ನವ ಪ್ರತಿಭೆ ಅಭಯ್ ನಾಯಕನಾಗಿ ಅಭಿನಯಿಸುತ್ತಿರುವ “ಮನಸಾಗಿದೆ’ ಚಿತ್ರ ತೆರೆಗೆ ಬರುವ ಸನ್ನಾಹದಲ್ಲಿದೆ. ಈಗಾಗಲೇ ಚಿತ್ರದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ಸೆನ್ಸಾರ್‌ನಿಂದ “ಯು/ಎ’ ಸರ್ಟಿಫಿಕೇಟ್ ಪಡೆದುಕೊಂಡಿದೆ. ಇದರ ನಡುವೆಯೇ “ಮನಸಾಗಿದೆ’ ಚಿತ್ರದ ಪ್ರಚಾರ ಕಾರ್ಯಗಳಿಗೂ ಚಾಲನೆ ನೀಡಿರುವ ಚಿತ್ರತಂಡ, ಬ್ಯಾಕ್ ಟು ಬ್ಯಾಕ್ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ನಿಧಾನವಾಗಿ ಪ್ರೇಕ್ಷಕರನ್ನು ಸೆಳೆಯುತ್ತಿದೆ.
ಈಗಾಗಲೇ “ಮನಸಾಗಿದೆ’ ಚಿತ್ರದ ಟೈಟಲ್ ಸಾಂಗ್, ಡ್ನೂಯೆಟ್ ಸಾಂಗ್ ಮತ್ತು ಪಾರ್ಟಿ ಸಾಂಗ್ ಸೇರಿದಂತೆ ಮೂರು ಹಾಡುಗಳನ್ನು ಬಿಡುಗಡೆ ಮಾಡಿರುವ ಚಿತ್ರತಂಡ, ಈ ಮೂರು ಹಾಡುಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ, ಇದೇ ತಿಂಗಳಲ್ಲಿ “ಮನಸಾಗಿದೆ’ ಚಿತ್ರದ ಮೊದಲ ಟ್ರೇಲರ್ ಅನ್ನು ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದೆ.
ಈ ಕುರಿತು ಮಾತನಾಡುವ ಚಿತ್ರದ ನಿರ್ಮಾಪಕ ಎಸ್. ಚಂದ್ರಶೇಖರ್, “ನಮ್ಮ ಪ್ಲಾನ್ ಪ್ರಕಾರ ಸಿನಿಮಾದ ಬಹುತೇಕ ಕೆಲಸಗಳು ಮುಗಿದಿದೆ. ಸದ್ಯ ಸಿನಿಮಾ ಸೆನ್ಸಾರ್ ಮುಗಿದಿದ್ದು, ಈ ತಿಂಗಳು ರಿಲೀಸ್ ಡೇಟ್ಸ್ ಅನೌನ್ಸ್ ಮಾಡಲಿದ್ದೇವೆ. ಇದರ ನಡುವೆಯೇ ನಿಧಾನವಾಗಿ ಸಿನಿಮಾದ ಪ್ರಮೋಶನ್ಸ್ ಕೆಲಸಗಳನ್ನೂ ಶುರು ಮಾಡಿದ್ದೇವೆ. ಈಗಾಗಲೇ ರಿಲೀಸ್ ಆಗಿರುವ ಮೂರು ಹಾಡುಗಳಿಗೂ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ’ ಎಂದು ಮಾಹಿತಿ ನೀಡುತ್ತಾರೆ.
ಇದನ್ನೂ ಓದಿ:ಟೈಟಲ್ ಟ್ರ್ಯಾಕ್‌ನಲ್ಲಿ ಹರೀಶನ ಮದುವೆ ಕನಸು: ಮಂಗಳೂರು ಕನ್ನಡದಲ್ಲಿ ಒಂದು ವಿಭಿನ್ನ ಸಿನಿಮಾ
ಇನ್ನು ಔಟ್ ಆ್ಯಂಡ್ ಔಟ್ ಲವ್ ಕಂ ಆ್ಯಕ್ಷನ್ ಕಥಾಹಂದರ ಹೊಂದಿರುವ “ಮನಸಾಗಿದೆ’ ಚಿತ್ರದಲ್ಲಿ ನಾಯಕ ಅಭಯ್‌ಗೆ ಮೇಘಶ್ರೀ, ಅಥಿರಾ ನಾಯಕಿಯಾಗಿ ತೆರೆಮೇಲೆ ಜೋಡಿಯಾಗಿದ್ದಾರೆ. ಉಳಿದಂತೆ ಸುರೇಶ್ ರೈ, ಭವ್ಯಶ್ರೀ ರೈ, ಸೂರಜ…, ತೇಜಸ್, ಅನೀಶ್, ಚಿದು ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಶ್ರೀನಿವಾಸ್ ಶಿಡ್ಲಘಟ್ಟ ನಿರ್ದೇಶನವಿದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಮಾನಸ ಹೊಳ್ಳ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ.
“ಮನಸಾಗಿದೆ…’ ಟೈಟಲ್ ಹಾಡಿಗೆ ಅರಸು ಅಂತಾರೆ, “ನೀನೇ.. ನೀನೇ..’ ಡ್ನೂಯೆಟ್ ಹಾಡಿಗೆ ಕೆ. ಕಲ್ಯಾಣ್, “ನನ್ನ ಹಣೆಯ ಮೇಲೆ…’ ಎಂಬ ಪಾರ್ಟಿ ಸಾಂಗ್‌ಗೆ ಡಾ. ವಿ ನಾಗೇಂದ್ರ ಪ್ರಸಾದ್, “ಏ ಹೃದಯ…’ ಹಾಡಿಗೆ ಮಜಾ ಟಾಕೀಸ್ ರೆಮೋ ಮತ್ತು “ಕ್ಷಮಿಸು ಹೃದಯವೇ…’ ಎಂಬ ಹಾಡಿಗೆ ಕವಿರಾಜ್ ಸಾಹಿತ್ಯ ಬರೆದಿದ್ದಾರೆ. ಉಳಿದ ಎರಡು ಬಿಟ್ ಹಾಡುಗಳಿಗೆ ರಘು ನಿಡುವಳ್ಳಿ ಸಾಹಿತ್ಯವಿದೆ. ಈಗಾಗಲೇ “ಮನಸಾಗಿದೆ’ ಚಿತ್ರದ ಮೂರು ಹಾಡುಗಳು “ತೇಜು ಮ್ಯೂಸಿಕ್’ ಯು-ಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು 5 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ.