ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟ ರಾಷ್ಟ್ರ ರಾಜಧಾನಿಯಲ್ಲಿ ಹಿಂಸಾರೂಪ ತಾಳಿದೆ ಮತ್ತು ಈ ಹಿಂಸೆಗೆ ಈಗಾಗಲೇ ಏಳು ಜನರು ಬಲಿಯಾಗಿದ್ದಾರೆ.
ಈ ನಡುವೆ ಉತ್ತರ ದೆಹಲಿ ಭಾಗದಲ್ಲಿ ಪೊಲೀಸರತ್ತ ಗುಂಡು ಹಾರಿಸಿದ್ದ ಕೆಂಪು ಟೀ ಶರ್ಟ್ ಧಾರಿ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಶಾರುಖ್ ಎಂದು ಗುರುತಿಸಲಾಗಿದೆ.
ಪೊಲೀಸರತ್ತ ಗುಂಡು ಹಾರಿಸಿರುವ ವ್ಯಕ್ತಿಯನ್ನು ಬಂಧಿಸಿರುವ ವಿಚಾರವನ್ನು ದೆಹಲಿ ಪೊಲೀಸರು ಪತ್ರಿಕಾಗೋಷ್ಠಿಯಲ್ಲಿ ಖಚಿತಪಡಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರು ಹಾಗೂ ಕಾಯ್ದೆ ಬೆಂಬಲಿಸಿ ಹೋರಾಟ ನಡೆಸುತ್ತಿದ್ದವರ ನಡುವೆ ಘರ್ಷಣೆ ಸಂಭವಿಸಿ ಇದುವರೆಗೆ 76 ಜನರು ಗಾಯಗೊಂಡಿದ್ದಾರೆ. ದೆಹಲಿಯ ಈಶಾನ್ಯ ಭಾಗದ ಒಟ್ಟು ಹತ್ತು ಕಡೆಗಳಲ್ಲಿ ಈಗಾಗಲೇ ಸೆಕ್ಷನ್ 144ನ್ನು ಜಾರಿಗೊಳಿಸಲಾಗಿದೆ.
ಜಾಫರಾಬಾದ್, ಮೌಜ್ ಪುರ, ಬಾಬರ್ ಪುರ, ಗೋಕುಲ್ ಪುರಿ, ಜೋಹ್ರಿ ಎನ್ಕ್ಲೇವ್ ಮತ್ತು ಶಿವ ವಿಹಾರಿ ಪ್ರದೇಶಗಳಲ್ಲಿ ಭಾರೀ ಸಂಖ್ಯೆಯಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.