Advertisement

ಯಂತ್ರದೊಂದಿಗಿನ ಮಾತುಗಾರ

07:46 PM Sep 17, 2020 | Karthik A |

ಲಾಕ್‌ಡೌನ್‌ ಸಮಯದ ಬಳಿಕ ಗೆಳೆಯನ ಶಿಫಾರಸ್ಸಿನ ಮೇರೆಗೆ ಕಂಪೆನಿಯೊಂದಕ್ಕೆ ಕೆಲಸಕ್ಕೆ ಹೊರಟೆ.

Advertisement

ನಾನು ಒಂದು ದೊಡ್ಡ ಯಂತ್ರದ ಬಳಿ ಕೆಲಸ ಮಾಡಬೇಕಿತ್ತು. ಜತೆಗೆ ಆ ಯಂತ್ರವನ್ನು ನಿರ್ವಹಿಸುತ್ತಿದ್ದವರು 55 ವರ್ಷದ ಹಿರಿಯರೊಬ್ಬರು. ಅವರದು ಮಾತು ಕಡಿಮೆ. ಕಣ್ಸನ್ನೆ ಮೂಲಕವೇ ಕೆಲಸವನ್ನು ಹೇಳುತ್ತಿದ್ದರು. ಕೆಲಸಗಾರರನ್ನು ಮಾತನಾಡಿಸುವ ಪರಿ ಕೊಂಚ ಕಠಿನವೇ ಎನಿಸುತ್ತಿತ್ತು.

ಆದರೆ ಆ ದೊಡ್ಡ ಯಂತ್ರದೊಂದಿಗೆ ಅವರ ಕೆಲಸ ಮಾತ್ರ ಮೃದುವಾಗಿರುತ್ತಿತ್ತು. ನಾವು ಕೆಲಸ ಮಾಡುವಾಗ ಯಂತ್ರದಲ್ಲಿ ಸಣ್ಣ ಶಬ್ದದಲ್ಲಿ ವ್ಯತ್ಯಾಸವಾದರೂ ಕೂಡ ಅವರಿಗೆ ತಿಳಿಯುತ್ತಿತ್ತು. ಅಷ್ಟೊಂದು ಒಡನಾಟವನ್ನು ಯಂತ್ರದೊಂದಿಗೆ ಅವರು ಇಟ್ಟುಕೊಂಡಿದ್ದರು.
ಮಾತಿದ್ದರೆ ಸಾಕು ಜಗತ್ತನ್ನೇ ಮರೆಯುವ ನಾನು. ಎಂತಹ ಜಾಗದಲ್ಲಿ ಬಂದು ಸಿಲುಕಿಕೊಂಡೆ ಭಗವಂತ ಎನ್ನುವಂತಾಯಿತು. ಮೊದಲ ದಿನವಾದುದುರಿಂದ ಪರಿಚಯವಿಲ್ಲದ ಕಾರಣ ಎಲ್ಲವನ್ನೂ ಕಣ್ಸನ್ನೆ ಮೂಲಕ ಹೇಳುತ್ತಿದ್ದಾರೆ ಎಂದು ಭಾವಿಸಿದ್ದೆ.

ಆದರೆ ಸತತ ಮೂರು ದಿನಗಳ ಕಾಲವೂ ಇದೇ ರೀತಿ ನಡೆದಾಗ, ನನಗೆ ಕೊಂಚ ಬೇಸರವಾಯಿತು. ಹಾಗಾಗಿ ನಿಧಾನಕ್ಕೆ ನಾನೇ ಅವರನ್ನು ಮಾತಿಗೆಳೆದೆ, ಪರಿಚಯ ಕೇಳಿದೆ. ಅದಕ್ಕೆ ಅವರು ಒಂದೇ ಸ್ವರದಲ್ಲಿ ಊರು ಶ್ರೀರಂಗಪಟ್ಟಣ, 30 ವರ್ಷದಿಂದ ಇದ್ದೇನೆ ಎಂದು ಹೇಳಿ ಸುಮ್ಮನಾದರು. ನನ್ನ ಮಾತುಗಳು ನಿಂತು ಹೋದವು.

ಮುಂದುವರಿದು ಅಣ್ಣ ನೀವು ಮನುಷ್ಯರಿಗಿಂತ ಈ ಯಂತ್ರದೊಂದಿಗೆಯೇ ಅತಿ ಹೆಚ್ಚು ಮಾತನಾಡುವುದು ಏಕೆ? ಎಂದು. ಅವರಿಂದ ಕುತೂಹಲ ಉತ್ತರ ನಿರೀಕ್ಷಿಸಿದ್ದ ನಾನು, ಯಾವ ಉತ್ತರ ಬರಲಿಲ್ಲ. ಐದು ನಿಮಿಷಗಳ ನಿಮಿಷಗಳ ಅನಂತರ ಯಂತ್ರವನ್ನು ನಿಲ್ಲಿಸಿ ನನ್ನ ಪಕ್ಕ ಬಂದು ಕುಳಿತರು, ನಾನು 30 ವರ್ಷದಿಂದ ಈ ಯಂತ್ರದೊಂದಿಗೆ ಕೆಲಸ ಮಾಡುತ್ತಿದ್ದೇನೆ, ಅದು ಅಂದಿನಿಂದ ಇಂದಿನ ತನಕ ನನಗೆ ಅನ್ನವನ್ನು ನೀಡಿದೆ. ನಾನು ಮನೆಯಲ್ಲಿ ಜಗಳವಾಡಿ ಬಂದಾಗಲೂ ಕೋಪವನ್ನು ಇದರ ಮೇಲೆ ತೋರಿಸಿದ್ದೇನೆ. ಆದರೂ ಸಹ ಇದು ತುಟಿಕ್‌ ಪಿಟಿಕ್‌ ಎನ್ನದೆ ನನ್ನ ಎಲ್ಲ ಮಾತುಗಳನ್ನು ಸಹಿಸಿಕೊಂಡಿದೆ. 24 ವರ್ಷ ಸಾಕಿದ ಮಗ ನನ್ನನ್ನು ಬಿಟ್ಟು ವಿದೇಶಕ್ಕೆ ಹೋದರೂ ಕೂಡ ಈ ಯಂತ್ರ ಇಂದಿಗೂ ಕೂಡ ನನ್ನೊಂದಿಗೆ ಕೆಲಸ ಮಾಡುತ್ತಿದೆ. ನನ್ನೆಲ್ಲ ಕಷ್ಟಕಾರ್ಪಣ್ಯಗಳನ್ನು ಇದು ಯಾವುದೇ ಮರು ಮಾತಿಲ್ಲದೆ ಕೇಳಿದೆ. ಆದರೆ ಅದೇ ಮಾತುಗಳನ್ನು ನಾನು ನನ್ನ ಸಹೋದ್ಯೋಗಿಗಳೊಂದಿಗೆ ಹಂಚಿಕೊಂಡಾಗ ನಕ್ಕವರೇ ಜಾಸ್ತಿ.

Advertisement

ಅಂದಿನಿಂದ ಇಂದಿನ ತನಕ ಇದು ನನ್ನೊಂದಿಗೆ ಯಂತ್ರವಾಗಿರದೆ ಮಿತ್ರನಾಗಿದ್ದಾನೆ. ನನಗೆ ಈ ಮನುಷ್ಯನಿಗಿಂತ ಈ ಯಂತ್ರವೇ ಲೇಸು ಅನಿಸಿದೆ ಎಂದೊಡನೇ ನಾನು ಮೂರ್ಖನಾದೆ. ಮನಸ್ಸಿನ ಮಾತನ್ನು ಕೇಳುವ ನಿರ್ಜೀವ ಯಂತ್ರವನ್ನ ಕೂಡ ಮಿತ್ರನನ್ನಾಗಿ ಕಾಣುವ ಅವರ ಪರಿಗೆ ಮೆಚ್ಚುಗೆ ಎನಿಸಿತು. ಆದರೆ ಇಷ್ಟು ದೊಡ್ಡ ಪ್ರಪಂಚದಲ್ಲಿ ಅವರ ಮನಸ್ಸಿನ ಮಾತುಗಳನ್ನು ಕೇಳಿಸಿಕೊಳ್ಳಲು ಯಾವ ಮನುಷ್ಯನು ಇಲ್ಲ ಎಂಬುದನ್ನು ನೆನೆದು ದುಃಖವಾಯಿತು.

ಎಷ್ಟೋ ಮನೆಗಳಲ್ಲಿ ವಯಸ್ಸಾದವರು ಸುಮ್ಮನೆ ಇರುವುದನ್ನು ಕಂಡು ಅವರು ಇರುವುದೇ ಹಾಗೆ ಎಂದುಕೊಂಡಿರುತ್ತೇವೆ. ಆದರೆ ಅವರು ತಮ್ಮ ಮನಸ್ಸಿನ ಮಾತುಗಳನ್ನು ಕೇಳಿಸಿಕೊಳ್ಳಲು ಯಾರು ಇಲ್ಲ ಎಂಬ ಕಾರಣಕ್ಕೆ ಮೌನವಹಿಸಿದ್ದಾರೆ ಎಂಬ ವಿಚಾರ ಮಾತ್ರ ತಲೆಗೆ ಹೊಳೆಯುವುದೇ ಇಲ್ಲ. ಬನ್ನಿ ಹಿರಿಯರ ಮೌನದ ಹಿಂದಿನ ಮಾತುಗಳನ್ನು ಕೇಳಿಸಿಕೊಳ್ಳೋಣ ಅವರ ಒಂಟಿತನವನ್ನು ದೂರವಾಗಿಸೋಣ. ಅವರ ಅಷ್ಟು ವರ್ಷಗಳ ಬದುಕಿನ ಕಥೆಗಳನ್ನು ಕೇಳ್ಳೋಣ. ಮನುಷ್ಯನೊಂದಿಗೆ ಮಾತನಾಡಲು ಮನುಷ್ಯ ಇನ್ನೂ ಸಹ ಸಶಕ್ತ ಎಂಬುದನ್ನು ನಿರೂಪಿಸೋಣ.

 ಸಂಜು .ಟಿ.ಎಸ್‌., ಸಂತ ಫಿಲೋಮಿನಾ ಕಾಲೇಜು ಮೈಸೂರು 

Advertisement

Udayavani is now on Telegram. Click here to join our channel and stay updated with the latest news.

Next