Advertisement

ಹೊಣೆ ನಿರ್ವಹಿಸಿ: ಶಾಸಕ ಮಠಂದೂರು

10:03 AM Apr 01, 2022 | Team Udayavani |

ಪುತ್ತೂರು: ಪುತ್ತೂರು ಜಾತ್ರೆ ಸುಸೂತ್ರವಾಗಿ ನಡೆಯಲು ಅಗತ್ಯ ಇರುವ ಎಲ್ಲ ಕ್ರಮಗಳನ್ನು ಇಲಾಖೆಗಳು ಕೈಗೊಳ್ಳುವಂತೆ ಶಾಸಕ ಸಂಜೀವ ಮಠಂದೂರು ಹೇಳಿದರು.

Advertisement

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ.10ರಿಂದ ಆರಂಭಗೊಳ್ಳುವ ಜಾತ್ರೆಯ ಕುರಿತು ವಿವಿಧ ಇಲಾಖೆಗಳಿಗೆ ಸಂಬಂಧಿಸಿ ಮಾ. 31ರಂದು ಮಹಾಲಿಂಗೇಶ್ವರ ಸಭಾ ಭವನದಲ್ಲಿ ನಡೆದ ಪೂರ್ವ ಸಿದ್ಧತೆ ಸಭೆಯಲ್ಲಿ ಅವರು ಮಾತನಾಡಿದರು. ಇಲಾಖೆಗೆ ಯಾವ ಜವಾಬ್ದಾರಿ ಇದೆಯೋ ಆ ಜವಾಬ್ದಾರಿಯನ್ನು ಅತ್ಯಂತ ಸಮರ್ಪಕ ರೀತಿಯಲ್ಲಿ ನಿಭಾಯಿಸಬೇಕು ಎಂದರು.

ಮೆಸ್ಕಾಂ, ಪೊಲೀಸ್‌, ಸಂಚಾರ ಪೊಲೀಸ್‌, ಅಗ್ನಿಶಾಮಕ, ನಗರಸಭೆ, ಆರೋಗ್ಯ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಂದ ಜಾತ್ರೆಯ ಸಿದ್ಧತೆಗೆ ಸಂಬಂಧಿಸಿ ಮಾಹಿತಿ ಪಡೆದ ಶಾಸಕ ಮಠಂದೂರು ವಾಹನ ನಿಲುಗಡೆ, ಜನರ ಸಂಚಾರಕ್ಕೆ ಸೂಕ್ತ ವ್ಯವಸ್ಥೆ, ವಿದ್ಯುತ್‌ ಸಂಪರ್ಕ ಹೀಗೆ ಇಲಾಖೆಗಳು ಕುಂದು ಕೊರತೆ ಉಂಟಾಗದ ಹಾಗೆ ಗಮನ ಹರಿಸುವಂತೆ ಅವರು ಹೇಳಿದರು.

ಜಾತ್ರೆಗೆ ಬರುವವರು ದೇವರ ಪಾಲಿಗೆ ಭಕ್ತರು. ನಮ್ಮ ಪಾಲಿಗೆ ಅತಿಥಿಗಳು. ಹಾಗಾಗಿ ಅವರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕು. ಪುತ್ತೂರು ಜಾತ್ರೆ ವ್ಯವಸ್ಥೆಯ ಶಿಸ್ತು ಮಾದರಿ ಆಗಿ ಗುರುತಿಸಬೇಕು. ಯಾವುದೇ ಅಹಿತಕರ ಘಟನೆ ಆಗದಂತೆ ಮುಂಜಾಗ್ರತೆ ಕ್ರಮ ವಹಿಸಬೇಕು. ಆಯಾ ಇಲಾಖೆಗಳಿಗೆ ದೇವಸ್ಥಾನ, ನಗರಸಭೆ ವತಿಯಿಂದ ಪೂರ್ಣ ಸಹಕಾರ ನೀಡಲಾಗುವುದು. ಭದ್ರತೆ ದೃಷ್ಟಿಯಿಂದ ಎಲ್ಲೆಲ್ಲ ಸಿಸಿ ಕೆಮರಾ, ಮಾಹಿತಿ ಕೇಂದ್ರ ಅಗತ್ಯ ಇದೆಯೋ ಅದನ್ನು ಜೋಡಿಸಿಕೊಳ್ಳಬೇಕು ಎಂದರು.

ಕಂಟ್ರೋಲ್‌ ರೂಂ ಸ್ಥಾಪಿಸಿ

Advertisement

ಸಹಾಯಕ ಕಮಿಷನರ್‌ ಗಿರೀಶ್‌ ನಂದನ್‌ ಮಾತನಾಡಿ, ನಾನು ಹಾಸನದಲ್ಲಿ ಇರುವಾಗ 15 ಲಕ್ಷ ಮಂದಿ ಸೇರುವ ಹಾಸನಾಂಬೆ ಜಾತ್ರೆಯ ನಿರ್ವಹಣೆಗೆ ವಿಶೇಷ ಆದ್ಯತೆ ನೀಡಿದ ಅನುಭವ ಇದೆ ಎಂದು ಹೇಳಿದರು. ಅದೇ ರೀತಿ ಪುತ್ತೂರು ಜಾತ್ರೆಯಲ್ಲೂ ವಿಶೇಷ ವ್ಯವಸ್ಥೆ ಮಾಡಬೇಕು. ಉತ್ತಮ ರೀತಿಯ ಕಂಟ್ರೋಲ್‌ ರೂಂ ಸ್ಥಾಪಿಸಬೇಕು. ಸಿಸಿ ಕೆಮರಾ ಜೋಡಣೆ, ಮಾಹಿತಿ ಕೇಂದ್ರಕ್ಕೆ ಒಂದೇ ಕಂಟ್ರೋಲ್‌ ರೂಂ, ಅಗ್ನಿಶಾಮಕದಳದ ವ್ಯವಸ್ಥೆ ಇತ್ಯಾದಿಗಳ ಬಗ್ಗೆ ನಿಗಾ ಇರಿಸಬೇಕು ಎಂದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್‌ ಮುಳಿಯ ಮಾತನಾಡಿ, ಬ್ರಹ್ಮಕಲಶಕ್ಕೆ ಬೇಕಾದ ವ್ಯವಸ್ಥೆ ಪುತ್ತೂರು ಜಾತ್ರೆಗೆ ಬೇಕು. ಹಾಗಾಗಿ ಈಗಾಗಲೇ ಹಲವು ಉಪಸಮಿತಿಗಳನ್ನು ಮಾಡಲಾಗಿದೆ ಎಂದರು. ನಗರಸಭೆ ಅಧ್ಯಕ್ಷ ಕೆ.ಜೀವಂಧರ್‌ ಜೈನ್‌, ಡಿವೈಎಸ್ಪಿ ಡಾ| ಗಾನಾ ಪಿ. ಕುಮಾರ್‌, ನಗರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next