ಜೈಪುರ: ಶ್ರದ್ಧಾ ಪ್ರಕರಣದ ಮಾದರಿಯಲ್ಲೇ ಯುವಕನೊಬ್ಬ ತನ್ನ ಚಿಕ್ಕಮ್ಮನನ್ನು ಹತ್ಯೆಗೈದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಅನೂಜ್ ಶರ್ಮಾ(32) ತನ್ನ ಚಿಕ್ಕಮ್ಮ ಸರೋಜ್ (64) ರನ್ನು ಭೀಕರವಾಗಿ ಕೊಲೆಗೈದಿದ್ದಾರೆ.
ಘಟನೆ ಹಿನ್ನೆಲೆ: ಸರೋಜ್ ಅವರ ಗಂಡ ಮೃತಪಟ್ಟ ಬಳಿಕ ಜೈಪುರದ ವಿದ್ಯಾನಗರದಲ್ಲಿ ಅನೂಜ್, ಆತನ ತಂದೆ, ತಂಗಿ ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದಾರೆ. ಅನೂಜ್ ತಾಯಿ ಕೋವಿಡ್ ನಿಂದ ಮೃತಪಟ್ಟಿದ್ದಾರೆ. ಚಿಕ್ಕಮ್ಮ ಅನೂಜ್ ಹಾಗೂ ಆತನ ತಂಗಿಯನ್ನು ನೋಡಿಕೊಳ್ಳುತ್ತಿದ್ದರು. ಇತ್ತೀಚೆಗೆ ಅನೂಜ್ ದೆಹಲಿಯಲ್ಲಿ ಧಾರ್ಮಿಕ ಕಾರ್ಯಕ್ರಮ (ಧಾರ್ಮಿಕ ಪ್ರವಚನ) ದಲ್ಲಿ ಭಾಗಿಯಾಗಲು ಚಿಕ್ಕಮ್ಮನ ಬಳಿ ಅನುಮತಿ ಕೇಳಿದ್ದಾರೆ. ಇದಕ್ಕೆ ಚಿಕ್ಕಮ್ಮ ಹೋಗುವುದು ಬೇಡ ಎಂದಿದ್ದಾರೆ.
ಕೆಲ ದಿನಗಳ ಬಳಿಕ ಅನೂಜ್ ತಂದೆ ಕೆಲಸದ ನಿಮಿತ್ತ ಇಂದೋರ್ ಗೆ ಹೋಗಿದ್ದಾರೆ. ಈ ವೇಳೆ ಸರೋಜ್ ಹಾಗೂ ಅನೂಜ್ ಇಬ್ಬರೇ ಮನೆಯಲ್ಲಿದ್ದರು. ಆಗ ಅನುಮತಿ ಕೊಡದ ಸರೋಜ್ ರನ್ನು ಸುತ್ತಿಗೆ ತಲೆಗೊಂದು ಏಟು ಕೊಟ್ಟಿದ್ದಾನೆ. ಅಲ್ಲೇ ಮೃತಪಟ್ಟ ಸರೋಜ್ ಅವರ ದೇಹವನ್ನು ಮಾರ್ಬಲ್ ಕಟ್ಟರ್ ನಿಂದ 10 ತುಂಡುಗಳಾಗಿ ಕತ್ತರಿಸಿ ಅವುಗಳನ್ನು ಬಕೆಟ್ ಹಾಗೂ ಸೂಟ್ ಕೇಸ್ ನಲ್ಲಿ ಹಾಕಿ ಹೆಚ್ಚಾಗಿ ಯಾರೂ ಹೋಗದ ದೂರದ ಪ್ರದೇಶದಲ್ಲಿ ಬಿಸಾಕಿದ್ದಾನೆ ಎಂದು ವರದಿ ತಿಳಿಸಿದೆ.
ಇದಾದ ಬಳಿಕ ಅನೂಜ್ ಠಾಣೆಗೆ ಹೋಗಿ ನಾಪತ್ತೆಯಾಗಿರುವ ಪ್ರಕರಣವನ್ನು ದಾಖಲಿಸಿ ಉಳಿದ ಸಂಬಂಧಿಕರೊಂದಿಗೆ ಸರೋಜ್ ರನ್ನು ಹುಡುಕುವ ನಾಟಕವನ್ನಾಡುತ್ತಾನೆ. ಪೊಲೀಸರು ಸಂಶಯಗೊಂಡು, ಅಕ್ಕಪಕ್ಕದ ಸಿಸಿಟಿವಿಯನ್ನು ಪರಿಶೀಲಿಸುತ್ತಾರೆ. ಆಗ ಅನೂಜ್ ಸೂಟ್ ಕೇಸ್ ಹಿಡಿದುಕೊಂಡು ಹೋಗುವುದನ್ನು ನೋಡುತ್ತಾರೆ. ಅನೂಜ್ ರನ್ನು ವಿಚಾರಿಸಿದಾಗ ಕೃತ್ಯ ಎಸಗಿದನ್ನು ಬಾಯಿ ಬಿಡುತ್ತಾನೆ.
ದೇಹದ 8 ಭಾಗಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಅನೂಜ್ ಇಂಜಿನಿಯರಿಂಗ್ ಮಾಡಿ, ಕೆಲಸ ಮಾಡುತ್ತಿದ್ದ, 2012 -13 ರಲ್ಲಿ ʼಹರೇ ಕೃಷ್ಣ ಚಳುವಳಿʼಯ ಪ್ರಭಾವದಿಂದ ಅನೂಜ್ ಕೆಲಸವನ್ನು ಬಿಟ್ಟು ಧಾರ್ಮಿಕತೆಯ ವಿಷಯದಲ್ಲಿ ಹೆಚ್ಚು ಒಲವು ಹೊಂದುತ್ತಾನೆ. ಇದೇ ವೇಳೆ ತನ್ನ ಅಚಿಂತ್ಯ ಗೋವಿಂದದಾಸ್ ಎಂದು ಬದಲಾಯಿಸಿಕೊಳ್ಳುತ್ತಾನೆ. ಸತ್ಸಂಗ ಕಾರ್ಯಕ್ರಮಕ್ಕೆ ಹೋಗಲು ಅನುಮತಿ ನೀಡದ್ದಕ್ಕೆ ಸಿಟ್ಟಾಗಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.