Advertisement

ಮಂಡಕ್ಕಿ, ವರೈಟಿ ರೈಸ್‌ಬಾತ್‌ಗೆ ರುಚಿ ದರ್ಶನ’ಕ್ಕೆ ಬರ್ರಿ…

07:36 PM Jun 30, 2019 | Sriram |

ಗ್ರಾಹಕರಿಗೆ ಶುಚಿ-ರುಚಿಯಾದ ಆಹಾರ ಕೊಡಬೇಕು ಎನ್ನುವುದೇ ಎಲ್ಲಾ ಹೋಟೆಲ್‌ ಮಾಲೀಕರ ಉದ್ದೇಶ ಆಗಿರುತ್ತದೆ. ಗ್ರಾಹಕರು ಒಂದೇ ತರಹದ ತಿಂಡಿ ತಿಂದು ಬೇಸರ ಮಾಡಿಕೊಳ್ಳಬಾರದು ಎಂಬ ಕಾರಣಕ್ಕೆ, ವಾರದಲ್ಲಿ ಏಳು ದಿನವೂ ಒಂದೊಂದು ವಿಶೇಷವಾದ ರೈಸ್‌ಬಾತ್‌ ಮತ್ತು ಇತರೆ ತಿಂಡಿಗಳನ್ನು ತಯಾರಿಸುವ ಹೋಟೆಲ್‌ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕು ಕೇಂದ್ರದಲ್ಲಿದೆ. ಅದೇ, “ರುಚಿ ದರ್ಶನ್‌’. ಮಾನ್ವಿ ಬಸ್‌ ನಿಲ್ದಾಣದಿಂದ ಸಿಂಧನೂರು ರಸ್ತೆಯಲ್ಲಿ ಒಂದು ಕಿ.ಮೀ. ಸಾಗಿದರೆ, “ರುಚಿ ದರ್ಶನ’ ಸಿಗುತ್ತೆ. ನೋಡೋಕೆ ಸಣ್ಣದಾಗಿ ಕಾಣುವ ಈ ಹೋಟೆಲ್‌ 50 ವರ್ಷಗಳಷ್ಟು ಹಳೆಯದು. 1960ರಲ್ಲಿ ಮಂತ್ರಾಲಯದ ರಾಘವೇಂದ್ರ ಸ್ವಾಮಿಯ ದರ್ಶನಕ್ಕೆ ಬಂದಿದ್ದ ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಮೂಡುಬೆಳ್ಳೆ ಗ್ರಾಮದ ವಿಷ್ಣುಮೂರ್ತಿ ಸರಳಾಯ, ತಮ್ಮ ಪತ್ನಿಯ ಅಣ್ಣ ಗೋವಿಂದಭಟ್ಟರನ್ನು ನೋಡಲು ಮಾನ್ವಿಗೂ ಭೇಟಿ ಕೊಟ್ಟಿದ್ದರು. ನಂತರದ ದಿನಗಳಲ್ಲಿ ಮಾನ್ವಿಯಲ್ಲಿದ್ದ ತನ್ನ ಭಾವನ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿಕೊಂಡರು, ಎರಡು ವರ್ಷಗಳ ನಂತರ, ಪತ್ನಿ ಇಂದಿರಾ ಸರಳಾಯ ಸಹಕಾರದೊಂದಿಗೆ ಹಳೇ ಮಾನ್ವಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಸಮೀಪದ ಕಟ್ಟಡ ಬಾಡಿಗೆಗೆ ಪಡೆದು, “ಪ್ರಕಾಶ್‌’ ಹೆಸರಲ್ಲಿ ಹೋಟೆಲ್‌ ಪ್ರಾರಂಭಿಸಿದರು. ಸುಮಾರು 25 ವರ್ಷಗಳ ನಂತರ ಸ್ವಂತಕ್ಕೆ ಜಾಗ ಖರೀದಿಸಿ, ಅಲ್ಲಿಯೇ ರುಚಿ ದರ್ಶನ ಹೆಸರಲ್ಲಿ ಹೊಸದಾಗಿ ಹೋಟೆಲ್‌ ಆರಂಭಿಸಿದರು. ಸದ್ಯ ವಿಷ್ಣುಮೂರ್ತಿ ನಿಧನಾ ನಂತರ ಅವರ ಪುತ್ರ ಪ್ರಕಾಶ್‌ ಸರಳಾಯ ತನ್ನ ಪತ್ನಿ ಜಯಶ್ರೀ ಜೊತೆ ಹೋಟೆಲ್‌ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

Advertisement

ಹೋಟೆಲ್‌ ಸಮಯ:
ಬೆಳಗ್ಗೆ 8ರಿಂದ ಮಧ್ಯಾಹ್ನ 1ಗಂಟೆ, ಸಂಜೆ 4ರಿಂದ ರಾತ್ರಿ 8

ಹೋಟೆಲ್‌ ವಿಳಾಸ:
ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಪಕ್ಕ, ಎಪಿಎಂಸಿ ಫ‌ಸ್ಟ್‌ ಗೇಟ್‌ ಎದುರು, ಸಿಂಧನೂರು ರಸ್ತೆ, ಮಾನ್ವಿ ಪಟ್ಟಣದ ಬಸ್‌ ನಿಲ್ದಾಣದಿಂದ 1 ಕಿ.ಮೀ.

ವಿಶೇಷ ತಿಂಡಿ:
ಈ ಹೋಟೆಲ್‌ ಪ್ರಾರಂಭಿಸಿದ್ದೇ ಒಗ್ಗರಣೆ ಮಂಡಿಕ್ಕಿಯಿಂದ ಹೀಗಾಗಿ ಆ ತಿಂಡಿಯನ್ನು ಜನ ಈಗಲೂ ಹೆಚ್ಚು ಇಷ್ಟಪಡುತ್ತಾರೆ. ಇದರ ಜೊತೆಗೆ ಸಿರಾ, ಇಡ್ಲಿ, ಬಾಸುಂದಿ- ವಿಶೇಷ ತಿಂಡಿಗಳು. ಈವೆಲ್ಲದರ ದರವೂ 20 ರೂ.ಒಳಗೆ ಇದೆ. ಇದರಲ್ಲಿ ಉತ್ತರ ಭಾರತ, ಮಹಾರಾಷ್ಟ್ರದಲ್ಲಿ ಹೆಚ್ಚು ಬಳಸುವ ಬಾಸುಂದಿಯನ್ನು ರುಚಿ ದರ್ಶನದಲ್ಲೂ ಮಾಡಲಾಗುತ್ತದೆ. ಹಾಲನ್ನು ಚೆನ್ನಾಗಿ ಕುಸಿದು, ಅದನ್ನು ಕೆನೆ ಟೈಪ್‌ ಮಾಡಿ ಸಕ್ಕರೆ ಹಾಕಿ ಮಾಡುವ ಈ ಸಿಹಿ ತಿಂಡಿ ಗ್ರಾಹಕರಿಗೆ ಬಲು ಪ್ರೀತಿ. ಇಲ್ಲಿ ಊಟ ಸಿಗುವುದಿಲ್ಲ.

ಹೋಟೆಲ್‌ನ ಇತರೆ ತಿಂಡಿ:
ಸಿರಾ (20 ರೂ.), ಉಪ್ಪಿಟ್ಟು (15 ರೂ.), ಇಡ್ಲಿ (2ಕ್ಕೆ 16 ರೂ.), ವಡೆ (12 ರೂ.), ಪೂರಿ (ಒಂದು ಪ್ಲೇಟ್‌ 20 ರೂ.), ಬಾಸುಂದಿ ಸ್ವೀಟು (ಒಂದು ಕಪ್‌ 20 ರೂ.), ರೈಸ್‌ ಐಟಂ (25 ರೂ.). ಇನ್ನು ಸಂಜೆಗೆ ಒಗ್ಗರಣೆ ಮಂಡಕ್ಕಿ (15 ರೂ.) ಜೊತೆಗೆ, ಸಮೋಸ, ಮದ್ದೂರು ವಡೆ, ಮಸಾಲೆ ವಡೆ, ಬಾಸುಂದಿ, ಬೋಂಡಾ, ಆಲೂ ಬೋಂಡಾ, ಪಲಾಕ್‌ ಪಕೋಡ ಇತರೆ ತಿಂಡಿಗಳನ್ನು ಮಾಡಲಾಗುತ್ತದೆ. ಎಲ್ಲರ ದರವೂ 15 ರೂ. ಒಳಗೆ. ವಾರದ ಏಳು ದಿನ ಒಂದೊಂದು ಐಟಂ ಮಾಡಲಾಗುತ್ತದೆ.

Advertisement

-ಭೋಗೇಶ ಆರ್‌. ಮೇಲುಕುಂಟೆ

ಫೋಟೋ ಕೃಪೆ : ರವಿ ಶರ್ಮಾ/ತೇಜಸ್‌

Advertisement

Udayavani is now on Telegram. Click here to join our channel and stay updated with the latest news.

Next