Advertisement

ಕಾಲಮಿತಿಯಲ್ಲಿ ಕೆಲಸ ನಿರ್ವಹಿಸಿ

09:32 PM Oct 15, 2019 | Lakshmi GovindaRaju |

ದೇವನಹಳ್ಳಿ: ಕಾನೂನು ಬದ್ಧವಾಗಿ ಸಾರ್ವಜನಿಕ ಕೆಲಸವನ್ನು ನಿಗದಿತ ವೇಳೆಯಲ್ಲಿ ಮಾಡಿಕೊಡದೆ ವಿನಾಃಕಾರಣ ಜನರನ್ನು ಅಲೆದಾಡಿಸುವುದು ಕಾನೂನು ಅಪರಾದ ಎಂದು ಪರಿಗಣಿಸಲಾಗುವುದು ಎಂದು ಲೋಕಾಯುಕ್ತ ಡಿವೈಎಸ್‌ಪಿ ಶಶಿಕಲಾ ತಿಳಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಬೆಂ.ಗ್ರಾಮಾಂತರ ಜಿಲ್ಲಾ ಲೋಕಾಯುಕ್ತ ವತಿಯಿಂದ ಜನ ಸಂಪರ್ಕ ಸಭೆಯಲ್ಲಿ ಕುಂದುಕೊರತೆಗಳ ಅರ್ಜಿ ಸ್ವೀಕರಿಸಿ ಮಾತನಾಡಿದರು.

Advertisement

ಯಾವುದೇ ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರ ಕೆಲಸವನ್ನು ವಿಳಂಬ ಮಾಡಿದ್ದಲ್ಲಿ ನಿರ್ಭಯವಾಗಿ ದೂರನ್ನು ನೀಡಬಹುದು. 12 ಪ್ರಕರಣಗಳ ದೂರು ಬಂದಿದ್ದು, ಅದರಲ್ಲಿ 8 ಕಂದಾಯ ಇಲಾಖೆ, 3 ಪಂಚಾಯತ್‌ ರಾಜ್‌ ಇಲಾಖೆ, ವಿಜಯಪುರ ಪುರಸಭೆ 1 ಪ್ರಕರಣ ಬಂದಿರುತ್ತದೆ. ಅಧಿಕಾರಿಗಳು ನಿಗದಿತ ವೇಳೆಯಲ್ಲಿ ಜನರ ದೂರುಗಳನ್ನು ಬಗೆಹರಿಸಬೇಕು. ಇಲ್ಲದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು.

ದೂರುದಾರ ರಾಯಸಂದ್ರ ಸೋಮಶೇಖರ್‌ ಮಾತನಾಡಿ, ಕಸಬಾ ಹೋಬಳಿ ರಾಯಸಂದ್ರ ಗ್ರಾಮದ ಸರ್ವೆ ನಂ.44ರ ಸುಮಾರು 157 ಎಕರೆ ಸರ್ಕಾರಿ ಭೂಮಿಯನ್ನು ಈಗಾಗಲೇ ಭೂ ಮಂಜೂರಾತಿ ಮಾಡಿ. ಹಂಚಿಕೆಯ ನಂತರ ಉಳಿಕೆ ಜಮೀನನ್ನು ಸರ್ಕಾರದ ವತಿಯಿಂದ ಸಂಪೂರ್ಣ ಸರ್ವೆ ಮಾಡಿ, ರೆವೆನ್ಯೂ ಮಹಜರು ನಡೆಸಿ ಅಕ್ರಮ ಭೂ ಕಬಳಿಕೆದಾರರನ್ನು ಗುರ್ತಿಸಿ ವಿಚಾರಣೆಗೆ ಒಳಪಡಿಸಿ ಉಳಿಕೆ ಸರ್ಕಾರಿ ಭೂಮಿಯನ್ನು ಯಥಾವತ್ತಾಗಿ ರಾಯಸಂದ್ರ ಗ್ರಾಮದ ಅಭಿವೃದ್ಧಿಗೆ ಮತ್ತು ವಸತಿ ಹೀನರಿಗೆ ಹಾಗೂ ಇನ್ನಿತರ ಸಾರ್ವಜನಿಕ ಹಿತಾಸಕ್ತಿಗೆ ಭೂಮಿಯನ್ನು ಬಳಸಿಕೊಳ್ಳಬೇಕು. ಹಾಗೂ ಸರ್ಕಾರಿ ಭೂಮಿ ಎಂದು ನಾಮಫಲಕ ಅಳವಡಿಸಬೇಕು ಎಂದು ಒತ್ತಾಯಿಸಿದರು.

ದೂರುದಾರ ನಾರಾಯಣಸ್ವಾಮಿ ಮಾತನಾಡಿ, ಕೆಐಎಡಿ ನನಗೆ ಜಮೀನ ಬಗ್ಗೆ ವಂಚಿಸಿ ಪರಿಹಾರದ ಹಣ ನೀಡದೇ ಹಾಗೂ ನೋಟಿಸ್‌ ಕೂಡ ನೀಡದೆ ಯಾವುದೇ ರೀತಿಯ ಭೂ ಸ್ವಾಧೀನವನ್ನು ನನ್ನ ಗಮನಕ್ಕೆ ತರದೇ ಕಾನೂನು ಬಾಹಿರವಾಗಿ ಹಲವಾರು ದಾಖಲಾತಿಗಳನ್ನು ತಿರುಚಿ ಮನಸೋ ಇಚ್ಚೆಯಿಂದ ಕೆಐಎಡಿಬಿ ಅಧಿಧಕಾರಿಗಳು ಭೂ ಸ್ವಾಧೀನ ಪಡಿಸಿಕೊಂಡಿದ್ದು, ನನಗೆ ಬಹಳ ಅನ್ಯಾಯವಾಗಿದೆ ಎಂದು ಹೇಳಿದರು.

ಈ ವೇಳೆಯಲ್ಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್‌ರಾದ ಚಿಕ್ಕರಾಜಶೆಟ್ಟಿ, ಪ್ರದೀಪ್‌ ನಾಗೇಶ್‌, ಶಿವರಾಜ್‌, ತಹಶೀಲ್ದಾರ್‌ ಅಜಿತ್‌ಕುಮಾರ್‌ ರೈ, ಇಒ ಟಿ.ಮುರುಡಯ್ಯ, ಪುರಸಭಾ ಮುಖ್ಯಾಧಿಕಾರಿ ಹನುಮಂತೇಗೌಡ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚನ್ನಬಸಪ್ಪ, ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next