ಉತ್ತರಾಖಂಡ : ತನ್ನ ಪ್ರಾರ್ಥನೆ ಫಲಿಸಲಿಲ್ಲವೆಂದು ಕೋಪಗೊಂಡ 24 ವರ್ಷದ ಯುವಕನೋರ್ವ ಪುರಾತನ ದೇವಾಲಯದಲ್ಲಿಯ ಶಿವಲಿಂಗ ಹಾಗೂ ಬೈರವ ಬಾಬಾ ವಿಗ್ರಹಗಳನ್ನು ಭಗ್ನಗೊಳಿಸಿ, ಚರಂಡಿ ನೀರಿಗೆ ಎಸೆದ ಘಟನೆ ಉತ್ತರಾಖಂಡದ ಅಲ್ಮೊರಾ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಚಿಟೈಲಿಗಡ್ ಗ್ರಾಮದ ತಾರಾ ಸಿಂಗ್ ರಾಣಾ, ತನ್ನ ಕೋಪವನ್ನ ದೇವರ ಮೇಲೆ ತಿರಿಸಿಕೊಂಡ ಯುವಕ. ಈತ 12 ನೇ ತರಗತಿಯಲ್ಲಿದ್ದಾಗಿನಿಂದ ತೀವ್ರ ಕಾಲುನೋವಿನಿಂದ ಬಳಲುತ್ತಿದ್ದ. ಒಂದು ದಿನ ದ್ವಾರಹತ್ ಎಂಬ ಊರಿನಲ್ಲಿದ್ದ ಪುರಾತನ ದೇವಸ್ಥಾನಕ್ಕೆ ತೆರಳಿ, ಅಲ್ಲಿರುವ ಶಿವಲಿಂಗ ಹಾಗೂ ಬೈರವ ಬಾಬಾ ದೇವರಲ್ಲಿ ತಾನು ಗುಣಮುಖವಾಗುವಂತೆ ಬೇಡಿಕೊಂಡಿದ್ದ. ಅದರಂತೆ ಪ್ರತಿನಿತ್ಯ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಿದ್ದ. ಆದರೆ, ಇಷ್ಟು ವರ್ಷ ಕಳೆದರೂ ಆತನ ಕಾಲು ನೋವು ಮಾತ್ರ ಕಡಿಮೆಯಾಗಲಿಲ್ಲವಂತೆ.
ಹಲವು ವರ್ಷಗಳಿಂದ ದೇವರಿಗೆ ಪ್ರಾರ್ಥನೆ, ಪೂಜೆ ಮಾಡಿದರು ಯಾವುದೇ ಪ್ರಯೋಜನವಾಗಲಿಲ್ಲ. ನನ್ನ ಪ್ರಾರ್ಥನೆ ದೇವರು ಕೇಳಲಿಲ್ಲ ಎಂದು ಕೋಪಗೊಂಡ ರಾಣಾ, ದೇವಸ್ಥಾನದಲ್ಲಿದ್ದ ಶಿವಲಿಂಗ ಹಾಗೂ ಬೈರವ ಬಾಬಾ ವಿಗ್ರಹಗಳನ್ನು ಧ್ವಂಸ ಮಾಡಿದ್ದಾನೆ. ಬಳಿಕ ದೇವಸ್ಥಾನದಿಂದ ಅವುಗಳನ್ನು ತೆಗೆದುಕೊಂಡು ಹೋಗಿ ಚರಂಡಿಯಲ್ಲಿ ಬೀಸಾಕಿದ್ದಾನೆ.
ಇದನ್ನೂ ಓದಿ:ಬ್ರೇಕ್ ಅಪ್ ಬಗ್ಗೆ ಇದ್ದ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದ ಸುಷ್ಮಿತಾ ಸೇನ್ ಜೋಡಿ..!
ಇನ್ನು ದೇವಸ್ಥಾನದಲ್ಲಿ ನಡೆದ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೇವಸ್ಥಾನ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ಆಧಾರದ ಮೇಲೆ ರಾಣಾನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರೆದುರು ಆತ ನಿರ್ಭಯವಾಗಿ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ಚರಂಡಿಯಲ್ಲಿ ಬೀಸಾಡಿದ್ದ ವಿಗ್ರಹಗಳನ್ನು ಹುಡುಕಲು ಸಹಾಯ ಮಾಡಿದ ಎಂದು ಪೊಲೀಸ್ ವರಿಷ್ಠಾಧಿಕಾರಿ ಪಂಕಜ ಭಟ್ ಹೇಳಿದ್ದಾರೆ.