ಜಮ್ಮು : ಜಮ್ಮು ಕಾಶ್ಮೀರದ ಬಡಗಾಂವ್ ಜಿಲ್ಲೆಯಲ್ಲಿನ ಭಾರತೀಯ ವಾಯು ಪಡೆಯ ಮೂಲ ಠಾಣೆಯ ಭದ್ರತಾ ವಲಯವನ್ನು ದಾಟಿ ಒಳಬರಲು ಯತ್ನಿಸಿದ ಅಪರಿಚಿತ ವ್ಯಕ್ತಿಯನ್ನು ಇಂದು ಸೋಮವಾರ ನಸುಕಿನ ವೇಳೆ ಭದ್ರತಾ ಪಡೆಗಳು ಗುಂಡೆಸೆದು ಹೊಡೆದುರುಳಿಸಿದ ಘಟನೆ ವರದಿಯಾಗಿದೆ.
ಮಧ್ಯರಾತ್ರಿ ಕಳೆದ ಸ್ವಲ್ಪ ಹೊತ್ತಿನ ಬಳಿಕ ಅಪರಿಚಿತ ವ್ಯಕ್ತಿಯೊಬ್ಬನು ಐಎಎಫ್ ವಾಯು ನೆಲೆಯ ಪೆರಿಮೀಟರ್ ಗೋಡೆಯನ್ನು ಹತ್ತಿ ಒಳಬರಲು ಯತ್ನಿಸಿದ. ಇದನ್ನು ಕಂಡ ಸೆಂಟ್ರಿ ಆತನಿಗೆ ಎಚ್ಚರಿಕೆಯ ಗುಂಡೆಸೆದರು. ಆದರೂ ಅದನ್ನು ಲೆಕ್ಕಿಸದೆ ಆತ ಗೋಡೆ ಏರಲು ಮುಂದಾದ. ಆಗ ಭದ್ರತಾ ಪಡೆಗಳು ಆತನನ್ನು ಗುಂಡಿಕ್ಕಿ ಸಾಯಿಸಿದವು ಎಂದು ಎಎನ್‌ಐ ವರದಿ ಮಾಡಿದೆ.
ತಾಜಾ ವರದಿಗಳ ಪ್ರಕಾರ ಈ ಅಪರಿಚಿತ ವ್ಯಕ್ತಿಯು ಮಾನಸಿಕವಾಗಿ ಅಸ್ವಸ್ಥನೆಂದು ಗೊತ್ತಾಗಿದೆ. ಸ್ಥಳ ಪರೀಕ್ಷೆಯ ಪ್ರಕಾರ ವ್ಯಕ್ತಿಯು ಸುಮಾರು 50 ರಿಂದ 55 ವರ್ಷ ಪ್ರಾಯದೊಳಗಿನವನಾಗಿದ್ದು ಮನೋರೋಗಿಯಂತೆ ಆತ ಕಾಣುತ್ತಿದ್ದ ಎಂದು ತಿಳಿದುಬಂದಿದೆ.
ಈ ಘಟನೆಯ ಬಗ್ಗೆ ಭದ್ರತಾ ಅಧಿಕಾರಿಗಳು ಹುಮ್‌ಹಮಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು; ಒಡನೆಯೇ ಅವರು ಸ್ಥಳಕ್ಕೆ ಧಾವಿಸಿ ಬಂದರು.
ಭದ್ರತಾ ಪಡೆಗಳ ಗುಂಡೇಟಿಗೆ ಮೃತಪಟ್ಟ ಅಪರಿಚಿತ ವ್ಯಕ್ತಿಯ ಕಾಲಿಗೆ ಪಾದರಕ್ಷೆ ಇರಲಿಲ್ಲ. ಚಳಿಗಾಲದ ಉಡುಪನ್ನೂ ಆತ ಧರಿಸಿರಲಿಲ್ಲ ಮತ್ತು ಆತನ ಬಳಿ ಯಾವುದೇ ಗುರುತು ಪತ್ರವೂ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.