ಚಿಕ್ಕಮಗಳೂರು: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಯುವಕ ಮನೆಗೆ ನುಗ್ಗಿ ಇಬ್ಬರು ಮಕ್ಕಳ ಎದುರೇ ಗೃಹಿಣಿಯನ್ನು ಚಾಕುವಿನಿಂದ ಚುಚ್ಚಿದ್ದು, ಅಷ್ಟಕ್ಕೂ ಸಾವನಪ್ಪದ ಕಾರಣ ಎಳೆದೊಯ್ದು ಕೆರೆಗೆ ಬಿಸಾಡಿರುವ ಘಟನೆ ಬಾಳೆಹೊನ್ನೂರು ಸಮೀಪ ಕಿಚ್ಚಬ್ಬಿ ಗ್ರಾಮದಲ್ಲಿ ಶನಿವಾರ (ಡಿ.07) ನಡೆದಿದೆ.
ಬೆಂಗಳೂರು ಆನೆಕಲ್‌ನ ಚಿರಂಜೀವಿ ಆರೋಪಿಯಾಗಿದ್ದು, ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಕಿಚ್ಚಬ್ಬಿ ಗ್ರಾಮದ ತೃಪ್ತಿ ಎಂಬಾಕೆಗೆ ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರು ಮೂಲದ ಆನೆಕಲ್‌ನ ಚಿರಂಜೀವಿ ಎಂಬಾತ ಪರಿಚಯವಾಗಿದ್ದಾನೆ. ಪರಿಚಯ ಪ್ರಣಯಕ್ಕೆ ತಿರುಗಿ ಇಬ್ಬರು ಕೆಲವು ತಿಂಗಳ ಹಿಂದೆ ಕಾಣಿಯಾಗಿದ್ದರು. ತನಿಖೆ ನಡೆಸಿದ್ದ ಪೊಲೀಸರು ತೃಪ್ತಿಯನ್ನು ಬಾಳೆ ಹೊನ್ನೂರು ಕಿಚ್ಚಬ್ಬಿ ಗಂಡನ ಮನೆಗೆ ಸೇರಿಸಿದ್ದರು.
ಮನೆಗೆ ಬಂದ ಬಳಿಕ ಚಿರಂಜೀವಿ ಜತೆ ಸಂಪೂರ್ಣ ಸಂಬಂಧವನ್ನು ಕಡಿದುಕೊಂಡಿದ್ದಳು. ಇದರಿಂದ ಕುಪಿತನಾದ ಚಿರಂಜೀವಿ ಶನಿವಾರ ಏಕಾಏಕಿ ತೃಪ್ತಿಯ ಮನೆಗೆ ನುಗ್ಗಿ ತೃಪ್ತಿಗೆ ಚಾಕುವಿನಿಂದ ಬರ್ಬರವಾಗಿ ಹಲ್ಲೆ ಮಾಡಿದ್ದಾನೆ. ಇಷ್ಟದರೂ ಮಹಿಳೆ ಸಾವನಪ್ಪದ್ದಿದ್ದಾಗ, ಮನೆಯಿಂದ ಎಳೆದೊಯ್ದು ಸಮೀಪದ ಕೆರೆಗೆ ಬಿಸಾಡಿದ್ದಾನೆ.
ಘಟನೆ ವೇಳೆ ತೃಪ್ತಿಯ ಪತಿ ಕೆಲಸಕ್ಕೆ ತೆರಳಿದ್ದು ಈ ಸಂದರ್ಭದಲ್ಲಿ ಘಟನೆ ನಡೆದಿದೆ. ಘಟನೆಯಿಂದ ಇಲ್ಲಿನ ಜನರು ಆತಂಕಕ್ಕೆ ಒಳಗಾಗಿದ್ದು ಘಟನೆ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಆರೋಪಿ ಚಿರಂಜೀವಿ ನಾಪತ್ತೆಯಾಗಿದ್ದು, ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.