Advertisement
ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಚಿತ್ರೀಕರಣಗೊಂಡಿರುವ ಈ ವಿಶೇಷ ಕಂತಿನಲ್ಲಿ ‘ಮ್ಯಾನ್ ವರ್ಸಸ್ ವೈಲ್ಡ್’ ಸರಣಿಗಳ ಮೂಲಕ ವಿಶ್ವಖ್ಯಾತಿ ಪಡೆದಿರುವ ನಿರೂಪಕ ಬೇರ್ ಗ್ರಿಲ್ಸ್ ಅವರೊಂದಿಗೆ ಪ್ರಧಾನಿ ಮೋದಿ, ಕಾಡು-ಮೇಡು, ಬೆಟ್ಟ-ಗುಡ್ಡ, ಕಣಿವೆ- ಕಂದರಗಳಲ್ಲಿ ಹತ್ತಿಳಿದಿದ್ದಾರೆ. ಜತೆಗೆ, ಪರಿಸರ ಬದಲಾವಣೆ ಕುರಿತಂತೆ ಬೇರ್ ಜತೆಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಈಗಾಗಲೇ ಆ ವಿಶೇಷ ಕಂತಿನ ವಿಡಿಯೋ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆ. 12ರಂದು ಪ್ರಸಾರಗೊಳ್ಳುವ ಪೂರ್ಣ ಕಂತಿನ ಬಗ್ಗೆ ಎಲ್ಲರೂ ತುದಿಗಾಲಲ್ಲಿ ಕಾಯುವಂತೆ ಮಾಡಿದೆ.
ಕಾರ್ಯಕ್ರಮದ ನಿರೂಪಕ ಬೇರ್ ಅವರು, ”ವಿಶ್ವ ನಾಯಕರೊಬ್ಬರು ನಾನು ನಡೆಸಿಕೊಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನ್ನ ಪಾಲಿಗೆ ಸಂದ ಅತಿ ದೊಡ್ಡ ಗೌರವ. ಭಾರತದಂಥ ದೊಡ್ಡ ರಾಷ್ಟ್ರವನ್ನು ಮುನ್ನಡೆಸುತ್ತಿರುವ ಈ ಮಹಾನ್ ನಾಯಕನನ್ನು ಹತ್ತಿರದಿಂದ ನೋಡುವ, ಅವರ ವಿಚಾರಗಳನ್ನು ಖುದ್ದಾಗಿ ಕೇಳುವ ಅವಕಾಶ ಸಿಕ್ಕಿದ್ದಕ್ಕೆ ನಾನು ಪುಳಕಿತನಾಗಿದ್ದು ನಿಜ. ಈ ಕಂತಿನಲ್ಲಿ ಹಿಂದೆಂದೂ ಕಂಡಿರದ ಮೋದಿಯವರ ಮತ್ತೂಂದು ಮುಖವನ್ನು ಕಾಣಬಹುದು” ಎಂದಿದ್ದಾರೆ.
ಒಬಾಮ ಜತೆಗೂ ಒಂದು ಕಂತು
2015ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು, ಬೇರ್ ಅವರು ನಡೆಸಿಕೊಡುತ್ತಿದ್ದ ರನ್ನಿಂಗ್ ವೈಲ್ಡ್ ವಿತ್ ಬೇರ್ ಗ್ರಿಲ್ಸ್ ಎಂಬ ಕಾರ್ಯಕ್ರಮದ ವಿಶೇಷ ಕಂತೊಂದರಲ್ಲಿ ಪಾಲ್ಗೊಂಡಿದ್ದರು. ಅಮೆರಿಕದ ಅಲಾಸ್ಕಾ ಪರ್ವತ ಶ್ರೇಣಿಗಳಲ್ಲಿ ಬೇರ್ ಜತೆಗೆ ಓಡಾಡಿದ್ದ ಅವರು, ಜಾಗತಿಕ ತಾಪಮಾನ ಹೆಚ್ಚಳ ಮುಂತಾದ ವಿಚಾರಗಳ ಬಗ್ಗೆ ಚರ್ಚಿಸಿದ್ದರು. ಇದನ್ನು ಬೇರ್ ಅವರೇ ಟ್ವಿಟರ್‌ನಲ್ಲಿ ಜ್ಞಾಪಿಸಿಕೊಂಡಿದ್ದಾರೆ.
ಮನಃಪೂರ್ವಕವಾಗಿ ಒಪ್ಪಿದೆ
ಈ ವಿಭಿನ್ನ ಕಾರ್ಯಕ್ರಮದಲ್ಲಿ ಭಾಗವಹಿಸಿರುವದರ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿರುವ ಮೋದಿ, ”ಹಿಮಾಲಯದ ಪರ್ವತ ಶ್ರೇಣಿಗಳು, ದಟ್ಟ ಕಾನನದ ನಡುವೆ ನನ್ನ ಜೀವನದ ಅನೇಕ ವರ್ಷಗಳನ್ನು ಕಳೆದವನು ನಾನು. ಆ ಪರಿಸರವು ನನ್ನ ಜೀವನದಲ್ಲಿ ಗಾಢವಾದ ಹಾಗೂ ಅಚ್ಚಳಿಯದ ಅನುಭೂತಿಯನ್ನು ತಂದಿವೆ. ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದ ನಿರ್ಮಾಪಕರು, ನನ್ನ ಬಳಿ ಆಗಮಿಸಿ ರಾಜಕೀಯ ಹೊರತಾದ, ಅದರಲ್ಲೂ ನಿಸರ್ಗದ ಜತೆಗೆ ಸಮಯ ಕಳೆಯುವಂಥ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನನ್ನನ್ನು ಕೋರಿದಾಗ ನನಗೆ ಇಲ್ಲ ಎನ್ನಲಾಗಲಿಲ್ಲ. ಮನಃಪೂರ್ವಕವಾಗಿ ಒಪ್ಪಿಕೊಂಡೆ” ಎಂದಿದ್ದಾರೆ.
ಪ್ರತಿಪಕ್ಷಗಳ ವ್ಯಾಪಕ ಟೀಕೆ
ವಿಶೇಷ ಕಂತಿನ ವಿಡಿಯೋ ಜಾಹಿರಾತು ತುಣುಕುಗಳು ಪ್ರಸಾರಗೊಳ್ಳಲಾರಂಭಿಸಿದ ಕೂಡಲೇ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಈ ಕಂತನ್ನು ಪುಲ್ವಾಮಾ ದಾಳಿ ನಡೆದ ಸಂದರ್ಭದಲ್ಲಿ ಚಿತ್ರೀಕರಿಸಲಾಗಿತ್ತು. 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿರುವ ಸುದ್ದಿ ಅವರಿಗೆ ತಿಳಿದರೂ ಅವರು ಚಿತ್ರೀಕರಣ ಮುಂದುವರಿಸಿದ್ದರು ಎಂದು ಟೀಕಿಸಿದೆ.