Advertisement

ಪತ್ನಿಗೆ ವಂಚನೆ: ವಿದೇಶ ಪ್ರಯಾಣಕ್ಕೆ ಕೋರ್ಟ್‌ ತಡೆ

09:30 AM Mar 27, 2018 | Karthik A |

ಉಡುಪಿ: ಎರಡನೇ ವಿವಾಹವಾಗಿ ಅಮಾಯಕ ಯುವತಿಯನ್ನು ವಂಚಿಸಿದ ಕುಂದಾಪುರ ತಾಲೂಕಿನ ನಾಡಾ ಗ್ರಾಮದ ಜಗದೀಶ ಯಾನೆ ಜಗನ್ನಾಥನ ವಿದೇಶ ಪ್ರಯಾಣವನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕುಂದಾಪುರ ಸಿವಿಲ್‌ ಮತ್ತು ಜೆಎಂಎಫ್ಸಿ ನ್ಯಾಯಾಧೀಶರು ಪಾಸ್‌ಪೋರ್ಟ್‌ ಕಚೇರಿಗೆ ಆದೇಶ ನೀಡಿದ್ದಾರೆ ಎಂದು ಉಡುಪಿಯ ಮಾನವ ಹಕ್ಕುಗಳ ಪ್ರತಿಷ್ಠಾನದ ಅಧ್ಯಕ್ಷ ಡಾ| ರವೀಂದ್ರನಾಥ ಶ್ಯಾನುಭಾಗ್‌ ತಿಳಿಸಿದ್ದಾರೆ. 

Advertisement

ಮಾ.26ರಂದು ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, “ವಿದೇಶದಲ್ಲಿ ಉದ್ಯೋಗಿಯಾಗಿರುವ ಜಗದೀಶ 2012ರಲ್ಲಿ ಐರೋಡಿ ಗ್ರಾಮದ ಅಮಿತಾಳನ್ನು ವಿವಾಹವಾಗಿದ್ದಾನೆ. ಆದರೆ ಆಕೆಯನ್ನು ನೋಡಿಕೊಳ್ಳುತ್ತಿರಲಿಲ್ಲ. ಅನಂತರ ಕೆಲವು ವರ್ಷಗಳ ಬಳಿಕ ಅಮಿತಾಳಿಗೆ ಆತ ಈ ಹಿಂದೆಯೇ ಬೇರೊಂದು ವಿವಾಹ ಮಾಡಿಕೊಂಡಿರುವುದು ತಿಳಿಯಿತು. ಈ ಬಗ್ಗೆ ಎರಡೂ ಕುಟುಂಬದ ಹಿರಿಯರ ನಡುವೆ ಸಂಧಾನ ನಡೆದು ಜಗದೀಶನು ಅಮಿತಾಳಿಗೆ 25 ಲ.ರೂ. ಪರಿಹಾರ ನೀಡಬೇಕು, ವಿವಾಹವನ್ನು ಕೋರ್ಟ್‌ ಮೂಲಕ ರದ್ದುಗೊಳಿಸಬೇಕು, ವಿಚ್ಛೇದನ ದೊರೆತ ಕೂಡಲೇ ಉಳಿದ ಹಣ ಪಾವತಿಸಬೇಕು ಎಂಬ ತೀರ್ಮಾನವಾಯಿತು. ಮೊದಲ ಕಂತು 10 ಲ.ರೂ.ಗಳನ್ನು ಜಗದೀಶ ಪಾವತಿಸಿದ. ಅನಂತರ ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನಕ್ಕಾಗಿ ಸಿವಿಲ್‌ ಕೋರ್ಟ್‌ಗೆ ಸಲ್ಲಿಸಬೇಕಾದ ಅರ್ಜಿಗೂ ಸಹಿ ಹಾಕಿದ. ಆದರೆ 15 ಲ.ರೂ. ಪಾವತಿಸಲಿಲ್ಲ. ನ್ಯಾಯಾಲಯದ ವಿಚಾರಣೆಗೆ ಹಾಜರಾಗುವುದನ್ನು ಕೂಡ ನಿಲ್ಲಿಸಿದ. ಈ ಕುರಿತು ಅಮಿತಾ ಮತ್ತು ಆಕೆಯ ಹೆತ್ತವರು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನಕ್ಕೆ ದೂರು ನೀಡಿ ಸಹಕಾರ ಯಾಚಿಸಿದರು. ಅನಂತರ ಪ್ರತಿಷ್ಠಾನದಿಂದ ಕಾನೂನು ನೆರವು ನೀಡಲಾಯಿತು’ ಎಂದು ತಿಳಿಸಿದರು. ಈ ಬಗ್ಗೆ ಜಿಲ್ಲಾಡಳಿತಕ್ಕೂ ದೂರು ನೀಡಲಾಯಿತು. ಡಿಸಿ  ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಯವರಿಗೆ ನಿರ್ದೇಶನ ನೀಡಿ ಕೋರ್ಟಲ್ಲಿ ದೂರು ದಾಖಲಿಸಿದರು. ಅದರಂತೆ ಕೋರ್ಟ್‌ ವಿದೇಶ ಪ್ರಯಾಣಕ್ಕೆ ತಡೆ ನೀಡಿದೆ ಎಂದರು. 

ವಂಚಿತ ಯುವತಿಯರು ಹೋರಾಡಿ
ಅಮಿತಾಳಂತೆ ಅನೇಕ ಮಂದಿ ವಂಚಿತರಾಗಿರಬಹುದು. ಅವರು ಕೂಡ ಮುಂದೆ ಬಂದು ತಮಗಾಗಿರುವ ತೊಂದರೆಯನ್ನು ಹೇಳಿಕೊಳ್ಳಬೇಕು. ಅನ್ಯಾಯದ ವಿರುದ್ಧ ಹೋರಾಟ ನಡೆಸುವಂತಾಗಬೇಕು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕಾಗಿದೆ ಎಂದು ಡಾ| ಶ್ಯಾನುಭಾಗ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next