್ದಾರಿಯೂ ಹೆಚ್ಚಾಗಿದೆ. ಇದು ಶಾಶ್ವತವಾಗಿ ಉಳಿಯು ವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಗುರುತರ ಹೊಣೆ. ಇದಕ್ಕೆ ಸಂಸ್ಕಾರಯುತ ಪೀಳಿಗೆಯನ್ನು ರೂಪಿಸ ಬೇಕಿದೆ. ಮಕ್ಕಳಿಗೆ ಸಂಸ್ಕಾರಯುತ ಬದುಕನ್ನು ಮತ್ತು ಸಂಸ್ಕೃತಿಯ ಕಲ್ಪನೆಯನ್ನು ಮನೆಯಿಂದಲೇ ಕಲಿಸ ಬೇಕು. ಈ ಕ್ರಮ ಮಕ್ಕಳಿಗೆ ಹೆಸರಿಡುವ ನೆಲೆಯಿಂದಲೇ ಅಥವಾ ಪ್ರಕ್ರಿಯೆಯಿಂದಲೇ ಆರಂಭವಾಗಬೇಕು. ಪಾಶ್ಚಾತ್ಯ ಪ್ರಭಾವಕ್ಕೆ ಒಳಗಾಗಿ ನಮ್ಮ ಸಂಸ್ಕೃತಿಗೆ ಒಗ್ಗದ, ಭಾಗವಾಗದ, ಅರ್ಥ ಹೀನ ಎಂದೆನಿಸಿಬಿಡ ಬಹುದಾದಂಥ ಹೆಸರುಗಳನ್ನು ಮಕ್ಕಳಿಗೆ ಇಡಬಾರದು. ಇಟ್ಟಿದ್ದರೆ, ಮರು ನಾಮಕರಣ ಮಾಡಿ ನಮ್ಮ ಸಂಸ್ಕೃತಿ ಯನ್ನು ಪ್ರತಿನಿಧಿಸುವಂತ ಹೆಸರುಗಳನ್ನಿಡಿ. ಇದಕ್ಕಾಗಿ ಒಂದು ದೊಡ್ಡ ಅಭಿಯಾನವೂ ನಡೆಯಬೇಕಾದ ಅಗತ್ಯವಿದೆ. ಮೊದಲು ನಾವು ನಾವಾಗಿ (ನಮ್ಮ ಸಂಸ್ಕೃತಿಯ ಭಾಗವಾಗಿ) ಉಳಿದರೆ ಮಾತ್ರ ನಾವು ಕಟ್ಟಿದ ಮಂದಿರವೂ ಮಂದಿರವಾಗಿ ಉಳಿಯುತ್ತದೆ. ನಮ್ಮ ಸಂಸ್ಕೃತಿಯ ಪ್ರತಿನಿಧಿಸುವ ರೂಪವಾಗಿ ರಾರಾಜಿಸುತ್ತದೆ. ವ್ಯಕ್ತಿಗಳು ಶಾಶ್ವತವಲ್ಲ. ಪೀಳಿಗೆಯಿಂದ ಪೀಳಿಗೆ ಬದಲಾಗಬಹುದು. ಸಂಸ್ಕಾರ ಎಂಬುದನ್ನು ಸರಿಯಾಗಿ ನಾವು ಕಲಿಸಿದರೆ, ನಮ್ಮ ಸಂಸ್ಕೃತಿಯ ಅವಿಚ್ಛಿನ್ನ ಭಾಗವಾಗಿ ನಮ್ಮ ಮಕ್ಕಳನ್ನು ರೂಪಿಸಿದರೆ ಸಂಸ್ಕಾರ, ಸಂಸ್ಕೃತಿ ಹಾಗೂ ಮಂದಿರ ಭವಿಷ್ಯದ ತಲೆ ತಲಾಂತರಗಳಿಗೆ ಕುರುಹಾಗಿ ಉಳಿಯಬಲ್ಲದು. ಪ್ರೇರಣೆಯಾಗಿರಬಲ್ಲದು. ಮಂದಿರವನ್ನು ಮಂದಿರವಾಗಿ ಉಳಿಸಿಕೊಳ್ಳುವುದೆಂದರೆ ಆ ಅರ್ಥ. ಅದು ಕೂಡಲೇ ಆಗಬೇಕಾದ ಕಾರ್ಯವೂ ಹೌದು. ಮಂದಿರ ನಿರ್ಮಾಣದ ಮೂಲಕ ರಾಮರಾಜ್ಯ ಸಾಕಾರವಾಗುವುದೇ?
ಶ್ರೀ ರಾಮನ ಆಳ್ವಿಕೆಯಲ್ಲಿ ರಾಮರಾಜ್ಯವಿತ್ತು. ಅದು ರಾಜನಾಳ್ವಿಕೆ. ಆದರ್ಶ ಪರಂಪರೆಯ ಭಾಗ. ಆಗ ಎಲ್ಲವೂ ಸಾಕಾರಗೊಂಡಿತ್ತು. ಈಗ ದೇಶದಲ್ಲಿರುವುದು ಪ್ರಜಾಪ್ರಭುತ್ವದ ಆಡಳಿತ. ಆದ ಕಾರಣ ಈ ಪ್ರಭುತ್ವದಲ್ಲಿ ಪ್ರಜೆಗಳು ಶ್ರೀ ರಾಮನಾದರೆ ರಾಮ ರಾಜ್ಯ ಆಗುವುದು ಮತ್ತಷ್ಟು ಸುಲಭ. ಈ ನಿಟ್ಟಿನಲ್ಲಿ ದೇಶ ವ್ಯಾಪಿ ರಾಮರಾಜ್ಯದ ಅಭಿಯಾನವನ್ನೂ ನಡೆಸಬೇಕಿದೆ. ಶ್ರೀರಾಮ ಮಂದಿರದಲ್ಲಿ ಯಾವುದೇ ಸೇವೆ ಇರದು. ಭಕ್ತರಿಗೆ ಪ್ರಸಾದವನ್ನು ಉಚಿತವಾಗಿಯೇ ವಿತರಿಸ ಲಾಗುತ್ತದೆ. ಹೀಗಾಗಿ ನಾವೆಲ್ಲರೂ ನಮ್ಮಿಂದಾಗುವ ಸೇವೆಯನ್ನು ವಿಶಿಷ್ಟವಾಗಿ ಸಮಾಜದ ಒಳಿತಿಗೆ ವಿನಿಯೋಗಿಸಬೇಕು. ಇದೂ ಶ್ರೀರಾಮನ ಸೇವೆಯೇ. ಉದಾಹರಣೆಗೆ ವಿಶೇಷವಾಗಿ ಮನೆ ಇಲ್ಲದ ನಿರ್ಗ ತಿಕರಿಗೆ ಮನೆ ನಿರ್ಮಿಸಿ ಕೊಡಬಹುದು. ಇಂಥ ಹಲವು ಪರಿಕಲ್ಪನೆಗಳನ್ನು ನಮ್ಮ ಸೇವೆ ಮೂಲಕ ಸಾಧ್ಯವಾಗಿಸಬೇಕು. ಈ ಮೂಲಕ ರಾಮರಾಜ್ಯದ ಪರಿಕಲ್ಪನೆಯನ್ನು ಸಾಕಾರಗೊಳಿಸಬಹುದು. ಇದಕ್ಕಾಗಿ ಜಿಲ್ಲಾಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ಆ ಸಮಿತಿಯ ಪದಾಧಿಕಾರಿಗಳು ಅಯೋಧ್ಯೆಗೆ ಬಂದು ಶ್ರೀ ರಾಮದೇವರ ಮುಂದೆ ರಾಮ ರಾಜ್ಯದ ಸಂಕಲ್ಪ ಮಾಡಿ ಸೇವಾ ಕಾರ್ಯ ಮುಂದುವರಿಸುವಂತೆ ಮಾಡಬೇಕು. ಆಗ ಶ್ರೀ ರಾಮನ ಆದರ್ಶ, ಭಾರತೀಯತೆ ಎರಡು ಸಾಕಾರವಾಗಲಿದೆ. ಅಯೋಧ್ಯೆಯಲ್ಲಿ ಸಾಕಾರಗೊಂಡಿರುವ ರಾಮ ಮಂದಿರ ಬಗ್ಗೆ ಏನನ್ನುತ್ತೀರಿ?
ಮಂದಿರ ನಿರ್ಮಾಣ ಜಾಗದ ಭೂತಳದಲ್ಲಿ ಮರಳು ಸಿಕ್ಕಿದ್ದರಿಂದ ತಳಪಾಯವನ್ನು ಸುಭದ್ರಗೊಳಿಸಬೇಕಾದ, ಗಟ್ಟಿಮಾಡಬೇಕಾದ ಅನಿವಾರ್ಯ ಎದುರಾಯಿತು. ಸುಮಾರು ಒಂದು ಎಕ್ರೆ ಪ್ರದೇಶವನ್ನು ಅಗೆದು ಭದ್ರವಾದ ತಳಪಾಯ ಹಾಕಲಾಯಿತು. ಇದೇ ಸವಾಲಿನ ಹಾಗೂ ಸಮಯ ತೆಗೆದುಕೊಳ್ಳುವ ಕೆಲಸ. ಈ ಕಾರ್ಯ ಈಡೇರಲು ನಮಗೆ ಸರಿಸುಮಾರು 1 ವರ್ಷ ತಗಲಿತು. ಹಾಗಾಗಿ ಶ್ರೀ ರಾಮಮಂದಿರ ನಿರ್ಮಾಣ ಕೆಲಸವೂ ಸ್ವಲ್ಪ ವಿಳಂಬವಾಯಿತು. ಈಗ ಮಂದಿರದ ಒಂದು ಹಂತ ಪೂರ್ಣಗೊಂಡಿದೆಯಷ್ಟೇ. ಒಂದು ಮತ್ತು ಎರಡನೇ ಮಹಡಿಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಸದೃಢತೆ, ಭದ್ರತೆ ಎಲ್ಲದಕ್ಕೂ ಆದ್ಯತೆ ನೀಡಲಾಗಿದೆ. ಉಳಿದಂತೆ ರಾಮ ಮಂದಿರದಲ್ಲಿ ರಾಮಾಯಣಕ್ಕೆ ಪೂರಕವಾದ ಹಲವು ಅಂಶಗಳು ಬೇರೆ ಬೇರೆ ಸ್ವರೂಪದಲ್ಲಿ ಪ್ರತಿಧ್ವನಿಸಲಿವೆ. ಋಷಿ ಮುನಿಗಳು, ವಿವಿಧ ದೇವರ ವಿಗ್ರಹಗಳ ಕೆತ್ತನೆಯೂ ಭರದಿಂದ ಸಾಗಿದೆ. ಇದೊಂದು ಸಂಪೂರ್ಣ ಶಿಲಾಮಯ ದೇವಸ್ಥಾನ. ಮಂದಿರ ನಿರ್ಮಾಣ ಪ್ರಕ್ರಿಯೆಯಲ್ಲಿ ವಾಸ್ತು ವಿನ್ಯಾಸ ಕೂಡ ಮುಖ್ಯ. ಈ ಹಿನ್ನೆಲೆಯಲ್ಲಿ ರಾಮನವಮಿಯಂದು ಸೂರ್ಯನ ಕಿರಣವು ಮಂದಿರದ ಒಳಗಿರುವ ಶ್ರೀರಾಮ ಮೂರ್ತಿಯನ್ನು ಸ್ಪರ್ಶಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇದೊಂದು ತಾಂತ್ರಿಕ ಹಾಗೂ ಧಾರ್ಮಿಕ ನೆಲೆಯ ಅತ್ಯದ್ಭುತ ರಚನೆ. ಹಾಗೆಯೇ ಮಾನವ ಸಂಕಲ್ಪ ಶಕ್ತಿಯ ಸಾಕಾರ ರೂಪವೂ ಹೌದು. ಅಯೋಧ್ಯೆಯಲ್ಲಿ ನಡೆಯುವ ಪೂಜಾಕಾರ್ಯಕ್ಕೆ ಇಂಥ ಸಂಪ್ರದಾಯವೆಂಬ ನಿರ್ದಿಷ್ಟತೆ ಇದೆಯೇ?
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರದಲ್ಲಿ ಜ. 22ರಂದು ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠೆಯೂ ನಡೆಯಲಿದೆ. ದಕ್ಷಿಣ ಭಾರತದ ಶೈಲಿ ಅಥವಾ ಉತ್ತರ ಭಾರತದ ಶೈಲಿ ಎನ್ನುವುದಕ್ಕಿಂತ ಅಯೋಧ್ಯೆಯಲ್ಲಿ ಈವರೆಗೆ ದೇವರಿಗೆ ಯಾವ ಸಂಪ್ರದಾಯದಂತೆ ಪೂಜೆ ನಡೆಯುತ್ತಿದೆಯೋ ಅದೇ ಮುಂದುವರಿಯಲಿದೆ. ಅದು ರಾಮಾನಂದ ಸಂಪ್ರದಾಯ. ಆ ಪದ್ಧತಿ ಯಂತೆಯೇ ನಿತ್ಯ ಪೂಜೆ ಪುನಸ್ಕಾರಗಳು ನಡೆಯಲಿವೆ. ಇದು ಪ್ರಾಣಪ್ರತಿಷ್ಠೆಯ ಅನಂತರವೂ ಮುಂದು ವರಿಯಲಿದೆ. ಏನಿದು ರಾಮಾನಂದ ಸಂಪ್ರದಾಯ?
ಉತ್ತರ ಭಾರತದಲ್ಲಿ ರಾಮಾನಂದ ಸಂಪ್ರದಾಯ ಎಂಬುದಿದೆ. ಉಡುಪಿಯಲ್ಲಿ ಮಧ್ವ ಪರಂಪರೆ ಇರುವಂತೆಯೇ ಉತ್ತರ ಭಾರತ ಪ್ರದೇಶದಲ್ಲಿ ರಾಮಾ ನಂದರು ಆರಂಭಿಸಿದ ಪೂಜಾ ಪರಂಪರೆಯಿದೆ. ಸ್ಮಾರ್ತ, ಶೈವ, ರಾಮಾನುಜ ಇತ್ಯಾದಿ ಸಂಪ್ರದಾಯ ಗಳಿದ್ದಂತೆಯೇ ಇದು ರಾಮಾನಂದರ ಪರಂಪರೆ. ಇದು ಅಂದಿನಿಂದಲೂ ಚಾಲ್ತಿಯಲ್ಲಿರುವ ಸಂಪ್ರದಾಯ. ಈ ತನಕವೂ ಅಯೋಧ್ಯೆಯಲ್ಲಿ ಅನುಸರಿಸಿರುವುದು ರಾಮಾನಂದ ಪರಂಪರೆಯ ಸಂಪ್ರದಾಯ. ಇದುವರೆಗೆ ಜಾರಿಯಲ್ಲಿರುವ ಪೂಜಾ ಪದ್ಧತಿ ಅಥವಾ ಸಂಪ್ರ ದಾಯವನ್ನು ಬದಲಿಸುವುದು ಬೇಡ ಎಂಬ ನಿರ್ಧಾರಕ್ಕೆ ಬರಲಾಯಿತು. ಅದರಂತೆ ಹಿಂದಿನ ಸಂಪ್ರದಾಯವನ್ನೇ ಮುಂದುವರಿಸುತ್ತೇವೆ. ಪ್ರಾಣಪ್ರತಿಷ್ಠೆ ಎಂಬುದನ್ನು ಸ್ವಲ್ಪ ವಿವರಿಸಿ?
ಅಯೋಧ್ಯೆಯಲ್ಲಿ ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠೆಗೆ ಈಗಾಗಲೇ ಮೂರ್ತಿ ಕೆತ್ತನೆ ಕಾರ್ಯ ಬಹು ಪಾಲು ಪೂರ್ಣಗೊಂಡಿದೆ. ಸದ್ಯ ಎಲ್ಲ ಮೂರ್ತಿಯು ಕೆತ್ತನೆಯ ಜಾಗದಲ್ಲಿಯೇ ಇವೆ. ಆಯ್ಕೆಯಾದ ಮೂರ್ತಿಯನ್ನು ಜ.17ರಂದು ಕೆತ್ತನೆ ಜಾಗದಿಂದ ಸರಯೂ ನದಿಗೆ ಕೊಂಡೊಯ್ದು ಸ್ನಾನ (ಶುದ್ಧ) ಮಾಡಿಸಲಾಗುವುದು. ಅಲ್ಲಿಂದ ಕಾರ್ಯಾರಂಭ. ಬಳಿಕ ಅಲ್ಲಿಂದ ಪುರ ಮೆರವಣಿಗೆ ಮೂಲಕ ಮಂದಿರಕ್ಕೆ ತರಲಾಗುತ್ತದೆ. ಜ.18ರಂದು ಶುಭ ಮುಹೂರ್ತದಲ್ಲಿ ಮೂರ್ತಿಯ ಸ್ಥಾಪನೆ ನಡೆಯಲಿದೆ. ಅನಂತರ ಮೂರು ದಿನ ಜಲಾಧಿವಾಸ, ಧಾನ್ಯಾಧಿವಾಸ ಹಾಗೂ ಶಯಾಧಿವಾಸ ನಡೆಯಲಿದೆ. ಜ.21ರಂದು ಪ್ರಾಣ ಪ್ರತಿಷ್ಠೆಗೆ ಬೇಕಾದ ಪೂರ್ವ ತಯಾರಿ ನಡೆಯಲಿದೆ. ಜ. 22ರಂದು ಪ್ರಾಣ ಪ್ರತಿಷ್ಠೆ ನಡೆಯಲಿದೆ. ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆಯಿಂದಲೇ ಹೋಮ, ಹವನ ಸಹಿತ ವಿವಿಧ ಧಾರ್ಮಿಕ ಕ್ರಮಗಳು ನಡೆ ಯಲಿವೆ. ಮಧ್ಯಾಹ್ನದ ಹೊತ್ತಿಗೆ ಮಂದಿರದ ಉದ್ಘಾಟನೆ ನೆರವೇರಲಿದೆ. ಪ್ರಾಣ ಪ್ರತಿಷ್ಠೆ ಎಂಬುದು ಸಂಪೂರ್ಣ ಧಾರ್ಮಿಕ ವಿಧಿ ವಿಧಾನಗಳ ಭಾಗ. ಶಿಲೆ ಅಥವಾ ವಿಗ್ರಹ ದೇವರಾಗಿಸುವ ಭಾಗ. ಪ್ರಾಣಪ್ರತಿಷ್ಠೆಯ ಅನಂತರ ಏನೇನು ಧಾರ್ಮಿಕ ಕಾರ್ಯಕ್ರಮ ಇರಲಿದೆ?
ಪ್ರಾಣಪ್ರತಿಷ್ಠೆ ಆದ ಅನಂತರದಲ್ಲಿ ಮುಂದಿನ 48 ದಿನಗಳ ಮಂಡಲೋತ್ಸವ ಜರಗಲಿದೆ. ಮಂಡಲೋತ್ಸ ವದಲ್ಲಿ ಮೊದಲ 44 ದಿನ ನಿತ್ಯವೂ ಹೋಮ, ಹವನದ ಜತೆಗೆ ಕಲಾಶಾಭಿಷೇಕ, ಪ್ರತಿಮೆಗೆ ತಣ್ತೀನ್ಯಾಸ ಇತ್ಯಾದಿ ಧಾರ್ಮಿಕ ವಿಧಿವಿಧಾನಗಳು ಇರಲಿವೆ. ಸಂಜೆ ನಿತ್ಯವೂ ಉತ್ಸವ ನಡೆಯಲಿದೆ. ಕೊನೆಯ ನಾಲ್ಕು ದಿನಗಳು (ಬ್ರಹ್ಮಕಲಶಾಭಿಷೇಕದ ಮಾದರಿಯಲ್ಲಿ) ಸಹಸ್ರ ಕಲಶಾಭಿಷೇಕ ನಡೆಯಲಿದೆ. ಪ್ರಾಣಪ್ರತಿಷ್ಠೆಯ ಅನಂತರದ ಧಾರ್ಮಿಕ ಹಾಗೂ ಉತ್ಸವದ ಭಾಗವಾಗಿ ಇವೆಲ್ಲವೂ ನಡೆಯಲಿದೆ. ನಿಮ್ಮ ಮುಂದಾಳತ್ವದಲ್ಲೇ ಧಾರ್ಮಿಕ ವಿಧಿ ವಿಧಾನ ನಡೆಯಲಿದೆಯೇ?
ದೇವಸ್ಥಾನದ ಧಾರ್ಮಿಕ ವಿಧಿ ವಿಧಾನಗಳೆಲ್ಲವೂ ಟ್ರಸ್ಟ್ ಮುಖೇನವೇ ನಡೆಯಲಿದೆ. ಈ ವಿಷಯವಾಗಿ ಟ್ರಸ್ಟ್‌ನಿಂದ ನಮಗೆ ವಿಶೇಷ ಹೊಣೆ ವಹಿಸಿದ್ದಾರೆ. ಶ್ರೀ ದೇವರ ಪ್ರಾಣಪ್ರತಿಷ್ಠೆ ಹಾಗೂ ಮೊದಲ ಮೂರ್‍ನಾಲ್ಕು ದಿನಗಳ ಧಾರ್ಮಿಕ ಆಚರಣೆಯು ಕಾಶಿಯ ಲಕ್ಷ್ಮೀ ಕಾಂತ ದೀಕ್ಷಿತರ ನೇತೃತ್ವದಲ್ಲಿ ನಡೆಯಲಿದೆ. ಅನಂತರ 48 ದಿನಗಳ ಮಂಡಲೋತ್ಸವಕ್ಕೆ ನಾವು ಮಾರ್ಗದರ್ಶನ ಮಾಡಿದ್ದೇವೆ. ಗುರುಗಳು (ವಿಶ್ವೇಶ ತೀರ್ಥ ಸ್ವಾಮೀಜಿ) ಬೆಂಗಳೂರಿನಲ್ಲಿ ಸ್ಥಾಪಿಸಿರುವ ಪೂರ್ಣಪ್ರಜ್ಞ ವಿದ್ಯಾಪೀಠ ದಲ್ಲಿ ಅಧ್ಯಯನ ಮಾಡಿದ ಅನೇಕ ವಿದ್ವಾಂಸರು ದೇಶದ ಬೇರೆ ಬೇರೆ ಭಾಗಗಳಲ್ಲಿದ್ದಾರೆ. ಇವರ ಜತೆಗೆ ದೇಶದ ಬೇರೆ ಭಾಗದ ವಿದ್ಯಾಪೀಠಗಳಲ್ಲಿ ಅಧ್ಯಯನ ಮಾಡಿ ರುವ ವಿದ್ವಾಂಸರೂ ಇದ್ದಾರೆ. ಪೂರ್ಣಪ್ರಜ್ಞ ವಿದ್ಯಾ ಪೀಠದ ಜವಾಬ್ದಾರಿಯಲ್ಲಿ ಅನೇಕ ವಿದ್ವಾಂಸರೊಂದಿಗೆ ಮಂಡಲೋತ್ಸವ ಕಾರ್ಯವನ್ನು ನೆರವೇರಿಸಲಿದ್ದೇವೆ. ಶ್ರೀ ರಾಮ ಮಂದಿರ ನಿರ್ಮಾಣದಂಥ ಮಹತ್ಕಾರ್ಯದಲ್ಲಿ ನಿಮ್ಮೊಂದಿಗೆ ಇರುವ ದೊಡ್ಡ ಶಕ್ತಿ ಯಾವುದು?
ನಮ್ಮ ಗುರುಗಳಾದ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಅನುಗ್ರಹವೇ ನಮ್ಮನ್ನು ಕಾಯುತ್ತಿದೆ. ಅವರು ಮಾಡಿದ ಸೇವೆಯ ಬಲವೇ ನಮಗೆ ದೊಡ್ಡ ಶಕ್ತಿ. ಶ್ರೀ ರಾಮಚಂದ್ರ ಎಲ್ಲರಿಗೂ ಸಂಬಂಧಿಸಿದ ದೇವರು. ರಾಮ ಭಕ್ತಿಯ ನೆಲೆಯಲ್ಲಿ ದೇಶಭಕ್ತಿಯ ನೆಲೆಯಲ್ಲಿ ಎಲ್ಲರನ್ನು ಒಗ್ಗೂಡಿಸಿಕೊಂಡು ಮುಂದೆ ಸಾಗುತ್ತಿದ್ದೇವೆ. ಅದೂ ನನ್ನ ಗುರುಗಳು ಹಾಕಿಕೊಟ್ಟ ಮಾರ್ಗ. ಇಲ್ಲಿ ಯಾವುದೇ ಭಿನ್ನಾ ಭಿಪ್ರಾಯಗಳು ಇಲ್ಲ, ಇರುವುದೂ ಇಲ್ಲ. ಅವರ ಸೇವೆಯ ಫಲವಾಗಿಯೇ ನಮಗೆ ಶ್ರೀ ರಾಮಮಂದಿರದ ಟ್ರಸ್ಟ್ ನಲ್ಲೂ ವಿಶೇಷ ಹೊಣೆ ಸಿಕ್ಕಿರುವುದು. ಒಂದು ಕುತೂಹಲ. ಹೋರಾಟದ ರೂಪದಲ್ಲಿ ಸ್ಥಾಪಿಸಲಾದ ರಾಮಲಲ್ಲಾ (ಇದುವರೆಗೂ ಪೂಜೆಗೊಳ್ಳುತ್ತಿರುವ ವಿಗ್ರಹ) ಮುಂದೇನಾಗುತ್ತಾನೆ?
ಈಗಾಗಲೇ ಮೂರು ಮೂರ್ತಿಗಳನ್ನು ಕೆತ್ತಲಾಗಿದೆ. ಅದರಲ್ಲಿ ಒಂದನ್ನು ಅಂತಿಮಗೊಳಿಸಿ ಪ್ರಾಣ ಪ್ರತಿಷ್ಠೆಗೆ ಒಳಪಡಿಸಲಾಗುತ್ತದೆ. ಉಳಿದೆರಡು ಮೂರ್ತಿಗಳನ್ನು ಏನು ಮಾಡಲಾಗುತ್ತದೆ ಎಂಬುದು ಅನೇಕರಲ್ಲಿ ಪ್ರಶ್ನೆ ಎದ್ದಿರುತ್ತದೆ. ಅದರ ಜತೆಗೆ ಈಗ ಪೂಜಿಸಲಾಗುತ್ತಿರುವ ರಾಮಲಲ್ಲಾನ ಮೂರ್ತಿಯನ್ನು ಏನು ಮಾಡುತ್ತಾರೆಂಬ ಕುತೂಹಲ ಹಲವರಲ್ಲಿ ಇರುವುದು ಸಹಜವಾದುದೇ. ಪ್ರಾಣಪ್ರತಿಷ್ಠೆ ಅನಂತರ ಈ ಮೂರು ಮೂರ್ತಿಗಳನ್ನೂ ರಾಮಮಂದಿರದ ಭಾಗದಲ್ಲೇ ನಿರ್ದಿಷ್ಟ ಜಾಗದಲ್ಲಿ ಯೋಗ್ಯ ಗೌರವಾದರ ಸಲ್ಲಿಸಿ ಪ್ರತಿಷ್ಠಾಪಿಸಲಾಗುತ್ತದೆ. ಅವುಗಳಿಗೆ ನಿತ್ಯವೂ ಪೂಜೆ ನಡೆಸಬೇಕೇ ಬೇಡವೇ ಎಂಬುದು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು. ರಾಮಮಂದಿರ ಹೋರಾಟಕ್ಕೂ ಪೇಜಾವರ ಮಠಕ್ಕೂ ನಂಟು ಹೇಗೆ?
ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣಕ್ಕಾಗಿ ನಡೆದ ಹೋರಾಟದಲ್ಲಿ ಗುರು ಗಳಾದ ಶ್ರೀ ವಿಶ್ವೇಶತೀರ್ಥರು ಮುಂಚೂಣಿಯಲ್ಲಿ ದ್ದರು. ವಿಶ್ವಹಿಂದೂ ಪರಿಷತ್‌ನಿಂದ ಮೂರು ಧರ್ಮಸಂಸತ್ ಉಡುಪಿಯಲ್ಲಿ ನಡೆದಾಗಲೂ ಶ್ರೀಪಾದರು ಅದರ ನೇತೃತ್ವ ವಹಿಸಿದ್ದರು. “ಮಂದಿರ್ ವಹೀ ಬನಾಯೇಂಗೆ’ ಘೋಷಣೆಯೂ ಉಡುಪಿ ಯಲ್ಲಿ ನಡೆದ ಧರ್ಮ ಸಂಸತ್‌ನಲ್ಲೇ ಮೊಳಗಿತ್ತು. ಅಯೋಧ್ಯೆಯ ಶ್ರೀ ರಾಮನ ಜನ್ಮಸ್ಥಳದಲ್ಲಿದ್ದ ವಿವಾದಿತ ಕಟ್ಟಡ ನೆಲಸಮಕ್ಕಾಗಿ ನಡೆದ ಆಂದೋ ಲನದಲ್ಲೂ ಗುರುಗಳು ಮಂಚೂಣಿಯಲ್ಲಿದ್ದರು. ವಿವಾದಿತ ಕಟ್ಟಡ ನೆಲಕ್ಕೆ ಉರುಳಿದ ಮರುಕ್ಷಣವೇ ಶ್ರಿರಾಮಲಲ್ಲಾನ ವಿಗ್ರಹವನ್ನು ಸ್ಥಾಪಿಸಿದ್ದೂ ನಮ್ಮ ಗುರುಗಳೇ. ಹೀಗೆ ಅಯೋಧ್ಯೆ ಮತ್ತು ಗುರುಗಳಿಗೆ, ಉಡುಪಿಗೆ ಅವಿನಾಭಾವ ನಂಟು. ಅದು ಈಗಲೂ ಮುಂದುವರಿಸುವ ಸೌಭಾಗ್ಯ ನನ್ನದಾಗಿದೆ. ಅಂಥದೊಂದು ಸದವಕಾಶ ಸಿಕ್ಕಿರುವುದೂ ಶ್ರೀ ರಾಮಚಂದ್ರನ ಅನುಗ್ರಹವೇ. ರಾಜು ಖಾರ್ವಿ ಕೊಡೇರಿ