Advertisement

ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿ

03:43 PM Aug 30, 2020 | Suhan S |

ಯಲಬುರ್ಗಾ: ತಾಪಂ ಕಚೇರಿ ಹಾಗೂ ಗ್ರಾಮೀಣ ಮತ್ತು ಪಂಚಾಯತ್‌ ರಾಜ್ಯ ಇಲಾಖೆಯಲ್ಲಿ ಸಾಕಷ್ಟು ಹುದ್ದೆಗಳ ಖಾಲಿ ಇರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಸಮಸ್ಯೆಯಾಗುತ್ತಿದೆ. ಖಾಲಿ ಇರುವ ಹುದ್ದೆಗಳ ಕುರಿತು ಗಮನಕ್ಕೆ ಯಾಕೆ ತಂದಿಲ್ಲ. ಬೇಜವಾಬ್ದಾರಿತನದಿಂದ ಕರ್ತವ್ಯ ನಿರ್ವಹಿಸಬೇಡಿ ಎಂದು ಶಾಸಕ ಹಾಲಪ್ಪ ಆಚಾರ್‌ ತಾಪಂ ಇಒ ಡಾ| ಜಯರಾಂ ಹಾಗೂ ಎಇಇ ಶಿವುಕುಮಾರ ಅವರನ್ನು ತರಾಟೆ ತೆಗೆದುಕೊಂಡರು.

Advertisement

ಪಟ್ಟಣದ ತಾಪಂ ಸಭಾಂಗಣದಲ್ಲಿ ಶನಿವಾರ ಗ್ರಾಮೀಣ ಮತ್ತು ಪಂಚಾಯತ್‌ ರಾಜ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹುದ್ದೆ ಖಾಲಿ ಇರುವ ಕುರಿತು ನನ್ನ ಗಮನಕ್ಕೆ ತಂದಿದ್ದರೆ ಸರಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ತಾಲೂಕಿಗೆ ಅಧಿಕಾರಿಗಳ ಹಾಗೂ ಸಿಬ್ಬಂದಿ ಮಂಜೂರು ಹಾಗೂ ವರ್ಗಾವಣೆ ಮಾಡಿಸಿಕೊಂಡು ಬರುತ್ತಿದ್ದೆ. ಅಭಿವೃದ್ಧಿ ಕಾರ್ಯಕ್ಕೆ ಅನುಕೂಲವಾಗುತಿತ್ತು. ಇಷ್ಟು ನಿರ್ಲಕ್ಷ್ಯದಿಂದ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸಬೇಡಿ. ಅದು ನಿಮ್ಮ ಹುದ್ದೆಗೆ ಶೋಭೆ ತರುವುದಿಲ್ಲ ಎಂದರು.

ಜಿಪಂ ಇಲಾಖೆಗೆ 15 ಕೋಟಿಗೂ ಹೆಚ್ಚು ಅನುದಾನ ನೀಡಿದ್ದೇನೆ. ಆ ಎಲ್ಲ ಕಾಮಗಾರಿಗಳನ್ನು ಗುಣಮಟ್ಟದಿಂದ ತ್ವರಿತವಾಗಿ ಮುಗಿಸುವಂತೆ ಎಇಇಗೆ ಸೂಚಿಸಿದರು. ತಾಲೂಕಿನ ಬುಡಕುಂಟಿ, ಬಂಡಿಹಾಳ, ಲಗಳೂರು, ಮದ್ಲೂರು ಇನ್ನಿತರ ಗ್ರಾಮಗಳಲ್ಲಿ ಕುಡಿವ ನೀರಿನ ಶುದ್ದೀಕರಣ ಘಟಕಗಳು ಕೆಟ್ಟು ನಿಂತಿದ್ದು, ಅವುಗಳ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕು ಎಂದು ಜಿಪಂ ಎಇಇ ಶಿವುಕುಮಾರ ಹಾಗೂ ಪಿಡಿಒಗಳಿಗೆ ಸೂಚಿಸಿದರು.

ತಾಲೂಕು ಅಧಿಕಾರಿಗಳು ಹಾಗೂ ಗ್ರಾಪಂ ಪಿಡಿಒಗಳು ತಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಿ, ಸರಾಕರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಿ. ಗ್ರಾಪಂ ಪಿಡಿಒಗಳು ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಮುಂದಾಗಿ, ಸ್ಥಳೀಯವಾಗಿ ಲಭ್ಯವಿದ್ದು ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next