Advertisement

ಹೇಳಿದ ತತ್ವದಂತೆ ಮನುಷ್ಯ ಬದುಕುತ್ತಿಲ್ಲ: ಸಿರಿಗೆರೆ ಶ್ರೀ

05:36 PM Mar 14, 2022 | Team Udayavani |

ಕೂಡಲಸಂಗಮ: ಮನುಷ್ಯ ತತ್ವಗಳನ್ನು ಹೇಳುತ್ತಿದ್ದಾನೆ. ತತ್ವದಂತೆ ಬದುಕುತ್ತಿಲ್ಲ. ಇದರಿಂದ ಬದುಕು ದಿನದಿಂದ ದಿನಕ್ಕೆ ಆನಂದಮಯವಾಗದೆ ನರಕಮಯವಾಗುತ್ತಿದೆ ಎಂದು ಸಾಣೇಹಳ್ಳಿ ಸಿರಿಗೆರೆ ಶಾಖಾಮಠದ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಕೂಡಲಸಂಗಮ ಬಸವ ಧರ್ಮ ಪೀಠ ಆವರಣದಲ್ಲಿ ನಡೆದ ಮಾತೆ ಮಹಾದೇವಿಯವರ 76ನೇ ಜನ್ಮದಿನ ಹಾಗೂ ಲಿಂಗಾಯತ ಧರ್ಮ ಸಂಕಲ್ಪ ದಿನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಇಂದು ರಷ್ಯಾ ಉಕ್ರೇನ್‌ ರಾಷ್ಟ್ರಗಳ ನಡುವಿನ ಯುದ್ದಕ್ಕೆ ಕಾರಣ ಶ್ರೀಮಂತಿಕೆಯ ಅಂಧಕಾರ, ಬುದ್ಧಿವಂತಿಕೆಯ ಅಹಂಕಾರ. ಎಲ್ಲರೂ ನನ್ನ ಮಾತು ಕೇಳಬೇಕು ಎಂಬ ದುರ್ಗುಣ. ಮನುಷ್ಯ ಈ ದುರ್ಗುಣಗಳಿಂದಲೇ ಮಹಾದೇವನಾಗದೆ ರಾಕ್ಷಸನಾಗುತ್ತಿದ್ದಾನೆ. ಬೇರೆಯವರ ದೋಷ ಎತ್ತಿ ಹೇಳುವ ನೈತಿಕ ಗುಣ ನಮ್ಮಲ್ಲಿ ಇದೆಯೇ ಎಂಬ ಆತ್ಮಾವಲೋಕನವನ್ನು ಪ್ರತಿಯೊಬ್ಬರು ಮಾಡಿಕೊಳ್ಳಬೇಕು ಎಂದರು.

12ನೇ ಶತಮಾನದ ಬಸವಾದಿ ಶರಣರು ತಮ್ಮ ಬದುಕನ್ನು ಆತ್ಮಾವಲೋಕನ ಮಾಡಿಕೊಂಡು ಸಮಾಜದ ಜನರ ಬದುಕುತ್ತಿದ್ದರು. ಜನರ ಪರಿವರ್ತನೆ ಮಾಡುವ ಕಾಯಕ ಮಾಡಿದರು. ನಿಷ್ಠೆ, ಬದ್ಧತೆಯಿಂದ ಬದುಕಿದರು. ಇಂದು ಇವೆಲ್ಲವೂ ಮಾಯವಾಗುತ್ತಿವೆ. ಕೂಡಲಸಂಗಮದಲ್ಲಿ ಸ್ವತ್ಛತೆಯ ಕೊರತೆ ಅಧಿಕವಾಗಿದ್ದು, ಶುದ್ಧಗೊಳಿಸುವ ಕಾರ್ಯ ನಡೆಯಬೇಕು ಎಂದರು.

ವಚನಗಳ ಮೂಲ ಆಶಯ ಅಂಕಿತವಾಗಿರಲಿಲ್ಲ, ತತ್ವ ಪ್ರಸಾರವಾಗಿತ್ತು. ಮಾತೆ ಮಹಾದೇವಿಯವರು ಬಸವಣ್ಣನವರ ವಚನಗಳಿಗೆ ಲಿಂಗದೇವ ಅಂಕಿತ ಬಳಸಿದಾಗ ವಿರೋಧ ಮಾಡಿದೇವು. ಬಸವ ಧರ್ಮ ಪೀಠ ದಿಂದ ದೂರ ಇದ್ದವು. ಮಾತೆ ಗಂಗಾದೇವಿ ಬಸವಣ್ಣನವರ ವಚನಗಳಿಗೆ ಕೂಡಲಸಂಗಮದೇವ ಅಂಕಿತ ಬಳಸಲು ಕರೆ ಕೊಟ್ಟಾಗ ಸಂತೋಷವಾಯಿತು. ಇಂದು ಕಾರ್ಯಕ್ರಮದಲ್ಲಿ ಭಾಗವಹಿಸಿದೇವು ಎಂದರು.

ಗೌರಿಗದ್ದೆ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ವಿನಯ ಗುರುಜಿ ಉದ್ಘಾಟಿಸಿ ಮಾತನಾಡಿದ ಅವರು, ವಚನ ಸಾಹಿತ್ಯ ಜೀವನದ ಅನುಭವಗಳನ್ನು ಹೇಳಿದ್ದರಿಂದಲೇ ಶತಮಾನಗಳಿಂದಲೂ ಶಾಶ್ವತವಾಗಿ ನೆಲೆ ನಿಂತಿದೆ. ಶರಣರು ನಡೆದಾಡಿದ ಈ ಪುಣ್ಯಭೂಮಿಯನ್ನು ಕಸಮುಕ್ತ ಮಾಡುವ ಕಾರ್ಯವನ್ನು ಮಾಡಬೇಕು ಎಂದರು.

Advertisement

ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಮಾತನಾಡಿ, ಬಸವಣ್ಣನವರನ್ನು ಬಹುಮುಖಿಯಾಗಿ ನಾಡಿಗೆ ಪರಿಚಯಿಸಿದವರು ಮಾತೆ ಮಹಾದೇವಿ. ಬಸವ ಧರ್ಮ ಪೀಠವನ್ನು ಪ್ರವಚನ, ವಚನ ಸಾಹಿತ್ಯದ ಮೂಲಕ ಕಟ್ಟಿದರು. ಬಸವಾದಿ ಶರಣರ ಆಶಯಗಳನ್ನು ಈಡೇರಿಸುವ ಕಾರ್ಯವನ್ನು ಮಾಡಿದರು ಎಂದರು.

ಬೀದರದ ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಅಧ್ಯಕ್ಷತೆ ವಹಿಸಿದರು. ಚಿಂತಕ ರುದ್ರಪ್ಪ ಕುರಕುಂದಿ ಉಪನ್ಯಾಸ ನೀಡಿದರು. ಮಾತೆ ಮಹಾದೇವಿ ಬರೆದ ಗಣಗೀತೆ ಪುಸ್ತಕವನ್ನು ವಿಜಯಕುಮಾರ ಮೇಳಕುಂದೆ, ಶ್ರೀಧರ ಗೌಡರ ಬರೆದ ಶರಣರ ಚರಿತೆ ಪುಸ್ತಕವನ್ನು ಜಿ.ಜಿ. ಪಾಟೀಲ, ವಚನ ವಾಣಿ ಪುಸ್ತಕವನ್ನು ಶಂಕರ ಗುಡಸ್‌ ಬಿಡುಗಡೆ ಮಾಡಿದರು.

ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ, ಬೀದರ ಬಸವ ಗಿರಿ ಲಿಂಗಾಯತ ಮಹಾಮಠದ ಅಕ್ಕಅನ್ನಪೂರ್ಣ ತಾಯಿ, ಮಹಾರಾಷ್ಟ್ರ ಅಲ್ಲಮಪ್ರಭು ಯೋಗ ಪೀಠದ ಬಸವಕುಮಾರ ಸ್ವಾಮೀಜಿ, ಶಾಸಕ ದೊಡ್ಡನಗೌಡ ಪಾಟೀಲ, ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ ಇದ್ದರು.

ಎಸ್‌.ಬಿ. ಜೋಡಳ್ಳಿ ಸ್ವಾಗತಿಸಿದರು. ರವಿ ಪಾಪಡೆ ವಂದಿಸಿದರು. ಸುರೇಶ ಸ್ವಾಮಿ ನಿರೂಪಿಸಿದರು. ವಿಜಯಪುರದ ನಿವೃತ್ತ ಕೃಷಿ ಅಧಿಕಾರಿ ಸಿ.ಬಿ.ಬೇವನೂರ ಅವರಿಗೆ ಶರಣ ಕಾಯಕ ರತ್ನ, ಬೀದರ ಲಿಂಗಾಯತ ಸಮಾಜ ಜಿಲ್ಲಾಧ್ಯಕ್ಷ ಕುಶಾಲರಾವ್‌ ಪಾಟೀಲ ಅವರಿಗೆ ಶರಣ ದಾಸೋಹ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next