ಉಡುಪಿ: ಮನೆಯ ವಾಸ್ತವ್ಯದ ವಿಚಾರದಲ್ಲಿ ಸಹೋದರರ ನಡುವೆ ಗಲಾಟೆ ನಡೆದು ತಮ್ಮನೇ ಅಣ್ಣನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಘಟನೆ ಉಡುಪಿ ತಾಲೂಕಿನ 80 ಬಡಗುಬೆಟ್ಟು ಗ್ರಾಮದ ಕಬ್ಯಾಡಿ ಕಂಬಳಕಟ್ಟ ಎಂಬಲ್ಲಿ ನಡೆದಿದೆ.
ಕಬ್ಯಾಡಿ ಕಂಬಳಕಟ್ಟ ನಿವಾಸಿ 43 ವರ್ಷದ ಬಾಲಕೃಷ್ಣ ನಾಯ್ಕ್ ಕೊಲೆಯಾದವರು. ಮಾ.16ರಂದು ಸಂಜೆ 6.30ಕ್ಕೆ ಬಾಲಕೃಷ್ಣ ಹಾಗೂ ಅವರ ಸಹೋದರ ದಯಾನಂದ ಎಂಬವರ ನಡುವೆ ಮನೆಯ ವಾಸ್ತವ್ಯದ ವಿಚಾರದಲ್ಲಿ ಗಲಾಟೆಯಾಗಿದೆ. ಇದೇ ದ್ವೇಷದಿಂದ ದಯಾನಂದ ಮನೆಯಲ್ಲಿದ್ದ ಕತ್ತಿಯಿಂದ ಬಾಲಕೃಷ್ಣ ಅವರ ತಲೆಗೆ ಹಲ್ಲೆ ಮಾಡಿದ್ದಾನೆ. ಇದರಿಂದ ಬಾಲಕೃಷ್ಣ ಅವರ ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ:‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ‘ವೈ’ ಕೆಟಗರಿ ಭದ್ರತೆ
ಘಟನಾ ಸ್ಥಳಕ್ಕೆ ಮಣಿಪಾಲ ಠಾಣಾ ನಿರೀಕ್ಷಕ ಮಂಜುನಾಥ್, ಠಾಣಾಧಿಕಾರಿಗಳಾದ ರಾಜಶೇಖರ್ ಹೊಂದಾಳೆ, ಸುಧಾಕರ ತೋನ್ಸೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಶವವನ್ನು ವೈದ್ಯಕೀಯ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಲು ಉಚಿತ ಆಂಬುಲೆನ್ಸ್ ಸೇವೆ ಒದಗಿಸಿ ಇಲಾಖೆಗೆ ಸಹಕರಿಸಿದರು.
ಈ ಬಗ್ಗೆ ನಿತ್ಯಾನಂದ ನಾಯ್ಕ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.