Advertisement

27 ವರ್ಷಗಳ ಹಿಂದೆ ನಾಪತ್ತೆಯಾದವ ನೆರೆಮನೆಯ ನೆಲಮಾಳಿಗೆಯಲ್ಲಿ ಪತ್ತೆ!!: ವಿಡಿಯೋ ವೈರಲ್

05:00 PM May 16, 2024 | Team Udayavani |

ಅಲ್ಜೀರಿಯಾ: 26 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಹದಿಹರೆಯದ ತರುಣನನ್ನು ಆತನ ಮನೆಯಿಂದ ಕೇವಲ 100 ಮೀಟರ್ ದೂರದ ನೆರೆಮನೆಯ ನೆಲಮಾಳಿಗೆಯಿಂದ ರಕ್ಷಿಸಲಾಗಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ.

Advertisement

ನ್ಯೂಯಾರ್ಕ್ ಪೋಸ್ಟ್ ಪ್ರಕಾರ, 1998 ರಲ್ಲಿ ಒಮರ್ ಬಿನ್ ಒಮ್ರಾನ್ 17 ನೇ ವಯಸ್ಸಿನಲ್ಲಿ ಶಾಲೆಗೆ ಹೋಗುತ್ತಿದ್ದಾಗ ಅಪಹರಣಕ್ಕೊಳಗಾಗಿದ್ದ.ಅಲ್ಜೀರಿಯಾದಲ್ಲಿನ ತನ್ನ ನಿವಾಸದಿಂದ ಕೇವಲ 100 ಮೀಟರ್ ದೂರದಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾನೆ. ಈಗ 45 ವರ್ಷ ವಯಸ್ಸಿನ ಒಮರ್ ಅವರನ್ನು ನೆರೆಮನೆಯವನೇ ಅಪಹರಿಸಿ ಮನೆಯಲ್ಲಿ ನೆಲಮಾಳಿಗೆಯಲ್ಲಿ ಅಕ್ರಮ ಬಂಧನದಲ್ಲಿ ಇರಿಸಿದ್ದ. ಒಂಟಿಯಾಗಿ ವಾಸಿಸುತ್ತಿದ್ದ 61 ವರ್ಷದ ವೃದ್ದನೇ ಅಪಹರಿಸಿದ್ದು ಆತನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.ಈ ಘೋರ ಅಪರಾಧ ಎಸಗಿದ ಅಪರಾಧಿಗೆ ಕಠಿನ ಶಿಕ್ಷೆ ವಿಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ಭದ್ರತಾ ಪಡೆಗಳು ಒಮರ್‌ನನ್ನು ರಕ್ಷಿಸಿದ ಕ್ಷಣದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಉದ್ದನೆಯ ಗಡ್ಡವನ್ನು ಹೊಂದಿರುವ ಒಮರ್ ನೆಲಮಾಳಿಗೆಯಿಂದ ಹೊರಬರಲು ಸಹಾಯ ಪಡೆದಿದ್ದು ನಡುಗುತ್ತಿರುವುದನ್ನು ಕಾಣಬಹುದಾಗಿದೆ.

ತನ್ನ ಸಹೋದರನೇ ಅಪಹರಣದಲ್ಲಿ ಭಾಗಿಯಾಗಿದ್ದಾನೆ ಎಂದು ಅಪಹರಣಗೈದವನ ಒಡಹುಟ್ಟಿದವ ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿದ ನಂತರ ಪೊಲೀಸರಿಗೆ ಮಾಹಿತಿ ಲಭ್ಯವಾಯಿತು. ಪಿತ್ರಾರ್ಜಿತ ಅಸ್ತಿ ವಿವಾದದಲ್ಲಿ ಸಹೋದರರ ಜಗಳ ಮಾಹಿತಿ ಬಹಿರಂಗಕ್ಕೆ ಕಾರಣವಾಯಿತು.

ಅಧಿಕಾರಿಗಳು ಮನೆಗೆ ನುಗ್ಗಿ ಹುಡುಕಿದಾಗ, ನೆಲದ ಮೇಲೆ ಹುಲ್ಲು ಹಾಸಿನ ಕೆಳಗೆ ಟ್ರ್ಯಾಪ್ಡೋರ್ ಕಂಡುಕೊಂಡಿದ್ದು ಒಳ ಪ್ರವೇಶಿಸಿ ರಕ್ಷಣೆ ನಡೆಸಿದ್ದಾರೆ. ಅಪಹರಣಕಾರನ ಮೇಲೆ ಒಮರ್‌ನ ನಾಯಿಯನ್ನು ಕೊಂದ ಆರೋಪವೂ ಇದೆ. ರಕ್ಷಿಸಿದ ನಂತರ ಒಮರ್‌ನನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.

Advertisement

1990 ರ ದಶಕದಲ್ಲಿ ದೇಶದ ಅಂತರ್ಯುದ್ಧದ ಸಮಯದಲ್ಲಿ ಒಮರ್ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕುಟುಂಬದ ಇತರ ಸದಸ್ಯರು ಭಾವಿಸಿದ್ದರು. ಆದರೆ ತಾಯಿ ಮಾತ್ರ ಮಗನನ್ನು ಹುಡುಕುತ್ತಲೇ ಇದ್ದರು. ಆಕೆ 2013 ರಲ್ಲಿ ನೋವಿನಲ್ಲೇ ನಿಧನ ಹೊಂದಿದ್ದಳು. ”ಕಿಟಕಿಯ ಮೂಲಕ ಅಪಹರಣಕಾರನ ಮನೆಯಲ್ಲಿರುವುದನ್ನು ನಾವು ನೋಡಿದ್ದೆವು ಆದರೆ ಮಾತನಾಡಿಸಲು ಅಥವಾ ಕರೆಯಲು ಸಾಧ್ಯವಾಗಲಿಲ್ಲ” ಎಂದು ಒಮರ್ ಕುಟುಂಬ ಸದಸ್ಯರು ಹೇಳಿರುವುದಾಗಿ ಅಲ್ಜೀರಿಯಾದ ಸುದ್ದಿವಾಹಿನಿಗಳು ವರದಿ ಮಾಡಿವೆ.

Advertisement

Udayavani is now on Telegram. Click here to join our channel and stay updated with the latest news.

Next