ಮಂಗಳೂರು : ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಾರ ಪ್ರಮಾಣದ ವಿದೇಶಿ ಕರೆನ್ಸಿ ಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ ಭಟ್ಕಳ ಮೂಲದ ವ್ಯಕ್ತಿಯೊಬ್ಬನನ್ನು ಗುರುವಾರ ಕಂದಾಯ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.
ನಿರ್ದಿಷ್ಟ ಗುಪ್ತಚರ ಮಾಹಿತಿಗಳನ್ನಾಧರಿಸಿ ದುಬೈಗೆ ತೆರಳಲು ಮುಂದಾಗಿದ್ದ ಫಾರೂಕ್ ಅರ್ಮರ್ (51) ಎಂಬಾತನನ್ನು ತಪಾಸಣೆಗೊಳಪಡಿಸಿದಾಗ ಬಿಸ್ಕೆಟ್ ಪ್ಯಾಕೆಟ್‌ಗಳು ಮತ್ತು ಚಾಕಲೇಟ್ ಪ್ಯಾಕೆಟ್‌ಗಳಲ್ಲಿ ಅಡಗಿಸಿಟ್ಟಿದ್ದ ಅಪಾರ ಪ್ರಮಾಣದ ವಿದೇಶಿ ಕರೆನ್ಸಿ ಪತ್ತೆಯಾಗಿದೆ.
ಸುಮಾರು 25,07,162 ರೂಪಾಯಿ ಭಾರತೀಯ ಮೌಲ್ಯದ ಅಮೆರಿಕದ ಡಾಲರ್ , ಅರಬ್ ರಾಷ್ಟ್ರಗಳ ನೋಟುಗಳು ಸೇರಿದಂತೆ ವಿದೇಶಿ ನೋಟುಗಳನ್ನು ವಶ ಪಡಿಸಿಕೊಂಡು 1962 ರ ಕಸ್ಟಮ್ಸ್ ಕಾಯಿದೆಯಡಿಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವಿಚಾರಣೆ ವೇಳೆ ಅರ್ಮರ್ ನಾನು ಈ ಹಿಂದೆಯೂ ಹಲವು ಬಾರಿ ವಿದೇಶಿ ಹಣವನ್ನು ಕಳ್ಳಸಾಗಣೆ ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾನೆ.