ಜಕಾರ್ತಾ: ಇಂಡೋನೇಷಿಯಾದ ಸುಮಾತ್ರಾ ದ್ವೀಪದಲ್ಲಿರುವ ಅಶೆ ಪ್ರದೇಶದಲ್ಲಿ ಸ್ಥಳೀಯ ವ್ಯಕ್ತಿಯೊಬ್ಬನಿಗೆ ಛಡಿಯೇಟು ಶಿಕ್ಷೆ ನೀಡುತ್ತಿದ್ದ ಸಂದರ್ಭದಲ್ಲಿ ಆತ ಪ್ರಜ್ಞೆ ತಪ್ಪಿದರೂ ಆತನಿಗೆ ಮತ್ತೆ ಪ್ರಜ್ಞೆ ಬರಿಸಿ ಛಡಿಯೇಟು ಶಿಕ್ಷೆಯನ್ನು ಮುಂದುವರಿಸಿದ ಅಮಾನವೀಯ ಘಟನೆ ನಡೆದಿದೆ.
ಗುರುವಾರದಂದು 22 ವರ್ಷ ಪ್ರಾಯದ ಯುವಕನ ಬೆನ್ನಿಗೆ ಬಿದಿರಿನ ಲಾಠಿಯಿಂದ 100 ಛಡಿಯೇಟು ಶಿಕ್ಷೆಯನ್ನು ನೀಡುತ್ತಿದ್ದ ಸಂದರ್ಭದಲ್ಲಿ ಆ ಯುವಕ ಪ್ರಜ್ಞೆ ತಪ್ಪುತ್ತಾನೆ. ಈ ಸಂದರ್ಭದಲ್ಲಿ ಆತನಿಗೆ ಸ್ವಲ್ಪ ಪ್ರಮಾಣದ ಚಿಕಿತ್ಸೆಯನ್ನು ನೀಡಿ ಬಳಿಕ ಪುನಃ ಛಡಿಯೇಟು ನೀಡುವುದನ್ನು ಮುಂದುವರಿಸಲಾಯಿತು. 100 ಛಡಿಯೇಟುಗಳ ಶಿಕ್ಷೆ ಪೂರ್ಣಗೊಂಡ ಬಳಿಕವಷ್ಟೇ ಆ ಯುವಕನನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ತಿಳಿದುಬಂದಿದೆ.
ಮಹಿಳೆಯೊಬ್ಬಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಅಪರಾಧಕ್ಕೆ ಈ ಯುವಕನಿಗೆ ನೂರು ಛಡಿಯೇಟಿನ ಶಿಕ್ಷೆ ನೀಡಲಾಗಿದ್ದರೆ, ಆ ಮಹಿಳೆಗೂ ಸಹ ಅಶೆ ಪಟ್ಟಣದಲ್ಲಿರುವ ಮಸೀದಿಯ ಹೊರಭಾಗದಲ್ಲಿ ನೂರು ಛಡಿಯೇಟಿನ ಶಿಕ್ಷೆಯನ್ನು ವಿಧಿಸಲಾಗಿತ್ತು. ಈ ಸಂದರ್ಭದಲ್ಲಿ ಸ್ಥಳದಲ್ಲಿ ನೆರೆದಿದ್ದ ಜನರು ‘ಇನ್ನೂ ಜೋರಾಗಿ, ಜೋರಾಗಿ’ ಎಂದು ಕೂಗುತ್ತಿದ್ದುದು ಕಂಡುಬಂತು.
ಕಳೆದ ಜುಲೈ ತಿಂಗಳಿನಲ್ಲಿ ವಿವಾಹಪೂರ್ವ ಲೈಂಗಿಕ ಚಟುವಟಿಕೆ ನಡೆಸಿದ್ದ ಮೂವರಿಗೆ ತಲಾ ನೂರು ಛಡಿಯೇಟಿನ ಶಿಕ್ಷೆಯನ್ನು ನೀಡಲಾಗಿತ್ತು. ಹಾಗೆಯೇ ಕಳೆದ ವರ್ಷ ಅಪ್ರಾಪ್ತೆಯೊಂದಿಗೆ ಲೈಂಗಿಕ ಚಟುವಟಿಕೆ ನಡೆಸಿದ್ದ ಇಬ್ಬರಿಗೆ ನೂರು ಛಡಿಯೇಟಿನ ಶಿಕ್ಷೆ ನೀಡಲಾಗಿತ್ತು.
ಸ್ಥಳಿಯ ಇಸ್ಲಾಮ್ ಕಾನೂನಿನಲ್ಲಿ ನಿಷೇಧವಾಗಿರುವ ಜೂಜಾಡುವುದು, ಮದ್ಯ ಸೇವನೆ ಮತ್ತು ಸಲಿಂಗ ಕಾಮ ಹಾಗೂ ಮದುವೆಗೆ ಮೊದಲು ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅಪರಾಧಗಳಿಗೆ ಸಾರ್ವಜನಿಕ ಛಡಿಯೇಟು ನೀಡುವ ಶಿಕ್ಷೆ ಈ ಭಾಗದಲ್ಲಿ ಪ್ರಚಲಿತದಲ್ಲಿದೆ. ಇದಕ್ಕೆ ಅಂತಾರಾಷ್ಟ್ರೀಯ ವಿರೋಧವಿದ್ದರೂ ಈ ಭಾಗದ ಜನರು ಇದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.
ಮುಸ್ಲಿಂರು ಬಹುಸಂಖ್ಯಾತರಾಗಿರುವ ಜಗತ್ತಿನ ಅತೀ ದೊಡ್ಡ ರಾಷ್ಟ್ರವಾಗಿರುವ ಇಂಡೋನೇಷಿಯಾದಲ್ಲಿ ಈ ಅಶೆ ಪ್ರಾಂತ್ಯದಲ್ಲಿ ಮಾತ್ರವೇ ಧಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಮಾನವ ಹಕ್ಕು ಆಯೋಗಗಳು ಈ ಕ್ರಮವನ್ನು ಅಮಾನವೀಯ ಎಂದು ಖಂಡಿಸಿದರೂ ಮತ್ತು ಇಂಡೋನೇಷಿಯಾ ಅಧ್ಯಕ್ಷ ಜೊಕೊ ವಿಡೋಡೊ ಈ ಆಚರಣೆಗೆ ಅಂತ್ಯ ಹಾಡಲು ಸೂಚಿಸಿದ್ದರೂ ಇಲ್ಲಿನ ಪ್ರಾಂತ್ಯದ ಜನ ಇದಕ್ಕೆಲ್ಲಾ ಕಿವಿಗೊಡುತ್ತಿಲ್ಲ.