ತೆಹ್ರಾನ್(ಇರಾನ್): ಇರಾನ್ ನಲ್ಲಿ ಬುಧವಾರ ನಡೆದ ಎರಡು ಅವಳಿ ದಾಳಿ ಪ್ರಕರಣದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ಇರಾನ್ ಸಂಸತ್ ಭವನ ಹಾಗೂ ಕ್ರಾಂತಿಕಾರಿ ಮುಖಂಡ ರುಹೋಲ್ಲಾ ಖೋಮೆನಿ ಅವರ ಸಮಾಧಿ ಪ್ರದೇಶದಲ್ಲಿ ಮಹಿಳೆಯರಂತೆ ಧಿರಿಸು ಹಾಕಿದ್ದ ಆತ್ಮಹತ್ಯಾ ಬಾಂಬರ್ ಸೇರಿದಂತೆ ಮೂವರು ಏಕಾಏಕಿ ದಾಳಿ ನಡೆಸಿದ್ದರು.
ಇರಾನ್ ಸಂಸತ್ ಮೇಲೆ ದಾಳಿ ನಡೆಸಿರುವುದು ತಾವೇ ಎಂದು ಐಸಿಸ್ ಉಗ್ರಗಾಮಿ ಸಂಘಟನೆ ಹೊಣೆ ಹೊತ್ತುಕೊಂಡಿದೆ. ಅಲ್ಲದೇ ದಾಳಿಯಲ್ಲಿ 12 ಮಂದಿ ಬಲಿಯಾಗಿರುವುದಾಗಿ ಐಸಿಸ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.
ತೆಹ್ರಾನ್ ಸಂಸತ್ ಭವನದ ಆವರಣದೊಳಕ್ಕೆ ನುಗ್ಗಿದ್ದ ಶಸ್ತ್ರಧಾರಿ ವ್ಯಕ್ತಿಗಳು ಭದ್ರತಾ ಸಿಬ್ಬಂದಿಯನ್ನು ಗುಂಡಿಟ್ಟು ಹತ್ಯೆಗೈದಿದ್ದರು. ಮತ್ತೊಂದೆಡೆ ಖೋಮೆನಿ ಅವರ ಸಮಾಧಿ ಸ್ಥಳ ಇರುವ ಮೈದಾನದೊಳಕ್ಕೆ ಪ್ರವೇಶಿಸುವ ಮುನ್ನ ಕಾವಲುಗಾರನನ್ನು ಗುಂಡಿಟ್ಟು ಕೊಂದಿರುವುದಾಗಿ ಐಎಸ್ ಎನ್ ಎ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಕೆಲವು ಮಾಧ್ಯಮಗಳ ಪ್ರಕಾರ, ಮೂವರು ವ್ಯಕ್ತಿಗಳು ರೈಫಲ್ಸ್ ಮತ್ತು ಪಿಸ್ತೂಲ್ ಮೂಲಕ ಗುಂಡಿನ ದಾಳಿ ನಡಸಿರುವುದಾಗಿ ಹೇಳಿವೆ. ಸಂಸತ್ ಆವರಣದಲ್ಲಿ ಒಬ್ಬ ದಾಳಿಕೋರ ತನ್ನನ್ನು ತಾನೇ ಸ್ಫೋಟಿಸಿಕೊಂಡಿದ್ದಾನೆ.
ಘಟನೆಯಲ್ಲಿ ಒಬ್ಬ ಸೆಕ್ಯುರಿಟಿ ಗಾರ್ಡ್ ಸೇರಿದಂತೆ ಮೂವರು ಬಲಿಯಾಗಿರುವುದಾಗಿ ವರದಿ ತಿಳಿಸಿದೆ. ಸಂಸತ್ ಆವರಣದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಕಾಳಗ ಮುಂದುವರಿದಿರುವುದಾಗಿ ವರದಿ ವಿವರಿಸಿದೆ.