ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ಮತ್ತು ಇಂದೋರ್ ವಿಮಾನ ನಿಲ್ದಾಣದಿಂದ ವಿಮಾನಗಳನ್ನು ಹೈಜಾಕ್ ಮಾಡಿ ಪಾಕಿಸ್ತಾನಕ್ಕೆ ತೆಗೆದುಕೊಂಡು ಹೋಗುವುದಾಗಿ ಬೆದರಿಕೆ ಕರೆ ಮಾಡಿದ್ದ 34 ವರ್ಷದ ಯುವಕನನ್ನು ಬಂಧಿಸಿರುವುದಾಗಿ ಪೊಲೀಸರು ಬುಧವಾರ(ಜೂನ್ 09) ತಿಳಿಸಿದ್ದಾರೆ.
ಇದನ್ನೂ ಓದಿ:ಗೋವಾದ ಮಾಜಿ ರಣಜಿ ಕ್ರಿಕೇಟ್ ಪಟು ಪ್ರಸಾದ ಅಮೋಣಕರ್ ಇನ್ನಿಲ್ಲ
ಭೋಪಾಲ್ ನ ರಾಜಾ ಭೋಜ್ ವಿಮಾನ ನಿಲ್ದಾಣದ ಅಧಿಕಾರಿಗಳು ಮಂಗಳವಾರ (ಜೂನ್ 08) 5ಗಂಟೆ ಸುಮಾರಿಗೆ ಕರೆ ಮಾಡಿದ್ದ ವ್ಯಕ್ತಿ ವಿಮಾನ ಹೈಜಾಕ್ ಮಾಡುವ ಬಗ್ಗೆ ಬೆದರಿಕೆಯೊಡ್ಡಿದ್ದ ಎಂದು ಭೋಪಾಲ್ ನ ಗಾಂಧಿ ನಗರ್ ಪೊಲೀಸ್ ಠಾಣೆಯ ಅರುಣ್ ಶರ್ಮಾ ಪಿಟಿಐಗೆ ತಿಳಿಸಿರುವುದಾಗಿ ವರದಿಯಾಗಿದೆ.
ನಂತರ ಬೆದರಿಕೆ ಕರೆ ಬಗ್ಗೆ ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ದೂರು ನೀಡಿದ್ದರು. ವಿಮಾನಗಳನ್ನು ಅಪಹರಿಸುವುದಾಗಿ ಬೆದರಿಕೆ ಕರೆಯೊಡ್ಡಿದ್ದ ಯುವಕನನ್ನು ಮಂಗಳವಾರ ತಡರಾತ್ರಿ ಭೋಪಾಲ್ ನಿಂದ 100 ಕಿಲೋ ಮೀಟರ್ ದೂರದಲ್ಲಿರುವ ಶುಜಲ್ ಪುರ್ ನಗರದಲ್ಲಿ ಬಂಧಿಸಲಾಗಿದ್ದು, ಆತನಲ್ಲಿ ಕೂಲಂಕಷವಾಗಿ ಪ್ರಶ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.
ಬೆದರಿಕೆ ಕರೆಯ ನಂತರ ಭೋಪಾಲ್ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ತಿಳಿಸಿರುವುದಾಗಿ ವರದಿ ಹೇಳಿದೆ.