Advertisement

“ಮ್ಯಾನ್‌ vs ವೈಲ್ಡ್‌’ದಾಖಲೆ

01:02 AM Aug 23, 2019 | Team Udayavani |

ಮುಂಬೈ: ಇದೇ ತಿಂಗಳ 12 ರಾತ್ರಿ, ಡಿಸ್ಕವರಿ ವಾಹಿನಿಯಲ್ಲಿ ಪ್ರಸಾರವಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿದ್ದ, ‘ಮ್ಯಾನ್‌ ವರ್ಸಸ್‌ ವೈಲ್ಡ್’ನ ವಿಶೇಷ ಸಂಚಿಕೆ, ವಿಶ್ವದಲ್ಲಿ ಅತಿ ಹೆಚ್ಚು ವೀಕ್ಷಕರನ್ನು ತಲುಪಿದ ಸಂಚಿಕೆಯೆಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ ಹೊಸ ಇತಿಹಾಸ ಬರೆದಿದೆ. ಭಾರತದ ಮಟ್ಟಿಗೆ ಹೇಳುವುದಾದರೆ, ಇನ್ಫೊಟೇನ್‌ ಮಾದರಿಯ ಕಾರ್ಯಕ್ರಮವೊಂದು ಇಷ್ಟು ದೊಡ್ಡ ಮಟ್ಟದಲ್ಲಿ ಜನರನ್ನು ತಲುಪಿದ ಮೊದಲ ಉದಾಹರಣೆ ಇದಾಗಿದೆ ಎಂದು ಡಿಸ್ಕವರಿ ವಾಹಿನಿ ಹೇಳಿದೆ. ಜಗತ್ತಿನ 180 ದೇಶಗಳಲ್ಲಿ ಪ್ರಸಾರವಾಗಿದ್ದ ಈ ಕಾರ್ಯಕ್ರಮವು, ಭಾರತದಲ್ಲಿ ಒಟ್ಟಾರೆಯಾಗಿ 30.69 ಲಕ್ಷ ಜನರನ್ನು ಏಕಕಾಲದಲ್ಲಿ ತಲುಪಿದ್ದು, ಆ ಮೂಲಕ ನಾನಾ ದೇಶಗಳಲ್ಲಿ ಜಾಲವನ್ನು ಹೊಂದಿರುವ ಸ್ಟಾರ್‌ ಟಿವಿಯ (ಒಟ್ಟಾರೆ ವೀಕ್ಷಣೆ 36.70 ಲಕ್ಷ) ಜನಪ್ರಿಯತೆಯನ್ನೂ ಹಿಂದಿಕ್ಕಿ, ಹೊಸ ಇತಿಹಾಸ ಬರೆದಿದೆ.

Advertisement

ಮತ್ತೂಂದೆಡೆ, ಈ ಸಂಚಿಕೆಯೊಂದೇ ಪ್ರೀಮಿಯರ್‌ ಪ್ರಸಾರ ಹಾಗೂ ಸಾಮಾಜಿಕ ಜಾಲತಾಣಗಳಿಂದ, 360 ಕೋಟಿಯಷ್ಟು ಇಂಪ್ರಷನ್‌ಗಳನ್ನು ಗಳಿಸಿದ್ದು, ಅಮೆರಿಕದ ಸೇರಿದಂತೆ ನಾನಾ ದೇಶಗಳಲ್ಲಿ ಜನಪ್ರಿಯಗೊಂಡಿರುವ ‘ಸೂಪರ್‌ ಬೌಲ್ 53’ ಪಂದ್ಯಾವಳಿಯ ನೇರಪ್ರಸಾರದ ಇಂಪ್ರಷನ್‌ನನ್ನೂ (340 ಕೋಟಿ) ಹಿಂದಿಕ್ಕಿ ಮತ್ತೂಂದು ದಾಖಲೆ ಬರೆದಿದೆ. ಇದಲ್ಲದೆ, ಮ್ಯಾನ್‌ ವರ್ಸಸ್‌ ವೈಲ್ಡ್ ಸಂಚಿಕೆಯನ್ನು ಒಬ್ಬ ವೀಕ್ಷಕ ಸರಾಸರಿಯಾಗಿ 29.2 ನಿಮಿಷಗಳವರೆಗೆ ನಿರಂತರವಾಗಿ ವೀಕ್ಷಿಸಿದ್ದೂ ಸಹ ಆ ಕಾರ್ಯಕ್ರಮದ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದು ಡಿಸ್ಕವರಿ ವಾಹಿನಿ ಹೇಳಿದೆ.

ಸಿಂಹಪಾಲು ದಾನ
ಈ ಸಂಚಿಕೆಗೆ ದೊಡ್ಡ ಯಶಸ್ಸನ್ನು ತಂದುಕೊಟ್ಟಿದ್ದಕ್ಕಾಗಿ, ನಿರೂಪಕ ಬೇರ್‌ ಗ್ರಿಲ್ಸ್ ಅವರು ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸಿದ್ದಾರೆ. ಅತ್ತ, ಡಿಸ್ಕವರಿ ವಾಹಿನಿಯು, ಈ ವಿಶೇಷ ಸಂಚಿಕೆ ಯಿಂದ ಬಂದ ಆದಾಯದಲ್ಲಿ ದೊಡ್ಡ ಮೊತ್ತವನ್ನು ಭಾರತದಲ್ಲಿನ ಹುಲಿ ಸಂರಕ್ಷಣಾ ಅಭಿಯಾನಕ್ಕೆ ನೀಡುವುದಾಗಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next