Advertisement

ಮನ ಸೂರೆಗೊಂಡ ಮೈಮೆದ ಬಬ್ಬುಸ್ವಾಮಿ

03:50 AM Mar 31, 2017 | |

ಸಾಹಿತಿ ಜಾನಕಿ ಬ್ರಹ್ಮಾವರ ಇವರ ಕೃತಿಯನ್ನು ಆಧರಿಸಿ ವಿ| ಕೆ. ಭವಾನಿಶಂಕರ್‌ ಇವರ ನೃತ್ಯ ನಿರ್ದೇಶನದಲ್ಲಿ ಮೈಮೆದ ಬಬ್ಬುಸ್ವಾಮಿ ಎಂಬ ನೃತ್ಯ ರೂಪಕವನ್ನು ಉಡುಪಿಯ ನೇಜಾರು ಕೆಳಾರ್ಕಳಬೆಟ್ಟು ಇಲ್ಲಿ ಭವ್ಯವಾಗಿ ನಿರ್ಮಿಸಿದ ನವೀಕೃತ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಉದ್ಘಾಟನಾ ಸಮಾರಂಭದ ಸಮಾರೋಪ ವೇದಿಕೆಯಲ್ಲಿ ನಡೆಸಿಕೊಟ್ಟರು. 

Advertisement

ಶ್ರೀ ಬಬ್ಬುಸ್ವಾಮಿಯ ಮಹಿಮೆಯನ್ನು ಸಾರುವ ನೃತ್ಯ ರೂಪಕದಲ್ಲಿ ಶ್ರೀ ಬಬ್ಬುಸ್ವಾಮಿ ತಾಯಿ ಕಚ್ಚಾರ ಮಾಲ್ತಿದೇವಿಯ ಪುಣ್ಯ ಗರ್ಭದಲ್ಲಿ ಜನಿಸಿ ತನ್ನ ಹುಟ್ಟಿನಿಂದಲೇ ಕಾರ್ಣಿಕದ ಮಹಿಮೆಯನ್ನು ತೋರುವ ಅತ್ಯಪೂರ್ವ ಚಿತ್ರಣವು ವಿ| ಭವಾನಿಶಂಕರ್‌ ಅವರ ನೃತ್ಯ ನಿರ್ದೇಶನದಲ್ಲಿ ಅತ್ಯದ್ಭುತವಾಗಿ ಮೂಡಿಬಂತು. ಶಾಸ್ತ್ರೀಯ ಶೈಲಿಯಲ್ಲಿ ಇದು ಒಂದು ವಿನೂತನ ಪ್ರಯೋಗ. ಪುರಾಣ ಪ್ರಸಂಗಗಳನ್ನು ಆಧರಿಸಿ ದೇವಾಧಿದೇವತೆಗಳನ್ನು ಸ್ತುತಿಸಿ ನೃತ್ಯ ರೂಪಕವನ್ನು ಸಾಮಾನ್ಯವಾಗಿ ಎಲ್ಲರೂ ಸಾದರಪಡಿಸುತ್ತಾರೆ. ಆದರೆ ಒಂದು ದೈವದ ಕಾರ್ಣಿಕವನ್ನು ಸಾರುವ ಶಾಸ್ತ್ರೀಯ ನೃತ್ಯ ರೂಪಕ ಸಾದರಪಡಿಸಿರುವುದು ಬಹುಶಃ ಅಪರೂಪದ ಪ್ರಯೋಗ ಎಂದರೂ ಅತಿಶಯೋಕ್ತಿಯಾಗಲಾರದು. ಕಚ್ಚಾರ ಮಾಲ್ತಿ ದೇವಿ ಸತ್ಯದ ಗರ್ಭ ಧರಿಸಿದಾಗ ತನ್ನ ಸತ್ಯಧರ್ಮವನ್ನು ಪತ್ತೇರಿ ಕೂಟದಲ್ಲಿ ಜಗತ್ತಿಗೆ ತೋರ್ಪಡಿಸುವ ರೀತಿ, ತಾಯಿ ಕಚ್ಚಾರ ಮಾಲ್ತಿದೇವಿಯ ಪುಣ್ಯಗರ್ಭದಲ್ಲಿ ಜನಿಸಿದ ಶ್ರೀ ಬಬ್ಬುಸ್ವಾಮಿ ಹುಟ್ಟಿನಿಂದಲೇ ತನ್ನ ಕಲೆ ಕಾರ್ನಿಕವನ್ನು ತೋರಿಸುತ್ತಾ ಸಿರಿಗೊಂಡೆ ದೇವಿ ಹಾಗೂ ಕೊಡಂಗೆ ಬನ್ನಾರರ ಮಮತೆಯ ಮಡಿಲಲ್ಲಿ ಬೆಳೆದು ತನ್ನ ಮಂತ್ರಶಕ್ತಿ, ಬುದ್ಧಿಶಕ್ತಿ ಹಾಗೂ ಶಿಲ್ಪ ವಿದ್ಯೆಯಲ್ಲಿ ಹೆಸರು ಗಳಿಸಿದ ಬಬ್ಬುವಿನ ಅತಿಮಾನುಷ ಶಕ್ತಿಯಿಂದಾಗಿ “”ಅರ್ಕಲ್ಲ ಗುಡ್ಡೆ ಬೋರ್ಕಲ್ಲ ಪದವಿನಲ್ಲಿ” ದನ ಕಾಯುವಾಗ ಮೊಸಳೆ ರೂಪದಲ್ಲಿದ್ದ ಯಕ್ಷನಿಗೆ ಮೋಕ್ಷ ನೀಡಿ ಬಾರಗದ ಮಕ್ಕಳ ಕುತಂತ್ರಕ್ಕೆ ಅವರನ್ನೇ ಬಲಿ ಮಾಡಿ ಅನಂತರ ಅವರನ್ನು ಕ್ಷಮಿಸಿ ಬಬ್ಬು ಬಾರಗ ಎಂದು ಮೆರೆಯುವ ರೀತಿ, ಮುಂದೆ ಕೋಟೆದ ಬಬ್ಬುಸ್ವಾಮಿ, ದೈವರಾಜ ಎಂದೆಲ್ಲ ಹೆಸರು ಪಡೆದ ಶ್ರೀ ಬಬ್ಬುಸ್ವಾಮಿಯ ಮಹಿಮೆಯನ್ನು ಶ್ರೀ ಭಾಮರಿ ನಾಟ್ಯಾಲಯದ ನಾಟ್ಯಗರಡಿಯಲ್ಲಿ ಪಳಗಿದ ವಿದ್ಯಾರ್ಥಿಗಳು ವಿಹಂಗಮವಾಗಿ 
ನಡೆಸಿಕೊಟ್ಟರು. 

ಇದಕ್ಕೆ ಕಳಶಪ್ರಾಯ ಎಂಬಂತೆ ಹಿನ್ನಲೆ ಸಂಗೀತದಲ್ಲಿ ಹಾಡುಗಾರಿಕೆ- ನಟುವಾಂಗದಲ್ಲಿ ವಿ| ಕೆ. ಭವಾನಿ ಶಂಕರ್‌, ಹಾಡು ಗಾರಿಕೆಯಲ್ಲಿ ಉಷಾ ಹೆಬ್ಟಾರ್‌ ಮಣಿಪಾಲ, ದಿವ್ಯಾ ಮಣಿಪಾಲ ಇವರ ಕಂಠಸಿರಿ ನೃತ್ಯ ರೂಪಕವನ್ನು ಇನ್ನಷ್ಟು ವೈಭವೀಕರಿಸಿತು. ವೈಭವ್‌ ಮಣಿಪಾಲ ಇವರ ಪಿಟೀಲು ವಾದನ, ಹಿರಣ್ಮಯ ಹಿರಿಯಡ್ಕ ಇವರ ಮೃದಂಗ, ಮೋಹನ್‌ ಮಲ್ಪೆ ಇವರ ರಿದಂಪ್ಯಾಡ್‌, ರೋಹಿತ್‌ ಮಲ್ಪೆ ಇವರ ಕೀಬೋರ್ಡ್‌ ಇದ್ದ ಹಿಮ್ಮೇಳ ರೂಪಕಕ್ಕೆ ಇನ್ನಷ್ಟು ಮೆರುಗನ್ನು ನೀಡಿದರೆ, ದೀಪಿಕಾ ಮೋಹನ್‌ ಮಲ್ಪೆ ಇವರ ಸಂಭಾಷಣೆ ಮನೋಜ್ಞವಾಗಿ ಮೂಡಿಬಂತು. ವಿಶ್ವನಾಥ ಅಮ್ಮುಂಜೆ ಹಾಗೂ ಅನಿಲ್‌ ನೇಜಾರು ಇವರ ಪ್ರಸಾಧನ  ರೂಪಕಕ್ಕೆ ದೈವಿಕ ಮಹತ್ವವನ್ನು ನ್ಯಾಯೋಚಿತವಾಗಿ ದೊರಕಿಸಿದರೆ ರಂಗ ವಿನ್ಯಾಸದಲ್ಲಿ ರೂಪಕಕ್ಕೆ ಪೂರಕವಾಗಿ ಬೈಲಕೆರೆ, ಗುತ್ತಿನಮನೆ, ಕೈಲಾಸ, ವೈಕುಂಠ, ಆಸ್ಥಾನ ಮುಂತಾದವುಗಳಲ್ಲಿ ಆಶಿತ್‌ ನೇಜಾರು ಇವರ ಪರಿಕಲ್ಪನೆಯಲ್ಲಿ ಪ್ರಶಾಂತ್‌ ಅಮ್ಮುಂಜೆ ಹಾಗೂ ಮಣೀಶ್‌ ಅಮ್ಮುಂಜೆ ಇವರ ಕೈಚಳಕದಲ್ಲಿ ಅಚ್ಚುಕಟ್ಟಾದ ಮೆರುಗನ್ನು ನೀಡಿತು. ರಂಗವಿನ್ಯಾಸಕ್ಕೆ ತಕ್ಕಂತೆ ಸಂದಭೋìಚಿತ ಬೆಳಕಿನ ವಿನ್ಯಾಸ ವ್ಯವಸ್ಥಿತವಾಗಿ ಮೂಡಿಬಂದು ಜೀವಕಳೆ ತುಂಬುವಲ್ಲಿ ಯಶಸ್ವಿಯಾಯಿತು. 

ಒಟ್ಟಾರೆಯಾಗಿ ಶಾಸ್ತ್ರೀಯ ಶೈಲಿಯಲ್ಲಿ ದೈವದ ಕಾರ್ಣಿಕ ಸಾರುವ ವಿನೂತನ ಪ್ರಯೋಗ ರತ್ನಾಕರ್‌ ನೇಜಾರು ಇವರ ಮಾರ್ಗದರ್ಶನದಲ್ಲಿ ಕೆ. ಭವಾನಿ ಶಂಕರ್‌ ನೃತ್ಯ ನಿರ್ದೇಶನದಲ್ಲಿ ಸಕಾಲಿಕವಾಗಿ ಮೂಡಿಬಂತು. ಈ ನೃತ್ಯ ರೂಪಕವು ಇನ್ನಷ್ಟು ವೇದಿಕೆಯಲ್ಲಿ ಪ್ರಯೋಗಗಳನ್ನು ನಡೆಸಲು ಯೋಗ್ಯ ರೂಪಕ ಎನ್ನುವುದರಲ್ಲಿ ಎರಡು ಮಾತಿಲ್ಲ.

ಸದಾಶಿವ ಕೊಳಲಗಿರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next