ವಿಶಾಖಪಟ್ಟಣ: ಭೋಪಾಲ್ ಅನಿಲ ದುರಂತ ವನ್ನು ನೆನಪಿಸಿದ್ದ, ವಿಶಾಖಪಟ್ಟಣದ ಎಲ್‌ಜಿ ಪಾಲಿ ಮರ್ಸ್ ರಾಸಾಯನಿಕ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಲು ಮಾನವ ದೋಷವೇ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ದೃಢವಾಗಿದೆ.
ಆಂಧ್ರಪ್ರದೇಶದ ವಿಧಿವಿಜ್ಞಾನ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ, ಕಳೆದ ಎರಡು ದಿನಗಳಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿ, ಈ ವರದಿ ನೀಡಿದೆ.
ಏನು ಕಾರಣ?: ಲಾಕ್‌ಡೌನ್ ಅವಧಿಯಲ್ಲಿ ಸ್ಟೈರೀನ್ ಟ್ಯಾಂಕ್‌ನಲ್ಲಿ ಸ್ವಯಂ ಪಾಲಿಮರೀಕರಣ ಪ್ರತಿರೋಧಕವನ್ನು ಸೇರಿಸುವಲ್ಲಿ ನಿರ್ಲಕ್ಷ್ಯ ತೋರಿರುವುದೇ ಈ ದುರಂತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಅಲ್ಲದೆ, ಟ್ಯಾಂಕ್‌ನಲ್ಲಿ 20 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನ ಕಾಯ್ದುಕೊಳ್ಳುವಲ್ಲಿ ಕಾರ್ಖಾನೆ ವಿಫಲವಾಗಿದೆ. ‘ಕೂಲಿಂಗ್ ಪ್ರಕ್ರಿಯೆಯನ್ನು ಸರಿಯಾಗಿ ನಿರ್ವಹಿಸದೆ ಇದ್ದದ್ದೇ, ಅಗಾಧ ಶಾಖ ಉತ್ಪಾದನೆಗೆ ಕಾರಣವಾಗಿದೆ’ ಎಂದು ಹಿರಿಯ ವಿಧಿ ವಿಜ್ಞಾನ ತಜ್ಞರೊಬ್ಬರು ಹೇಳಿದ್ದಾರೆ.
ಆಪರೇಟರ್ ಇರಲಿಲ್ಲ: ತಜ್ಞರು ಸ್ಥಳಕ್ಕೆ ಭೇಟಿ ನೀಡಿದ ದಿನ, ಸ್ಟೈರೀನ್ ಕುದಿವ ವಾತಾವರಣದಲ್ಲಿ 146 ಡಿಗ್ರಿ ಸೆ. ಉಷ್ಣಾಂಶ ದಾಖಲಾಗಿತ್ತು.
ಪ್ರತಿನಿತ್ಯ ಇಲ್ಲಿನ ವಿದ್ಯಮಾನ ಪರಿಶೀಲಿಸಲು ಒಬ್ಬರು ಆಪರೇಟರ್ ಅನ್ನು ಕೂರಿಸಬೇಕಿತ್ತು. ಆದರೆ, ಎಲ್‌ಜಿ ಪಾಲಿಮರ್ಸ್ ಅದನ್ನು ಮಾಡಿಲ್ಲ ಎಂದಿದ್ದಾರೆ.