ಪ್ಯಾರಿಸ್: ಎಲ್ಲೆಲ್ಲೂ ಭೂಮಿಯಲ್ಲಿರುವ ಸಂಪತ್ತು ಲೂಟಿ ಮಾಡಲಾಗುತ್ತದೆ. ಮಾನವನ ದುರಾಸೆಗೆ ಕಾಡುಗಳು ನಾಶವಾಗುತ್ತಿವೆ. ಕೃಷಿ ಭೂಮಿಗಳು ಉದ್ಯಮಿಗಳ ಪಾಲಾಗುತ್ತಿವೆ. ನದಿ, ಕೆರೆ ಇನ್ನಿತರ ಜಲ ಸಂಪನ್ಮೂಲಗಳು ಬರಿದಾಗುತ್ತಿವೆ ಅಥವಾ ಕಲುಷಿತವಾಗುತ್ತಿವೆ.
ಕುಡಿಯುವ ನೀರು, ತಿನ್ನುವ ಆಹಾರ, ಉಸಿರಾಡುವ ಗಾಳಿ… ಎಲ್ಲವೂ ರಾಸಾಯನಿಕ ಯುಕ್ತವಾಗಿವೆ. ಇಡೀ ಭೂಮಂಡಲವೇ ‘ವಿಷದ ಗೋಳ’ ಎಂಬಂತಾಗಿದೆ. ಇಂಥ ವಿಷಮ ಪರಿಸ್ಥಿತಿ ಹೀಗೇ ಮುಂದುವರಿದರೆ, ಹಸುರು, ಜಲ, ಪ್ರಾಣಿ-ಪಕ್ಷಿಗಳು ಮಾತ್ರವಲ್ಲ ಮಾನವ ಸಂಕುಲವೇ ಸರ್ವನಾಶವಾಗುತ್ತದೆ ಎಂದು ವಿಶ್ವಸಂಸ್ಥೆಯ ಅಧ್ಯಯನವೊಂದು ಎಚ್ಚರಿಸಿದೆ.
ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಸಂಬಂಧಿಸಿ ಸೋಮವಾರ ಪ್ಯಾರಿಸ್‌ನಲ್ಲಿ ಆರಂಭವಾದ 132 ರಾಷ್ಟ್ರಗಳ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ವಿಶ್ವಸಂಸ್ಥೆಯ ಪರಿಸರ ವಿಭಾಗದ ಮುಖ್ಯಸ್ಥ ರಾಬರ್ಟ್ ವಾಟ್ಸನ್ ಈ ವಿಷಯ ತಿಳಿಸಿದ್ದಾರೆ. 450 ಪರಿಸರ ತಜ್ಞರು ಸೇರಿ ತಯಾರಿಸಿರುವ ಈ ವರದಿಯಲ್ಲಿ ಭೂಮಿಯ ಮೇಲಿನ ಜೀವಿಗಳ ಅಳಿವು-ಉಳಿವಿನ ಬಗ್ಗೆಯೇ ಹೆಚ್ಚು ಪ್ರಸ್ತಾಪಿಸಲಾಗಿದೆ.
ಪರಿಸರ ಹಾನಿಯಿಂದಾಗಿ ಕೆಲವೇ ದಶಕಗಳಲ್ಲಿ ಈಗಿರುವ ಸಸ್ಯ ಪ್ರಭೇದಗಳಲ್ಲಿ ಸುಮಾರು 10 ಲಕ್ಷ ಪ್ರಭೇದಗಳು ನಾಶವಾಗಲಿವೆ. 10 ದಶಲಕ್ಷ ವರ್ಷಗಳಿಗೆ ಹೋಲಿಸಿದರೆ ಪ್ರಾಣಿ ಹಾಗೂ ಸಸ್ಯ ಪ್ರಭೇದಗಳು ನಾಶವಾಗುತ್ತಿರುವ ವೇಗವು ಇತ್ತೀಚಿನ ವರ್ಷಗಳಲ್ಲಿ ನೂರಾರು ಪಟ್ಟು ಹೆಚ್ಚಳವಾಗಿದೆ.
ಮೊದಲಿಗೆ ಸಸ್ಯ ಸಂಕುಲವು ಈ ಭೂಮಿಯಿಂದ ಮಾಯವಾಗುತ್ತದೆ. ಅದಾದ ಅನಂತರ, ಹಸುರು ಅವಲಂಬಿತ ಪ್ರಾಣಿ- ಪಕ್ಷಿಗಳು ಮಾಯವಾಗುತ್ತವೆ. ಹಸುರು, ಪ್ರಾಣಿಗಳು ಮಾಯವಾದ ಅನಂತರ ಮನುಷ್ಯನಿಗೆ ಆಹಾರದ ಕೊರತೆ ಕಾಣಿಸಿಕೊಂಡು ಕೊನೆಗೊಂದು ದಿನ ಆತನೂ ಈ ಭೂಮಿಯಿಂದ ಕಣ್ಮರೆಯಾಗುತ್ತಾನೆ.
ಹೀಗೆ, ತನ್ನ ಅಧಃಪತನಕ್ಕೆ ಕಾರಣವಾಗುವ ಶಕ್ತಿಯನ್ನು ಈ ಪ್ರಕೃತಿಯೇ ನಿಧಾನವಾಗಿ ನಾಶಪಡಿಸುತ್ತದೆ ಹಾಗೂ ಮನುಷ್ಯ ಸಂತತಿ ಕೊನೆಗೊಂಡ ಅನಂತರ ಪರಿಸರ ಪುನಃ ಚಿಗುರೊಡೆಯುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.