ಆಂಧ್ರ ಪ್ರದೇಶ: ಇತ್ತೀಚೆಗೆ ಹೃದಯಾಘಾತ ಘಟನೆಗಳು ಹೆಚ್ಚು ಸಂಭವಿಸುತ್ತಿದೆ. ಯುವ ಜನರೇ ಇದಕ್ಕೆ ಹೆಚ್ಚು ತುತ್ತಾಗುತ್ತಿರುವುದು ದುರಂತ. ಸಿನಿಮಾ ನೋಡುತ್ತಿರುವಾಗಲೇ ವ್ಯಕ್ತಿಯೊಬ್ಬ ಹೃದಯಾಘಾತವಾಗಿ ಮೃತಪಟ್ಟ ಘಟನೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಪೆದ್ದಾಪುರಂ ನಗರದಲ್ಲಿ ನಡೆದಿದೆ.
ಲಕ್ಷ್ಮಿರೆಡ್ಡಿ ಶ್ರೀನು ಮೃತ ವ್ಯಕ್ತಿ. ಲಕ್ಷ್ಮಿರೆಡ್ಡಿ ಶ್ರೀನು ತನ್ನ ಸಹೋದರ ರಾಜು ಅವರೊಂದಿಗೆ ʼಅವತಾರ್ -2ʼ ಸಿನಿಮಾವನ್ನು ನೋಡಲು ಪೆದ್ದಾಪುರಂನಲ್ಲಿರುವ ಥಿಯೇಟರ್ ವೊಂದಕ್ಕೆ ಹೋಗಿದ್ದರು. ಸಿನಿಮಾದ ನಡುವಿನಲ್ಲೇ ಲಕ್ಷ್ಮೀರೆಡ್ಡಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸಹೋದರ ರಾಜು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಆದಾಗಲೇ ಲಕ್ಷ್ಮೀರೆಡ್ಡಿ ಅವರು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಭಾರತದಲ್ಲಿ ಮೊದಲ ದಿನವೇ ಕೋಟಿ ಕೋಟಿ ಕಲೆಕ್ಷನ್ ಮಾಡಿದರೂ ಆ ಸಿನಿಮಾದ ದಾಖಲೆ ಮುರಿಯದ ʼʼಅವತಾರ್ -2”
ಲಕ್ಷ್ಮೀರೆಡ್ಡಿ ಶ್ರೀನು ಅವರು ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
2010 ರಲ್ಲಿ ತೈವಾನ್ ನಲ್ಲಿ 42 ವರ್ಷದ ವ್ಯಕ್ತಿಯೊಬ್ಬ ʼಅವತಾರ್ʼ ಸಿನಿಮಾದ ಮೊದಲ ಭಾಗವನ್ನು ನೋಡುವಾಗ ಇದೇ ರೀತಿ ಹೃದಯಾಘಾತವಾಗಿ ಮೃತಪಟ್ಟಿದ್ದರು. ಸಿನಿಮಾವನ್ನು ನೋಡುವಾಗ ಅತೀ ಉತ್ಸಾಹ ಬಂದು ಅವರ ಬಿಪಿ ಏರಿಕೆಯಾಗಿದೆ ಅದರಿಂದ ಹೃದಯಾಘಾತವಾಗಿ ಅವರು ನಿಧನರಾಗಿದ್ದಾರೆ ವೈದ್ಯರು ಹೇಳಿದ್ದರು.