ಬಾಗಲಕೋಟೆ: ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಮರಭೂಮಿ ಮಿಡತೆ ಹಾವಳಿ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಹರಡುತ್ತಿವೆ. ಜಿಲ್ಲೆಯಲ್ಲಿ ಮರಭೂಮಿ ಮಿಡತೆ ಹತೋಟಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಸೂಚಿಸಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮರಭೂಮಿ ಮಿಡತೆ ನಿರ್ವಹಣೆಗೆ ಈಗಾಗಲೇ ಜಂಟಿ ಕೃಷಿ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪೀಡೆ ಸರ್ವೇಕ್ಷಣಾ ಮತ್ತು ಸಲಹಾ ಘಟಕ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯು ನಿಯಮಿತವಾಗಿ ಪೀಡೆ ಸರ್ವೇಕ್ಷಣ ಕೈಗೊಂಡು ಕೀಟದ ಹಾವಳಿಯು ಕಂಡುಬಂದ ತಕ್ಷಣವೇ ಜಿಲ್ಲಾಡಳಿತಕ್ಕೆ ಮಾಹಿತಿ ಸಲ್ಲಿಸಬೇಕು. ಜಿಲ್ಲೆಯಲ್ಲಿ ಮರಭೂಮಿ ಮಿಡತೆ ಹಾವಳಿ ಬಗ್ಗೆ ಸದ್ಯದ ಪರಿಸ್ಥಿತಿಯಲ್ಲಿ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಕೀಟನಾಶಕ ಸಿಂಪಡಣೆ ಮಾಡುವಾಗ ಕಡ್ಡಾಯವಾಗಿ ಸುರಕ್ಷತಾ ಕವಚ ಬಳಸಿ ಸಿಂಪಡಣಾ ದ್ರಾವಣ ದೇಹದ ಮೇಲೆ ಬೀಳದಂತೆ ಹಾಗೂ ಉಸಿರಾಟದ ಮೂಲಕ ದೇಹ ಸೇರದಂತೆ ಮುನ್ನೆಚ್ಚರಿಕೆ ವಹಿಸುವುದು. ಜಲಮೂಲಗಳ ಸಮೀಪ ಸಿಂಪಡಣೆ ಕೈಗೊಳ್ಳದಂತೆ ಕ್ರಮ ವಹಿಸುವುದು. ಈ ಪೀಡೆಯ ಭಾದೆಯ ಬಗ್ಗೆ ಹೆಚ್ಚಿನ ಪ್ರಚಾರ ನೀಡಿ ರೈತರ ಮನೋಸ್ಥೆರ್ಯ ತುಂಬುವ ಕಾರ್ಯ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಮಾಡಬೇಕೆಂದು ಅಪರ ಜಿಲ್ಲಾಧಿಕಾರಿಗಳು ಸೂಚಿಸಿದರು.
ತೋವಿವಿಯ ವಿಸ್ತರಣಾ ನಿರ್ದೇಶಕ ಡಾ| ವೈ. ಕೆ.ಕೋಟಿಕಲ್ ಮಾತನಾಡಿ, ಮಿಡತೆಗಳು ಬಹುಬಕ್ಷಕ ಕೀಟಗಳಾಗಿದ್ದು, ಯಾವುದೇ ಗಿಡ ಅಥವಾ ಬೆಳೆಯ ಎಲೆ, ಹೂ, ಹಣ್ಣು, ಬೀಜ, ಮರದ ತೊಗಟೆ ಹಾಗೂ ಬೆಳೆಯ ಕುಡಿಗಳನ್ನು ನಿರ್ದಾಕ್ಷಿಣ್ಯವಾಗಿ ತಿಂದು ಹಾಳುಮಾಡುತ್ತವೆ. ಮಿಡತೆಗಳು ಅಲೆ-ಅಲೆಯಾಗಿ ಗುಂಪಿನಲ್ಲಿ ಒಂದು ದಿನದಲ್ಲಿ 150 ಕಿ.ಮೀ. ದೂರ ಗಾಳಿಯ ದಿಕ್ಕಿನಲ್ಲಿ ಹಾರಬಲ್ಲವು. ಹಗಲಿನಲ್ಲಿ ಮಾತ್ರ ಚಲಿಸಿತ್ತಿದ್ದು, ರಾತ್ರಿ ಹೊತ್ತಿನಲ್ಲಿ ಮರ-ಗಿಡಗಳ ಮೇಲೆ ವಿಶ್ರಾಂತಿ ಪಡೆಯುತ್ತೆ ಎಂದರು.
ಪ್ರಸ್ತುತ ಜಿಲ್ಲೆಯಲ್ಲಿ ಬೇಸಿಗೆ ಬೆಳೆಗಳು ಕಟಾವು ಹಂತದಲ್ಲಿ ಇದ್ದು, ತೋಟಗಾರಿಕೆ ಬೆಳೆಗಳಾದ ದಾಳಿಂಬೆ, ಪಪ್ಪಾಯಿ, ಮಾವು, ಚಿಕ್ಕು ಹಾಗೂ ತರಕಾರಿ ಬೆಳೆಗಳಿವೆ. ಅರಣ್ಯೀಕರಣದ ಬೇವು, ಹುಣಸೆ ಹಾಗೂ ಇನ್ನಿತರ ಗಿಡ-ಮರಗಳು ಸಹ ಕೀಟಗಳಿಂದ ಹಾನಿಗೆ ಒಳಗಾಗಬಹುದಾಗಿದೆ. ಕಾರಣ ಯಾವುದೇ ಬೆಳೆಗಳಿಗೆ ರೈತರು ಕೀಟನಾಶಕ ಸಿಂಪಡಣೆ ಮಾಡುವಾಗ ಬೇವಿನ ಮೂಲದ ಕೀಟನಾಶಗಳನ್ನು ಮಿಶ್ರಣ ಮಾಡಿ ಸಿಂಪಡಿಸಲು ಸಲಹೆ ನೀಡಿದರು.
ಜಂಟಿ ಕೃಷಿ ನಿರ್ದೇಶಕಿ ಡಾ| ಚೇತನಾ ಪಾಟೀಲ, ಜಮಖಂಡಿ ಉಪ ಕೃಷಿ ನಿರ್ದೇಶಕ ಡಾ|ಆರ್.ಜಿ. ನಾಗನ್ನವರ, ತೋಟಗಾರಿಕೆ ಉಪ ನಿರ್ದೇಶಕ ಪ್ರಭುರಾಜ ಹಿರೇಮಠ, ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಎಸ್.ಬಿ.ಹುಲ್ಲೊಳಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಪಿ. ಚೌಗಲಾ, ಕೃಷಿ ವಿಜ್ಞಾನ ಕೇಂದ್ರದ ಡಾ|ಎಂ.ಆರ್. ಕಮ್ಮಾರ, ಅರ್ಜುನ ಉಪಸ್ಥಿತರಿದ್ದರು.