ಕುಮಟಾ: ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿಯ ಎಸ್ ಬಿಐ ಎಟಿಎಂ ಮಷಿನ್‌ನಲ್ಲಿ ಹಣ ತೆಗೆಯುತ್ತಿರುವಾಗ ಸಹಾಯದ ನೆಪವೊಡ್ಡಿ ಅಪರಿಚಿತ ವ್ಯಕ್ತಿಯೋರ್ವ 70 ಸಾವಿರಕ್ಕೂ ಅಧಿಕ ಹಣವನ್ನು ಲಪಟಾಯಿಸಿ, ಪರಾರಿಯಾದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.
ಕುಮಟಾ ನ್ಯಾಯಾಲಯದಲ್ಲಿ ಕೊರ್ಟ್ ಬೀಲಿಫ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಂಜುನಾಥ ಬೋರಕರ್ ಅವರು ವಂಚನೆಗೊಳಗಾದ ವ್ಯಕ್ತಿಯಾಗಿದ್ದು, ಇವರು ಎಸ್ ಬಿಐ ಎಟಿಎಂ ಕೌಂಟರ್‌ಗೆ ಹಣ ಡ್ರಾ ಮಾಡಲು ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ:ಐಎಸ್‌ಡಿಗೆ ಗುಜರಾತ್ ಮಾದರಿ ತರಬೇತಿ! ಕರಾವಳಿ ಕಾವಲುಪಡೆ ಸಾಮರ್ಥ್ಯ ವರ್ಧನೆಯ ಉದ್ದೇಶ
ಎಟಿಎಂ ಮಷಿನ್‌ನಲ್ಲಿ ಕಾರ್ಡ್ ಹಾಕಿ ಹಣ ತೆಗೆಯುತ್ತಿರುವಾಗ ಅಪರಿಚಿತ ವ್ಯಕ್ತಿಯೋರ್ವನು ಮಂಜುನಾಥ ಬೋರಕರ್ ಅವರಿಗೆ ಸಹಾಯ ಮಾಡುವ ನೆಪವೊಡ್ಡಿ ಎಟಿಎಂ ಕಾರ್ಡ್ ಅನ್ನು ತೆಗೆದುಕೊಂಡು, ಮಂಜುನಾಥ ಬೋರಕರ್ ಅವರಿಗೆ ತಿಳಿಯದಂತೆ ಎಟಿಎಂ ಯಂತ್ರದಲ್ಲಿ ಬೇರೊಂದು ಕಾರ್ಡ್ ಇಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ.
ನಂತರ ಮಂಜುನಾಥ ಅವರ ಎಟಿಎಂ ಕಾರ್ಡ್ ಬಳಸಿಕೊಂಡು 70,905 ರೂ. ಹಣವನ್ನು ಡ್ರಾ ಮಾಡಿಕೊಂಡಿದ್ದಾನೆ. ಇದು ತಿಳಿದ ತಕ್ಷಣವೇ ಮಂಜುನಾಥ ಬೋರಕರ್ ಕುಮಟಾ ಪೋಲಿಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿತನ ಹುಡುಕಾಟಕ್ಕಾಗಿ ಬಲೆ ಬೀಸಿದ್ದಾರೆ. ಈ ಅಪರಿಚಿತ ವ್ಯಕ್ತಿಯನ್ನು ಕಂಡಲ್ಲಿ ಕುಮಟಾ ಪೊಲೀಸ್ ಠಾಣೆಗೆ ಅಥವಾ ಹತ್ತಿರದ ಠಾಣೆಗೆ ಮಾಹಿತಿ ನೀಡುವಂತೆ ಕುಮಟಾ ಪಿಎಸ್ಐ ಆನಂದ ಮೂರ್ತಿ ತಿಳಿಸಿದ್ದಾರೆ.
ಇದನ್ನೂ ಓದಿ:‘ಗ್ಯಾಂಗ್ ರೇಪ್’ ಬೆದರಿಕೆ ಎದುರಿಸಿದ್ದರಂತೆ ನಟಿ ಪ್ರಿಯಾಂಕಾ…!