ಯೋಗರಾಜ್ ಭಟ್ ನಿರ್ದೇಶನ ಹಾಗೂ ಮುಂಗಾರು ಮಳೆ ನಿರ್ಮಾಪಕ ಇ. ಕೃಷ್ಣಪ್ಪ ಅವರ ನಿರ್ಮಾಣದಲ್ಲಿ “ಮನದ ಕಡಲು’ ಎಂಬ ಸಿನಿಮಾ ಬರುತ್ತಿರುವುದು ನಿಮಗೆ ಗೊತ್ತೇ ಇದೆ. ಇತ್ತೀಚೆಗೆ ಈ ಚಿತ್ರದ ರೊಮ್ಯಾಂಟಿಕ್ ಹಾಡೊಂದು ಬಿಡುಗಡೆಯಾಗಿದೆ.
ಮುಂಗಾರು ಮಳೆ ಬಿಡುಗಡೆಯಾದ ದಿನವೇ ಮನದ ಕಡಲು ಚಿತ್ರಕ್ಕಾಗಿ ನಿರ್ದೇಶಕ ಯೋಗರಾಜ್ ಭಟ್ ಬರೆದಿರುವ, ವಿ.ಹರಿಕೃಷ್ಣ ಸಂಗೀತ ನೀಡಿರುವ ಹೂ ದುಂಬಿಯ ಕಥೆಯ ಎಂಬ ಮನಮೋಹಕ ಹಾಡು ಮೂಲಕ ಬಿಡುಗಡೆಯಾಗಿರುವುದು ವಿಶೇಷ.
ಸಂಜಿತ್ ಹೆಗ್ಡೆ ರೊಮ್ಯಾಂಟಿಕ್ ಹಾಡಿಗೆ ಧ್ವನಿಯಾಗಿದ್ದಾರೆ. ಹಾಡು ಬಿಡುಗಡೆ ವೇಳೆ ಮಾತನಾಡಿದ ನಿರ್ದೇಶಕ ಯೋಗರಾಜ್ ಭಟ್, “ಮುಂಗಾರು ಮಳೆ’ ಬಂದು ಹದಿನೆಂಟು ವರ್ಷ ಆಯಿತು ಅಂದರೆ ನಂಬಲಿಕ್ಕೆ ಆಗುತ್ತಿಲ್ಲ. ನಿನ್ನೆ ಮೊನ್ನೆ ಆದ ಹಾಗೆ ಇದೆ. ಇಂದಿಗೆ ಮುಂಗಾರು ಮಳೆ ಬಿಡುಗಡೆಯಾಗಿ ಹದಿನೆಂಟು ವರ್ಷಗಳಾಗಿದೆ. ಇದೇ ಸಂದರ್ಭದಲ್ಲಿ ಇ. ಕೃಷ್ಣಪ್ಪ ರವರ ನಿರ್ಮಾಣದಲ್ಲಿ ಹಾಗೂ ನನ್ನ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮನದ ಕಡಲು ಚಿತ್ರದ ಮೊದಲ ಗೀತೆಯನ್ನು ಬಿಡುಗಡೆ ಮಾಡುತ್ತಿದ್ದೇವೆ. ಈ ಹಾಡು ಹುಟ್ಟಿದ್ದು ನಿರ್ಮಾಪಕರ ತೋಟದ ಮನೆಯಲ್ಲಿ. ಕಂಪೋಸ್ ಆಗಿದ್ದು ನನ್ನ ಆಫೀಸ್ನ ಮೇಲಿರುವ ಸ್ಟುಡಿಯೋದಲ್ಲಿ. ಹರಿಕೃಷ್ಣ ಅವರ ಸಂಗೀತ ಸಂಯೋಜನೆಯಲ್ಲಿ ಸಂಚಿತ್ ಹೆಗಡೆ ಗಾಯನದಲ್ಲಿ ಮುರಳಿ ನೃತ್ಯ ಸಂಯೋಜನೆಯಲ್ಲಿ ಹೂ ದುಂಬಿಯ ಕಥೆಯ ಹಾಡು ಮೂಡಿಬಂದಿದೆ. ಸುಮುಖ ಹಾಗು ರಾಶಿಕಾ ಶೆಟ್ಟಿ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ’ ಎಂದರು.
ಹದಿನೆಂಟು ವರ್ಷಗಳ ನಂತರ ಯೋಗರಾಜ್ ಭಟ್ ಅವರ ಜೊತೆ ಮತ್ತೆ ಚಿತ್ರ ಮಾಡುತ್ತಿದ್ದೇನೆ. ಯಾವುದೇ ಕೊರತೆ ಬಾರದ ಹಾಗೆ ಒಂದೊಳ್ಳೆ ಸಿನಿಮಾ ಮಾಡಿದ್ದೀನಿ. ಮುಂದಿನದ್ದು ಪ್ರೇಕ್ಷಕರಿಗೆ ಬಿಟ್ಟಿದ್ದು ಎನ್ನುವುದು ನಿರ್ಮಾಪಕ ಇ.ಕೃಷ್ಣಪ್ಪ ಅವರ ಮಾತು. ಗಾಯಕ ಸಂಚಿತ್ ಹೆಗೆª ಕೂಡಾ ಹಾಡಿನ ಬಗ್ಗೆ ಮಾತನಾಡಿದರು.
ನಾಯಕ ಸುಮುಖ ಮಾತನಾಡಿ, “ನಾನು ಯೋಗ ರಾಜ್ ಭಟ್ ಅವರ ಸಾಹಿತ್ಯಕ್ಕೆ, ಹರಿಕೃಷ್ಣ ಅವರ ಸಂಗೀತಕ್ಕೆ ಹಾಗೂ ಸಂಜಿತ್ ಅವರ ಗಾಯನಕ್ಕೆ ಅಭಿಮಾನಿ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ’ ಎಂದರು.
ಸಹ ನಿರ್ಮಾಪಕ ಗಂಗಾಧರ್, ಕಾರ್ಯಕಾರಿ ನಿರ್ಮಾಪಕ ಪ್ರತಾಪ್, ನಾಯಕಿಯರಾದ ಅಂಜಲಿ ಅನೀಶ್, ರಾಶಿಕಾ ಶೆಟ್ಟಿ, ಹಿರಿಯ ನಟ ದತ್ತಣ್ಣ, ಶಿವಧ್ವಜ್ ಸಿನಿಮಾ ಹಾಗೂ ಹಾಡಿನ ಬಗ್ಗೆ ಮಾತನಾಡಿದರು.