ನವದೆಹಲಿ: ಚಂದ್ರಯಾನ ಯೋಜನೆಯ ಯಶಸ್ಸಿನ ಸಂಭ್ರಮದಲ್ಲಿರುವ ಇಸ್ರೋ, 2035 ಮತ್ತು 2040ಕ್ಕೆ ಮತ್ತೆರಡು ಐತಿಹಾಸಿಕ ಸಾಧನೆಯ ಮೈಲುಗಲ್ಲನ್ನು ತಲುಪುವ ನಿಟ್ಟಿನಲ್ಲಿ ಚಿಂತನೆ ಆರಂಭಿಸಿದೆ. ಈ ಮಹತ್ವದ ಯೋಜನೆಗಳಿಗೆ ಸಂಬಂಧಿಸಿ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಇಸ್ರೋಗೆ ಟಾರ್ಗೆಟ್ ನೀಡಿದ್ದಾರೆ.
2035ರೊಳಗಾಗಿ ಭಾರತೀಯ ಬಾಹ್ಯಾಕಾಶ ಕೇಂದ್ರವನ್ನು ಸ್ಥಾಪಿಸುವ ಮತ್ತು 2040ರ ವೇಳೆಗೆ ಚಂದ್ರನಲ್ಲಿಗೆ ಗಗನಯಾತ್ರಿಯನ್ನು ಕಳುಹಿಸುವ ನಿಟ್ಟಿನಲ್ಲಿ ಕೆಲಸ ಆರಂಭಿಸಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಜತೆಗೆ, ಈ ಗುರಿ ಈಡೇರಿಕೆ ನಿಟ್ಟಿನಲ್ಲಿ ನೀಲನಕ್ಷೆ ಸಿದ್ಧಪಡಿಸುವಂತೆ ಬಾಹ್ಯಾಕಾಶ ಇಲಾಖೆಗೆ ನಿರ್ದೇಶನ ನೀಡಿದ್ದಾರೆ. ನವದೆಹಲಿಯಲ್ಲಿ ನಡೆದ ಬಾಹ್ಯಾಕಾಶ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಈ ಕುರಿತಂತೆ ಕೆಲವೊಂದು ಸೂಚನೆಗಳನ್ನು ನೀಡಿದ್ದಾರೆ.
ಈ ನೀಲನಕ್ಷೆಯಲ್ಲಿ ಸರಣಿ ಚಂದ್ರಯಾನ ಯೋಜನೆಗಳು, ಮುಂದಿನ ತಲೆಮಾರಿನ ಉಡಾವಣಾ ನೌಕೆ(ಎನ್‌ಜಿಎಲ್‌ವಿ), ಹೊಸ ಲಾಂಚ್ ಪ್ಯಾಡ್ ನಿರ್ಮಾಣ, ಮಾನವ-ಕೇಂದ್ರಿತ ಪ್ರಯೋಗಾಲಯಗಳ ಸ್ಥಾಪನೆ ಮತ್ತು ಅದಕ್ಕೆ ಸಂಬಂಧಿಸಿದ ತಂತ್ರಜ್ಞಾನಗಳ ಅಭಿವೃದ್ಧಿ ಒಳಗೊಂಡಿರಲಿದೆ.
2025ಕ್ಕೆ ಗಗನಯಾನ:
ದೇಶದ ಭವಿಷ್ಯದ ಬಾಹ್ಯಾಕಾಶ ಯೋಜನೆಗಳ ಕುರಿತೂ ಈ ಸಭೆಯಲ್ಲಿ ಚರ್ಚೆ ನಡೆದಿದೆ. ಸಭೆಯಲ್ಲಿ ಬಾಹ್ಯಾಕಾಶ ಇಲಾಖೆಯು ಗಗನಯಾನ ಯೋಜನೆಯ ಸಮಗ್ರ ಚಿತ್ರಣವನ್ನು ಪ್ರಸ್ತುತಪಡಿಸಿದೆ. 2025ರಲ್ಲಿ ಮಾನವಸಹಿತ ಗಗನಯಾನದ ಕನಸು ಈಡೇರಲಿದೆ ಎಂಬುದನ್ನೂ ಸಭೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಹ್ಯೂಮನ್ ರೇಟೆಡ್ ಲಾಂಚ್ ವೆಹಿಕಲ್ (ಎಚ್‌ಎಲ್‌ವಿಎಂ3)ನ ಮೂರು ಮಾನವರಹಿತ ಯೋಜನೆಗಳು ಸೇರಿದಂತೆ ಸುಮಾರು 20 ಪ್ರಮುಖ ಪರೀಕ್ಷಾರ್ಥ ಉಡಾವಣೆಗಳ ಬಗ್ಗೆಯೂ ಚರ್ಚೆ ನಡೆದಿದೆ. ಇದೇ ವೇಳೆ, ವೀನಸ್ ಆರ್ಬಿಟರ್ ಮಿಷನ್, ಮಾರ್ಸ್ ಲ್ಯಾಂಡರ್ ಸೇರಿದಂತೆ ಅಂತರ್ಗ್ರಹೀಯ ಯೋಜನೆಗಳ ಮೇಲೆಯೂ ಗಮನಹರಿಸುವಂತೆ ಭಾರತೀಯ ವಿಜ್ಞಾನಿಗಳಿಗೆ ಮೋದಿ ಕರೆ ನೀಡಿದ್ದಾರೆ.