Advertisement

ಜಿಲ್ಲೆಯಲ್ಲಿ ಮಾನವ ನಿರ್ಮಿತ ಕಾಡ್ಗಿಚ್ಚೇ ಜಾಸ್ತಿ!

12:23 PM Jan 17, 2020 | Suhan S |

ಚಿಕ್ಕಬಳ್ಳಾಪುರ: ಬಯಲು ಸೀಮೆ ಜಿಲ್ಲೆಗಳಲ್ಲಿ ಒಂದಾದ ಚಿಕ್ಕಬಳ್ಳಾಪುರದಲ್ಲಿ ಯಾವುದೇ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ನದಿ, ನಾಲೆಗಳು ಇಲ್ಲದೇ ಭೂಮಿ ಹಸಿರು ಕಾನನಗಿಂತ ಹೆಚ್ಚು ಒಣ ಪ್ರದೇಶದಿಂದ ಆವರಿಸಿಕೊಂಡಿರುವ ಪರಿಣಾಮ ಬೇಸಿಗೆ ಬಂದರೆ ಜಿಲ್ಲೆಯ ಅರಣ್ಯವನ್ನು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನೋಡಬೇಕಾದ ಪರಿಸ್ಥಿತಿ ಅರಣ್ಯ ಇಲಾಖೆಯದ್ದಾಗಿದೆ.

Advertisement

ಅರಣ್ಯ ನಾಶ: ಸತತ ಹತ್ತಾರು ವರ್ಷಗಳಿಂದ ಮಳೆ ಇಲ್ಲದೇ ಬರದಿಂದ ತತ್ತರಿಸಿರುವ ಜಿಲ್ಲೆಯಲ್ಲಿ ಕಾಡಿನೊಳಗಿನ ಮರ, ಗಿಡಗಳು, ಅಪಾರ ಪ್ರಮಾಣದ ಸಸ್ಯ ಸಂಪತ್ತು ಬೇಸಿಗೆ ಬಂದರೆ ಒಣಗುವಂತಾಗಿದೆ. ಈ ವೇಳೆ ಆಕಸ್ಮಿಕವಾಗಿ ಅಥವಾ ಮಾನವ ನಿರ್ಮಿತ ಕಾಡ್ಗಿಚ್ಚು ಸಂಭವಿಸಿ ವ್ಯಾಪಕ ಪ್ರಮಾಣದಲ್ಲಿ ಅರಣ್ಯ ನಾಶವಾಗುತ್ತಿರುವುದು ಜಿಲ್ಲೆಯ ಹವಾಮಾನ ವೈಪರೀತ್ಯದ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಬೀರುವುದರ ಜೊತೆಗೆ ಜಿಲ್ಲೆ ಸದಾ ಬರದ ಛಾಯೆಯಿಂದ ನರಳುವಂತಾಗಿದೆ.

ನಂದಿಸಲು ಸಕಾಲಕ್ಕೆ ಅಸಾಧ್ಯ: ಜಿಲ್ಲೆಯಲ್ಲಿ ಮಿತಿ ಮೀರಿ ಬೆಳೆಸಿರುವ ನೀಲಿಗಿರಿ ಮರಗಳು ಬೇಸಿಗೆಯಲ್ಲಿ ಕಾಣುವ ಕಾಡ್ಗಿಚ್ಚುಗೆ ಇನ್ನಷ್ಟು ತುಪ್ಪ ಸುರಿಯುವಂತಾಗಿದೆ. ಬೃಹದಾಕಾರವಾಗಿರುವ ಬೆಟ್ಟಗುಡ್ಡಗಳಲ್ಲಿ ಬೇಸಿಗೆಯಲ್ಲಿ ಉದುರುವ ಎಲೆಗಳಿಗೆ ಆಕಸ್ಮಿಕವಾಗಿ ತಗಲುವ ಬೆಂಕಿ ಕಿಡಿಗಳಿಗೆ ಕಾಡ್ಗಿಚ್ಚು ಹರಡುತ್ತಿದೆ. ಆದರೆ ಅದನ್ನು ಸಮರ್ಪಕವಾಗಿ ಸಕಾಲದಲ್ಲಿ ನಂದಿಸಲು ಸಾಧ್ಯವಾಗದೇ ಹೆಕ್ಟೇರ್‌ ಗಟ್ಟಲೇ ಅರಣ್ಯದೊಳಗಿರುವ ಹುಲ್ಲುಕಡ್ಡಿ, ಸಸ್ಯ ಸಂಪತ್ತು ನಾಶವಾಗುತ್ತಿದೆ.

ಒಣಗಿದ ಹುಲ್ಲಿಗೆ ಬೆಂಕಿ: ಬಹಳಷ್ಟು ಕಾಡ್ಗಿಚ್ಚು ಪ್ರಕರಣಗಳು ಮಾನವ ನಿರ್ಮಿತವಾದದ್ದು ಎನ್ನುವುದು ಆತಂಕದ ವಿಚಾರ. ಹುಲ್ಲು ಸುಟ್ಟರೆ ಮುಂದೆ ಒಳ್ಳೆಯ ಹಸಿರು ಹುಲ್ಲು ಬರುತ್ತದೆ ಎಂಬ ಹಳ್ಳಿಗಾಡಿನ ಕುರಿ, ಮೇಕೆ, ದನ ಕಾಯುವ ಮಂದಿ ಬೇಸಿಗೆಯಲ್ಲಿ ಒಣಗಿದ ಹುಲ್ಲಿಗೆ ಬೆಂಕಿ ಇಡುವುದರಿಂದ ಅದು ಹರಡಿಕೊಂಡು ಕಾಡಿಗೆ ವ್ಯಾಪಿಸುತ್ತದೆ. ಜೊತೆಗೆ ರೈತರು ತಮ್ಮ ಹೊಲ, ಗದ್ದೆಗಳನ್ನು ಸ್ವಚ್ಛ ಮಾಡಲು ಅನಾವಶ್ಯಕವಾಗಿ ಬೆಳೆದ ಮುಳ್ಳು ಕಡ್ಡಿ ಮತ್ತಿತರ ಗಿಡಗಳನ್ನು ಕೀಳಲಾಗದೆ ರೈತರು ಬೆಂಕಿ ಇಟ್ಟು ಸುಡುವುದರಿಂದ ಅದು ಸಮೀಪದ ಕಾಡುಗಳಿಗೆ ಹರಡಿ ಕಾಡ್ಗಿಚ್ಚು ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮತ್ತೂಂದೆಡೆ ಭೂಗಳ್ಳರು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲು ಅರಣ್ಯಕ್ಕೆ ಬೆಂಕಿ ಇಡುವ ಪ್ರಸಂಗಗಳು ಜಿಲ್ಲೆಯಲ್ಲಿ ನಡೆಯುವುದನ್ನು ತಳ್ಳಿ ಹಾಕುವಂತಿಲ್ಲ.

ಕಾಡ್ಗಿಚ್ಚು ನಂದಿಸಲು ಬೆಂಕಿ ಲೈನ್‌: ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಸಂಭವಿಸುವ ಕಾಡ್ಗಿಚ್ಚು ನಂದಿಸಲುಈಗಿನಿಂದಲೇ ಅರಣ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ವಿಶೇಷವಾಗಿ ಸಸ್ಯ ಸಂಪತ್ತು ಇರುವ ನಂದಿಗಿರಿಧಾಮ, ಸ್ಕಂದಗಿರಿಬೆಟ್ಟ, ಅವುಲುಬೆಟ್ಟ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿರುವ ಅರಣ್ಯ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸಿಬ್ಬಂದಿಗಳಿಗೆ ಸೂಚಿಸಿದೆ. ಒಂದು ಕಾಡಿನಿಂದ ಮತ್ತೂಂದು ಕಾಡಿಗೆ ಬೆಂಕಿ ತಗಲದಂತೆ ಬೆಂಕಿ ಲೈನ್‌ ಎಂಬ ಯೋಜನೆ ರೂಪಿಸಿದ್ದರೆ ಕಾಡಿನಲ್ಲಿ ಕಾಣಿಸಿಕೊಳ್ಳುವ ಕಾಡ್ಗಿಚ್ಚು, ಮತ್ತೂಂದು ಕಡೆಗೆ ಹರಡದಂತೆ ಅಲ್ಲಿಯೇ ನಂದಿಸುವ ವ್ಯವಸ್ಥೆಗೆ ಬೆಂಕಿ ವಾಚರ್‌ ಎನ್ನಲಾಗುತ್ತದೆ.

Advertisement

ಅರಣ್ಯ ಇಲಾಖೆಗೆ  ಸಿಬ್ಬಂದಿ ಕೊರತೆ: ಅರಣ್ಯಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದು ಬೇಸಿಗೆ ಸಂದರ್ಭದಲ್ಲಿ ಕಾಡ್ಗಿಚ್ಚುನ್ನು ಸಮರ್ಪಕವಾಗಿ ನಿಯಂತ್ರಿಸಿ ನಂದಿಸಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಇದೆ. ಒಣ ಪ್ರದೇಶ ಹೆಚ್ಚಾಗಿರುವುದರಿಂದ ಕಾಡ್ಗಿಚ್ಚು ಹೆಚ್ಚಾಗಿರುತ್ತದೆ. ಆದರೆ ಸಿಬ್ಬಂದಿ ಕೊರತೆಯಿಂದ ಇಂತಹ ಪ್ರಕರಣಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತಿಲ್ಲ. ಬೆಂಕಿ ನಂದಿಸಲು ಆಧುನಿಕವಾದ ಉಪಕರಣಗಳು ಇಲ್ಲ. ಅಗ್ನಿಶಾಮಕವನ್ನು ಬಳಸಿಕೊಳ್ಳಬಹುದು. ಆದರೆ ಬೆಟ್ಟ, ಗುಡ್ಡಗಳಲ್ಲಿ ಕಾಡ್ಗಿಚ್ಚು ಸಂಭವಿಸಿದರೆ ಅವುಗಳ ಬಳಕೆ ಸಾಧ್ಯವಾಗುವುದಿಲ್ಲ. ಇದರಿಂದ ಇರುವ ಸಿಬ್ಬಂದಿಯನ್ನು ಬಳಸಿಕೊಂಡು ಅರಣ್ಯ ಇಲಾಖೆ ಬೇಸಿಗೆಯಲ್ಲಿ ಎದುರಾಗುವ ಕಾಡ್ಗಿಚ್ಚನ್ನು ನಂದಿಸಲು ಸಜ್ಜಾಗುತ್ತಿದೆ.

 

ನಂದಿಗಿರಿಧಾಮ, ಸ್ಕಂದಗಿರಿಗೂ ತಪಲ್ಲ  ಕಾಡ್ಗಿಚ್ಚು :  ಜಿಲ್ಲೆಯಲ್ಲಿ ಪ್ರಾಕೃತಿಕವಾಗಿ ಅಪಾರ ಪ್ರಮಾಣದ ಸಸ್ಯಕಾಶಿಯನ್ನು ಹೊಂದಿರುವ ದಕ್ಷಿಣ ಕರ್ನಾಟಕ ಊಟಿಯೆಂದು ಪ್ರಸಿದ್ಧಿ ಪಡೆದಿರುವ ವಿಶ್ವ ವಿಖ್ಯಾತ ನಂದಿಗಿರಿಧಾಮಕ್ಕೂ ಬೇಸಿಗೆ ಅವಧಿಯಲ್ಲಿ ಕಾಡ್ಗಿಚ್ಚು ಕಾಟ ತಪ್ಪಲ್ಲ. ಒಂದಲ್ಲ ಒಂದು ರೀತಿಯಲ್ಲಿ ಗಿರಿಧಾಮದಲ್ಲಿ ಬೇಸಿಗೆಯಲ್ಲಿ ಕಾಡ್ಗಿಚ್ಚು ಹರಡಿಕೊಂಡು ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶವಾಗುತ್ತದೆ. ಸಮುದ್ರ ಮಟ್ಟದಿಂದ ಬರೋಬ್ಬರಿ 4000 ಸಾವಿರ ಅಡಿಗೂ ಎತ್ತರದಲ್ಲಿರುವ ನಂದಿಗಿರಿಧಾಮದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡರೆ ನಂದಿಸುವುದು ಸವಾಲಿನ ಕೆಲಸ. ಆದರೂ ಅರಣ್ಯ ಇಲಾಖೆ ನಂಗಿರಿಧಾಮದ ಬಗ್ಗೆ ವಿಶೇಷ ಜಾಗ್ರತೆ ವಹಿಸುತ್ತದೆ. ಇನ್ನೂ ನಂದಿಗಿರಿಧಾಮಕ್ಕೆ ಅಂಟಿಕೊಂಡಿರುವ ಚಾರಣ ಪ್ರಿಯರ ಮೋಹಕ ಸೆಳೆಯಾದ ಸ್ಕಂದಗಿರಿ ಬೆಟ್ಟದಲ್ಲಿ ಕೂಡ ಅರಣ್ಯ ಇಲಾಖೆ ಹೆಚ್ಚು ಜಾಗ್ರತೆ ವಹಿಸಬೇಕಿದೆ. ಇಲ್ಲಿ ಕೂಡ ಬೇಸಿಗೆ ಕಾಲದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡು ಬೆಟ್ಟದಲ್ಲಿನ ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶವಾಗುತ್ತದೆ.

ಜಿಲ್ಲೆಯಲ್ಲಿ ಒಣ ಪ್ರದೇಶ  ಇರುವುದರಿಂದ ಅರಣ್ಯ ಪ್ರದೇಶವನ್ನು ಸಾಕಷ್ಟು ಸೂಕ್ಷ್ಮವಾಗಿ ನೋಡಿಕೊಳ್ಳಬೇಕಿದೆ. ಜಿಲ್ಲೆಯಲ್ಲಿ ಒಟ್ಟು ಐದು ವಲಯವಾಗಿ ಗುರುತಿಸಲಾಗಿದೆ. ಇಲಾಖೆ ನೀಡಿರುವ ಅನುದಾನದಲ್ಲಿ ಬೇಸಿಗೆ ಸಂದರ್ಭದಲ್ಲಿ ಸಂಭವಿಸುವ ಕಾಡ್ಗಿಚ್ಚನ್ನು ನಂದಿಸಲು ಬೆಂಕಿ ಲೈನ್‌ ಹಾಗೂ ಬೆಂಕಿ ವಾಚರ್‌ ಮುಖಾಂತರ ಕ್ರಮ ವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಭೀಕರವಾದಂತಹ ಅಥವಾ ವನ್ಯಜೀವಿಗಳ ಸಾವು ನೋವು ಸಂಭವಿಸಿದ ರೀತಿಯಲ್ಲಿ ಎಂದೂ ಕಾಡ್ಗಿಚ್ಚು ಸಂಭವಿಸಿಲ್ಲ -ಶ್ರೀಧರ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ

 

-ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next