ಲಕ್ನೋ: ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಗೆ 9,900 ಕೋಟಿ ರೂಪಾಯಿಗಳು ಜಮೆಯಾಗಿದೆ. ಇದನ್ನು ಕಂಡು ಆ ವ್ಯಕ್ತಿಗೆ ನಂಬಲಾಗಲಿಲ್ಲ. ಕಾರಣ ಇದು ಸಾಫ್ಟ್‌ವೇರ್ ದೋಷದಿಂದ ಆಗಿದೆ.
ಭಾನು ಪ್ರಕಾಶ್ ಅವರ ಖಾತೆಗೆ ಈ ಭಾರಿ ಮೊತ್ತ ಬಂದು ಸೇರಿದೆ. ಬರೋಡಾ ಯುಪಿ ಬ್ಯಾಂಕ್‌ಗೆ ಸಂಬಂಧಿಸಿದ ತನ್ನ ಬ್ಯಾಂಕ್ ಖಾತೆಯನ್ನು ಭಾನು ಪ್ರಕಾಶ್ ಪರಿಶೀಲಿಸಿದಾಗ, ಅವರು 99,99,94,95,999.99 (ರೂ. 99 ಬಿಲಿಯನ್ 99 ಕೋಟಿ 94 ಲಕ್ಷದ 95 ಸಾವಿರ ಮತ್ತು 999) ತೋರಿಸಿರುವ ಮೊತ್ತವನ್ನು ಕಂಡು ಬೆಚ್ಚಿಬಿದ್ದರು. ನಂತರ ಅವರು ಸಮಸ್ಯೆಯ ಬಗ್ಗೆ ಬ್ಯಾಂಕ್‌ಗೆ ತಿಳಿಸಿದರು.
ತನಿಖೆಯ ನಂತರ, ಭಾನು ಪ್ರಕಾಶ್ ಅವರ ಖಾತೆಯು ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಸಾಲದ ಖಾತೆಯಾಗಿದ್ದು, ದುರದೃಷ್ಟವಶಾತ್ ಇದು Non-Performing Asset (ಎನ್‌ಪಿಎ) ಆಗಿದೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ. ದೋಷವನ್ನು ಗುರುತಿಸಿದ ಬ್ಯಾಂಕ್ ಕ್ಷಿಪ್ರವಾಗಿ ಕಾರ್ಯನಿರ್ವಹಿಸಿತು.
“ಈ ಸ್ಥಿತಿಗೆ ಸಾಫ್ಟ್‌ವೇರ್ ಗ್ಲಿಚ್ ಕಾರಣವಾಗಿದೆ, ಇದು ಖಾತೆಯಲ್ಲಿನ ಅಗಾಧ ಮೊತ್ತವನ್ನು ತೋರಿಸಿದೆ ” ಎಂದು ಬ್ಯಾಂಕಿನ ಶಾಖಾ ವ್ಯವಸ್ಥಾಪಕ ರೋಹಿತ್ ಗೌತಮ್ ಹೇಳಿದ್ದಾರೆ.
“ಖಾತೆಯ ಎನ್‌ಪಿಎ ಸ್ಥಿತಿಗೆ ಲಿಂಕ್ ಮಾಡಲಾದ ಸಾಫ್ಟ್‌ವೇರ್ ದೋಷದಿಂದಾಗಿ ಭಾನು ಪ್ರಕಾಶ್ ಗೆ ಈ ಮೊತ್ತವು ಕಾಣಸಿಕ್ಕಿದೆ ಎಂದು ನಾವು ಹೇಳೀದ್ದೇವೆ. ತಪ್ಪನ್ನು ಸರಿಪಡಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಯಾವುದೇ ಸಂಭಾವ್ಯ ದುರುಪಯೋಗವನ್ನು ತಡೆಯಲು ಖಾತೆಯನ್ನು ತಡೆಹಿಡಿಯಲಾಗಿದೆ” ಎಂದು ಅವರು ಹೇಳಿದರು.