ಭೋಪಾಲ್: ಜೀವನದಲ್ಲಿ ಅಸಹಾಯಕತೆಯ ಪರಿಸ್ಥಿತಿ ಬಂದಾಗ, ಮನುಷ್ಯ ಯಾರ ಕಾಲಿಗೂ ಬೀಳುವಂತಹ ಸ್ಥಿತಿಗೆ ಬರುತ್ತಾನೆ. ತನ್ನ ಒಂದು ವರ್ಷದ ಮಗುವನ್ನು ಉಳಿಸಿ ಎಂದು ತಂದೆಯೊಬ್ಬ ಮುಖ್ಯಮಂತ್ರಿ ಅವರ ಸಹಾಯವನ್ನು ಕೇಳಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಸಾಗರದ ಕೆಸ್ಲಿ ತಹಸಿಲ್‌ನ ಸಹಜ್‌ಪುರ ಗ್ರಾಮದ ನಿವಾಸಿಯಾಗಿರುವ ವೃತ್ತಿಯಲ್ಲಿ ಕಾರ್ಮಿಕನಾಗಿರುವ ಮುಖೇಶ್ ಪಟೇಲ್ ಹಾಗೂ ನೇಹಾ ದಂಪತಿಗೆ ಒಂದು ವರ್ಷದ ಮಗುವಿದೆ. ಆ ಮಗುವಿನ ಹೃದಯದಲ್ಲಿ ರಂಧ್ರವೊಂದಿದೆ. ಇದುವರೆಗೂ ಮಗುವಿನ ಚಿಕಿತ್ಸೆಗಾಗಿ ಕಷ್ಟಪಟ್ಟು 4 ಲಕ್ಷಕ್ಕೂ ಅಧಿಕ ಖರ್ಚುಗಳನ್ನು ಮಾಡಿರುವ ಕುಟುಂಬ ಮಗುವಿನ ಶಸ್ತ್ರಚಿಕಿತ್ಸೆಗಾಗಿ ನೆರವಿನ ನಿರೀಕ್ಷೆಯಲ್ಲಿ ಕೂತು ಕುಟುಂಬ ಸೋತು ಹೋಗಿದೆ.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇತ್ತೀಚೆಗೆ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ತನ್ನ ಮಗುವಿನೊಂದಿಗೆ ಮುಖೇಶ್ ಪಟೇಲ್ ದಂಪತಿಯೂ ತೆರಳಿದ್ದರು. ಮೊದಲು ಪೊಲೀಸರ ಬಳಿ ತಮಗೆ ಮುಖ್ಯಮಂತ್ರಿ ಅವರನ್ನು ಭೇಟಿಯಾಗಬೇಕೆಂದು ಹೇಳಿದ್ದಾರೆ. ಆದರೆ ಪೊಲೀಸರು ಇದಕ್ಕೆ ಒಪ್ಪಿಗೆ ನೀಡಿಲ್ಲ.
ಕಾರ್ಯಕ್ರಮ ನಡೆಯುತ್ತಿದ್ದಾಗಲೇ ಮುಖ್ಯಮಂತ್ರಿಯ ಗಮನಕ್ಕೆ ತರಲು ಮುಖೇಶ್ ತನ್ನ ಒಂದು ವರ್ಷದ ಮಗುವನ್ನು ವೇದಿಕೆಯ ಬಳಿ ಎಸೆದಿದ್ದಾನೆ. ಕೂಡಲೇ ಮಗುವನ್ನು ಅಧಿಕಾರಿಗಳು ಮೇಲೆತ್ತಿ ದಂಪತಿಗೆ ನೀಡಿದ್ದಾರೆ.
ಅಧಿಕಾರಿಗಳು ಈ ವಿಚಾರವನ್ನು ಮುಖ್ಯಮಂತ್ರಿಗೆ ಹೇಳಿದ್ದಾರೆ. ಆತನ ಮಗುವಿನ ಹೃದಯದಲ್ಲಿ ರಂಧ್ರವಿದೆ. ಸಹಾಯಕ್ಕಾಗಿ ಬಂದಿದ್ದಾರೆ ಎಂದು ಮುಖ್ಯಮಂತ್ರಿಗೆ ಹೇಳಿದ್ದಾರೆ. ಇದಕ್ಕೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಎಲ್ಲಾ ಸಹಾಯವನ್ನು ಮಾಡುವುದಾಗಿ ಭರವಸೆಯನ್ನು ಕೊಟ್ಟಿದ್ದಾರೆ.ಇದಲ್ಲದೇ ಜಿಲ್ಲಾಧಿಕಾರಿಗೆ ಈ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಸಿಎಂ ಕಚೇರಿಗೆ ತಿಳಿಸಿ ಎಂದಿದ್ದಾರೆ.
“ನನ್ನ ಮಗು 3 ತಿಂಗಳು ಇರುವಾಗ ಆತನ ಹೃದಯದಲ್ಲಿ ರಂಧ್ರ ಕಾಣಿಸಿಕೊಂಡಿತ್ತು. ಇದಕ್ಕಾಗಿ 4 ಲಕ್ಷಕ್ಕೂ ಅಧಿಕ ಖರ್ಚು ಮಾಡಿದ್ದೇನೆ. ವೈದ್ಯರು ಸರ್ಜರಿ ಮಾಡಬೇಕೆಂದು ಅದಕ್ಕೆ 3.50 ತಗಲುತ್ತದೆ ಎಂದಿದ್ದಾರೆ. ಸಿಎಂ ಭೇಟಿಯಾಗಿ ಸಮಸ್ಯೆ ಹೇಳಿಕೊಳ್ಳಲು ಬಂದಾಗ ಪೊಲೀಸರು ನಮ್ಮನ್ನು ತಡೆದರು. ಅದಕ್ಕಾಗಿ ಮಗುವನ್ನು ವೇದಿಕೆಯತ್ತ ಎಸೆದೆ, ಅಧಿಕಾರಿಗಳು ಮುಖ್ಯಮಂತ್ರಿಗೆ ವಿಷಯ ತಿಳಿಸಿದ್ದಾರೆ. ನಮ್ಮನ್ನು ಅವರು ಕಚೇರಿಗೆ ಬರಲು ಹೇಳಿದ್ದಾರೆ” ಎಂದು ಮುಖೇಶ್ ಪಟೇಲ್ ಹೇಳಿದ್ದಾರೆ.