Advertisement

ಸ್ಥಳೀಯ ನಾಯಕನಿಗೆ ಹಟ್ಟಿ ಚಿನ್ನದ ಗಣಿ ಚುಕ್ಕಾಣಿ

05:33 PM Nov 26, 2020 | Suhan S |

ಹಟ್ಟಿಚಿನ್ನದ ಗಣಿ: ರಾಜ್ಯದಲ್ಲಿ ಚಿನ್ನ ಉತ್ಪಾದಿಸುವ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿರುವ ಹಟ್ಟಿ ಚಿನ್ನದ ಗಣಿ ಚುಕ್ಕಾಣಿ ಬಹಳ ವರ್ಷಗಳ ಬಳಿಕ ಸ್ಥಳೀಯರಿಗೆ ಲಭಿಸಿದೆ. ಇದರಿಂದ ಅಭಿವೃದ್ಧಿ ನಿರೀಕ್ಷೆಗಳಿಗೆ ಮತ್ತಷ್ಟು ಪುಷ್ಟಿ ಸಿಕ್ಕಂತಾಗಿದೆ.

Advertisement

ಕ್ಷೇತ್ರದ ಮಾಜಿ ಶಾಸಕ ಮಾನಪ್ಪ ಡಿ.ವಜ್ಜಲ್‌ ಅವರನ್ನು ಹಟ್ಟಿ ಚಿನ್ನದ ಗಣಿ ಅಧ್ಯಕ್ಷರನ್ನಾಗಿ ನೇಮಿಸಿ ಗಣಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಉಪ ಕಾರ್ಯದರ್ಶಿ ಎಸ್‌.ವೆಂಕಟೇಶ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಕಾಂಗ್ರೆಸ್‌ ಸರ್ಕಾರವಿದ್ದಾಗ ರಾಯಚೂರಿನ ಪಾರಸಮಲ್‌ ಸುಖಾಣಿ ಮತ್ತು ಜೆಡಿಎಸ್‌ ಸರ್ಕಾರದ ಅವಧಿ ಯಲ್ಲಿ ಸಿರವಾರದ ಜೆ.ಸಿ. ಪಾಟೀಲ್‌ರನ್ನು ಬಿಟ್ಟರೆ ಮಾನಪ್ಪ ವಜ್ಜಲ್‌ರೇ ಗಣಿ ಚುಕ್ಕಾಣಿ ಹಿಡಿದ ನಾಯಕರಾಗಿದ್ದಾರೆ.

ಅಭಿವೃದ್ಧಿ ದೃಷ್ಟಿಕೋನದಲ್ಲಿ ಸ್ಥಳೀಯರನ್ನು ನೇಮಿಸಲಿ ಎನ್ನುವ ಹಕ್ಕೊತ್ತಾಯಕ್ಕೆ ಯಾವುದೇ ಸರ್ಕಾರಗಳು ಮಾನ್ಯ ಮಾಡಿರಲಿಲ್ಲ. ಈ ಹಿಂದೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಎಂ.ಪಿ. ರೇಣುಕಾಚಾರ್ಯ, ರಾಮಚಂದ್ರಪ್ಪ, ರಾಣಿಸತೀಶ್‌, ವಿನಯ ಕುಲಕರ್ಣಿ,ರಾಜಶೇಖರ್‌ಪಾಟೀಲ್‌ ಹುಮ್ನಾಬಾದ, ಟಿ.ರಘುಮೂರ್ತಿ ಬೇರೆ ಜಿಲ್ಲೆಯವರೇ ಆಗಿದ್ದರಿಂದ ಕಾರ್ಮಿಕರ ಹಿತ ಕಾಯುವುದು, ಕಂಪನಿ ಅಭಿವೃದ್ಧಿಗೆ ಒತ್ತು ನೀಡಿರಲಿಲ್ಲ ಎನ್ನುವ ಟೀಕೆಗಳಿವೆ.

ಮೂರೂ ಪಕ್ಷಗಳು ತಮ್ಮ ಅಧಿಕಾರಾವ ಧಿಯಲ್ಲಿ ಹೆಚ್ಚಾಗಿ ಸ್ಥಳೀಯರಿಗೆ ಪರಿಚಯವೇ ಇಲ್ಲದ ದಕ್ಷಿಣ ಕರ್ನಾಟಕದ ಶಾಸಕರನ್ನೆ ಅಧ್ಯಕ್ಷರನ್ನಾಗಿ ನೇಮಿಸುತ್ತಾ ಬಂದಿದ್ದವು. ಅಧ್ಯಕ್ಷರಾದವರು ತಮ್ಮ ಸ್ವ-ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿ, 3 ತಿಂಗಳು, ಆರು ತಿಂಗಳಿಗೊಮ್ಮೆ ಗಣಿ ಕಂಪನಿಗೆ ಭೇಟಿ ನೀಡುತ್ತಿದ್ದರು. ದಕ್ಷಿಣ ಕರ್ನಾಟಕದಿಂದ ಅಧ್ಯಕ್ಷರಾದವರು ನಮ್ಮ ಭಾಗದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿಲ್ಲವೆಂಬುದು ಕಾರ್ಮಿಕರಲ್ಲಿ ಆರೋಪ ಕೇಳಿ ಬರುತ್ತಿತ್ತು. ಸದ್ಯ ಮಾನಪ್ಪ ವಜ್ಜಲರು ಸ್ವ-ಕ್ಷೇತ್ರದ ಮಾಜಿ ಶಾಸಕರಾಗಿದ್ದು, ಯಾವ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಾರೆಂಬ ನಿರೀಕ್ಷೆ ಗಣಿ ಕಂಪನಿಯ ಕಾರ್ಮಿಕರೂ ಸೇರಿದಂತೆ ಸಾರ್ವಜನಿಕರಲ್ಲಿದೆ.

ವಿರಳಾತಿ ವಿರಳ ಎನ್ನುವಂತೆ ಸ್ವ-ಕ್ಷೇತ್ರದ ಮಾಜಿ ಶಾಸಕರಿಗೆ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಮಾನಪ್ಪ ವಜ್ಜಲರು ಒಂದು ಬಾರಿ ಬಿಜೆಪಿ, ಮತ್ತೂಂದು ಬಾರಿ ಜೆಡಿಎಸ್‌ನಿಂದ ಶಾಸಕರಾಗಿದ್ದರು. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರೂ ಪ್ರತಿಷ್ಠಿತ ಹಟ್ಟಿಚಿನ್ನದಗಣಿ ಕಂಪನಿಗೆ ಅಧ್ಯಕ್ಷ ಸ್ಥಾನ ಒಲಿದಿದೆ.

Advertisement

ಪ್ರಸ್ತುತ ಗಣಿ ಕಂಪನಿಯಲ್ಲಿ 2016ರಿಂದ ಸ್ಥಗಿತಗೊಂಡ ವೈದ್ಯಕೀಯ ಅನರ್ಹತೆ ಆಧಾರದ ಮೇಲೆ ಅವಲಂಬಿತರಿಗೆ ಉದ್ಯೋಗ ಮತ್ತು ಸುದೀರ್ಘ‌ ಸೇವೆಯ ಆಧಾರದ ಮೇಲೆ ಕಾರ್ಮಿಕರ ಮಕ್ಕಳಿಗೆ ಉದ್ಯೋಗದ ಬೇಡಿಕೆ, 2021ರಲ್ಲಿ ಹೊಸವೇತನ ಒಪ್ಪಂದ, ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆಯಂಥ ಸವಾಲುಗಳಿವೆ. ನೂತನ ಅಧ್ಯಕ್ಷರು ಕಾರ್ಮಿಕರ ಸಮಸ್ಯೆಗೆ ಹೇಗೆ ಸ್ಪಂದಿಸುವರೋ ಎಂಬ ಕುತೂಹಲವಿದೆ.

ಸಿಎಸ್ಸಾರ್‌ ಹಣದ ನಿರೀಕ್ಷೆ : ಹಟ್ಟಿ ಚಿನ್ನದ ಗಣಿ ತನ್ನ ಲಾಭಾಂಶದ ಒಂದಷ್ಟು ಹಣವನ್ನು ಸಾಮಾಜಿಕ ಚಟುವಟುಕೆಗಳಿಗೆ (ಸಿಎಸ್ಸಾರ್‌) ಬಳಸಬೇಕಿದೆ. ಈ ಹಿಂದಿನ ಅಧ್ಯಕ್ಷರು ಇಲ್ಲಿನ ಹಣವನ್ನು ಬೇರೆ ಭಾಗಗಳಲ್ಲಿ ವಿನಿಯೋಗಿಸುತ್ತಿದ್ದರು. ಜಿಲ್ಲೆಯ ಅಭಿವೃದ್ಧಿಗೆ ನಿರೀಕ್ಷಿತ ಮಟ್ಟದಲ್ಲಿ ಬಳಸಲಿಲ್ಲ ಎನ್ನುವಆರೋಪವಿದೆ. ಈಗ ಸ್ಥಳೀಯರೇ ಅಧ್ಯಕ್ಷರಾಗಿರುವ ಕಾರಣ ಸಿಎಸ್ಸಾರ್‌ ಹಣದ ಸಿಂಹಪಾಲು ಜಿಲ್ಲೆಗೆ ಸಿಗಬಹುದಾ? ಎಂಬ ನಿರೀಕ್ಷೆ ಮೂಡಿದೆ.

ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮದೇ ಸರ್ಕಾರವಿದ್ದು, ಗಣಿ ಕಂಪನಿ ಕಾರ್ಮಿಕರ ಕುರಿತ ವಿಷಯಗಳಾದ ವೇತನ ಒಪ್ಪಂದ ಮತ್ತು ಕಾರ್ಮಿಕರಮಕ್ಕಳಿಗೆ ಉದ್ಯೋಗ ನೀಡುವ ಕುರಿತು ಸರ್ಕಾರದ ಮಟ್ಟದಲ್ಲಿ ಮಾತನಾಡಿ ಜಾರಿಗೆ ಶ್ರಮಿಸಲಾಗುವುದು. ಅಧಿಕಾರಾವಧಿ ಯಲ್ಲಿ ಕಾರ್ಮಿಕರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. -ಮಾನಪ್ಪ ವಜ್ಜಲ್‌, ಹಟ್ಟಿಚಿನ್ನದ ಗಣಿ ನೂತನ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next