ಅಹಮದಾಬಾದ್ : ಆನ್ ಲೈನ್ ನಲ್ಲಿ ಡಿಸ್ಕೌಂಟ್ ಬೆಲೆಗೆ ಭರ್ಜರಿ ಆಫರ್ ಗಳು ಬರುತ್ತಿರುತ್ತದೆ. ನಾನಾ ಆನ್ ಲೈನ್ ಡೆಲಿವೆರಿ ಸಂಸ್ಥೆಗಳು ಹಬ್ಬದ ಸೀಸನ್ ನಲ್ಲಿ ಗ್ರಾಹಕರನ್ನು ಸೆಳೆಯಲು ವಿವಿಧ ಬಗೆಯ ಆಫರ್ ಗಳನ್ನು ನೀಡುತ್ತಿವೆ.
ಅಮೆಜಾನ್ ನ ಗ್ರೇಟ್ ಇಂಡಿಯಾನ್ ಫೆಸ್ಟಿವಲ್ ಸೇಲ್, ಫ್ಲಿಪ್ ಕಾರ್ಟ್ ನ ಬಿಗ್ ಬಿಲಿಯನ್ ಡೇಸ್ ಸದ್ಯ ಟ್ರಿಂಡಿಂಗ್ ಇವೆ. ಗೃಹ ಸಂಬಂಧಿತ ವಸ್ತು, ಗ್ಯಾಜೆಟ್, ಎಲೆಕ್ಟ್ರಿಕ್, ಮೊಬೈಲ್ಸ್, ಲ್ಯಾಪ್ ಟಾಪ್, ಫ್ಯಾನ್ಸಿ, ಉಡುಗೆ – ತೊಡುಗೆಗೆ ಕಡಿಮೆ ಬೆಲೆ ನಿಗದಿ ಪಡಿಸಿ ಆಫರ್ ನಲ್ಲಿ ಸೇಲ್ ಮಾಡುವ ಆನ್ಲೈನ್ ಡೆಲಿವೆರಿಗಳಿಗೆ ಗ್ರಾಹಕರು ಹೆಚ್ಚು ಆಕರ್ಷಿತರಾಗುತ್ತಾರೆ.
ಹೀಗೆ ವಸ್ತುಗಳನ್ನು ಆರ್ಡರ್ ಮಾಡುವಾಗ ನಾವು ಎಷ್ಟೋ ಬಾರಿ ಆಕರ್ಷಿತರಾಗಿ ಬಿಡುತ್ತೇವೆ. ಐಐಎಂ ಅಹಮದಾಬಾದ್ ನ ವಿದ್ಯಾರ್ಥಿ ಯಶಸ್ವಿ ಶರ್ಮಾ ತಾವು ಆನ್ಲೈನ್ ನಲ್ಲಿ ಆರ್ಡರ್ ಮಾಡಿ, ಮೋಸ ಹೋದ ಬಗ್ಗೆ ಬರೆದುಕೊಂಡಿದ್ದಾರೆ.
ಲಿಂಕ್ಡ್ ಇನ್ ನಲ್ಲಿ ಯಶಸ್ವಿ ಶರ್ಮಾ ಈ ಬಗ್ಗೆ ಬರೆದುಕೊಂಡಿದ್ದಾರೆ. ನಾನು ನನ್ನ ತಂದೆಗೆ ಫ್ಲಿಪ್ ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ನಲ್ಲಿ ಲ್ಯಾಪ್ ಟಾಪ್ ಆರ್ಡರ್ ಮಾಡಿದ್ದೆ. ಫ್ಲಿಪ್ ಕಾರ್ಟ್ ನಲ್ಲಿ ಓಪನ್ ಬಾಕ್ಸ್ ಎನ್ನುವ ಪರಿಕಲ್ಪನೆಯಿದೆ. ಬಹುಶಃ ನಮ್ಮಲ್ಲಿ ಈ ಬಗ್ಗೆ ಹೆಚ್ಚಿನ ಜನರಿಗೆ ಅರಿವಿಲ್ಲ. ಓಪನ್ ಬಾಕ್ಸ್ ಎಂದರೆ, ಡೆಲಿವೆರಿ ಬಾಯ್ ನಾವು ಆರ್ಡರ್ ಮಾಡಿದ ವಸ್ತುವನ್ನು ನಮ್ಮ ಕೈಗೆ ಕೊಡುವ ಮುನ್ನ , ಓಟಿಪಿ ನೀಡುವ ಮುನ್ನ ಅದನ್ನು ನಾವು ಓಪನ್ ಮಾಡಿ, ಆರ್ಡರ್ ಮಾಡಿದ ವಸ್ತು ಸರಿಯಾಗಿ ಇದೆಯೇ, ಅದೇ ವಸ್ತು ಬಂದಿದೆಯೇ ಎಂದು ಪರಿಶೀಲಿಸಿ ನೋಡುವುದು.
ನನ್ನ ತಂದೆ ಇದನ್ನು ಅರಿಯದೇ ನೇರವಾಗಿ ಡೆಲಿವೆರಿ ಹುಡುಗನಿಗೆ ಓಟಿಪಿಯನ್ನು ನೀಡಿದ್ದಾರೆ. ನಂತರ ಬಾಕ್ಸ್ ಓಪನ್ ಮಾಡಿ ನೋಡಿದಾಗ ನಮಗೆ ಅಚ್ಚರಿಯಾಗಿದೆ. ಏಕೆಂದರೆ ಅಲ್ಲಿ ಲ್ಯಾಪ್ ಟಾಪ್ ಇರಲಿಲ್ಲ. ಅದರೊಳಗೆ ಇದ್ದದ್ದು ನಾಲ್ಕೈದು ಸೋಪ್ ಗಳು ( ಡಿಟರ್ಜೆಂಟ್ ಬಾರ್ ಗಳು) ಇದರ ಬಗ್ಗೆ ನಾನು ಫ್ಲಿಪ್ ಕಾರ್ಟ್ ನ ಹಿರಿಯ ಗ್ರಾಹಕ ಸಿಬ್ಬಂದಿಯೊಂದಿಗೆ ಮಾತಾನಾಡಿದಾಗ, ಅವರು ನೀವು ಇದನ್ನು ಈಗ ವಾಪಸ್ ಮಾಡಲು ಸಾಧ್ಯವಿಲ್ಲ. ನಿಮ್ಮ ತಂದೆ ಲ್ಯಾಪ್ ಟಾಪ್ ಪರಿಶೀಲಿಸದೇ ಓಟಿಪಿ ನೀಡಬಾರದಿತ್ತು ಎಂದಿದ್ದಾರೆ. ಡೆಲಿವೆರಿ ಬಾಯ್ ಗ್ರಾಹನಿಗೆ ಯಾಕೆ ಓಪನ್ ಬಾಕ್ಸ್ ಬಗ್ಗೆ ಹೇಳದೇ ಲ್ಯಾಪ್ ಟಾಪ್ ಕೊಟ್ಟಿದ್ದಾನೆ. ನಾನು ಗ್ರಾಹಕರ ವೇದಿಕೆಗೆ ಹೋಗುವ ಮುನ್ನ ಇದನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಯಶಸ್ವಿ ಹೇಳಿದ್ದಾರೆ.