ಕೊಚ್ಚಿ: ವಿದೇಶಕ್ಕೆ ಪ್ರಯಾಣಿಸಲು ತನ್ನ ವೀಸಾ ಪ್ರಕ್ರಿಯೆಯಲ್ಲಿ ವಿಳಂಬಕ್ಕೆ ಸಂಬಂಧಿಸಿದಂತೆ ವಿವಾದದ ಹಿನ್ನೆಲೆಯಲ್ಲಿ ಮಂಗಳವಾರ ಇಲ್ಲಿನ ಟ್ರಾವೆಲ್ ಏಜೆನ್ಸಿಯ ಮಹಿಳಾ ಉದ್ಯೋಗಿಯೊಬ್ಬರ ಕುತ್ತಿಗೆಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದಾನೆ.
ಇರಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಎರ್ನಾಕುಲಂ ಸೌತ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಿಳೆಯನ್ನು ಸಮೀಪದ ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಲಾಗಿದ್ದು, ಸದ್ಯ ಆಕೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅವರು ತಿಳಿಸಿದ್ದಾರೆ.
ವ್ಯಕ್ತಿ ತನ್ನ ವೀಸಾ ಸ್ಥಿತಿಯನ್ನು ವಿಚಾರಿಸಲು ಟ್ರಾವೆಲ್ ಏಜೆನ್ಸಿಯನ್ನು ತಲುಪಿದಾಗ ಘಟನೆ ನಡೆದಿದೆ. ಟ್ರಾವೆಲ್ ಏಜೆನ್ಸಿ ಮಾಲಕನ ಮೇಲೆ ಹಲ್ಲೆ ನಡೆಸುವ ಉದ್ದೇಶದಿಂದ ಚಾಕು ಹೊತ್ತೊಯ್ದಿದ್ದ. ಮಾಲಕ ಅಲ್ಲಿಲ್ಲ ಎಂದು ಮಹಿಳಾ ಉದ್ಯೋಗಿ ಹೇಳಿದಾಗ ಆತ ಆಕೆಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಯು ತನ್ನ ವೀಸಾಕ್ಕಾಗಿ ಟ್ರಾವೆಲ್ ಏಜೆನ್ಸಿಗೆ ಸ್ವಲ್ಪ ಹಣವನ್ನು ಪಾವತಿಸಿದ್ದ ಮತ್ತು ವಿಳಂಬವಾಗಿದ್ದು ಘಟನೆಗೆ ಕಾರಣವೆಂದು ತೋರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.