ಕೊಪ್ಪಳ: ನಗರದ ಎಂಎಚ್‌ಪಿಎಸ್ ಶಾಲೆಯ ಪಕ್ಕದಲ್ಲಿ ಶನಿವಾರ ಬೆಳಗಿನ ಜಾವ ಶಾರ್ಟ್ ಸರ್ಕ್ನೂಟ್‌ನಿಂದ ಹಣ್ಣಿನ ಅಂಗಡಿ, ಹಾಡ್ ìವೇರ್ ಸೇರಿದಂತೆ ಝರಾಕ್ಸ್ ಅಂಗಡಿಗಳು ಸುಟ್ಟು ಕರಕಲಾಗಿದ್ದು, ಹಣ್ಣಿನ ಅಂಗಡಿಯಲ್ಲಿ ಮಲಗಿದ್ದ ಯುವಕ ವೀರೇಶ ಮುಂಡರಗಿ(18) ಮೃತಪಟ್ಟಿದ್ದಾನೆ.
ಮಗನನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಸ್ಥಳಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ನಗರದ ಇಂದಿರಾ ಕ್ಯಾಂಟೀನ್ ಸಮೀಪದಲ್ಲಿಯೇ ಹಲವು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ-63 ಪಕ್ಕ ಲಿಂಗರಾಜ ಮುಂಡರಗಿ ಅವರು ಹಣ್ಣಿನ ಅಂಗಡಿ ನಡೆಸುತ್ತಿದ್ದರು. ಇವರಿಗೆ ಸಹೋದರನ ಮಗ ವೀರೇಶ ಮುಂಡರಗಿ ಸಹ ಸಹಕರಿಸುತ್ತಿದ್ದ. ಎಂದಿನಂತೆ ವೀರೇಶ ರಾತ್ರಿ ಅಂಗಡಿ ಬಂದ್ ಮಾಡಿ ಒಳಗಡೆಯೇ ಮಲಗಿದ್ದಾನೆ. ಕುಟುಂಬಸ್ಥರು ಮನೆಗೆ ತೆರಳಿದ್ದಾರೆ. ಆದರೆ ಶನಿವಾರ ಬೆಳಗಿನ 3:30ರ ಸಮಾರಿಗೆ ಅಂಗಡಿ ಮೇಲ್ಭಾಗದಲ್ಲಿ ವಿದ್ಯುತ್ ಸ್ಪರ್ಶದಿಂದ ಹಣ್ಣಿನ ಅಂಗಡಿಯಲ್ಲವೂ ಸುಟ್ಟಿದೆ. ಪಕ್ಕದಲ್ಲಿಯೇ ಇದ್ದ ಮಹೆಬೂಬ್ ಹಾರ್ಡ್‌ವೇರ್ ಅಂಗಡಿ, ಇನ್ನೊಂದು ಪಕ್ಕದಲ್ಲಿದ್ದ ಗವಿಸಿದ್ಧಪ್ಪ ಕಂದಾರಿಯ ಝರಾಕ್ಸ್ ಅಂಗಡಿಗೂ ಬೆಂಕಿ ತಗುಲಿದೆ. ಮೂರು ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕುಟುಂಬಸ್ಥರು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಆದರೆ ಬೆಂಕಿ ಅಧಿಕವಾಗುತ್ತಿದ್ದಂತೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ದಳದ ತಂಡ ದೌಡಾಯಿಸಿ ಮೂರು ಅಂಗಡಿಯಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಿದೆ. ಆದರೆ ಬೆಳಗ್ಗೆ 9 ಗಂಟೆ ವೇಳೆಗೆ ಮಗ ಕಾಣಿಸುಲ್ಲ ಎಂದು ಲಿಂಗರಾಜ
ತಡಬಡಿಸಿ, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವೀರೇಶನಿಗೆ ಕರೆ ಮಾಡಿದರೂ ಮೊಬೈಲ್ ಸ್ವಿಚ್‌ಆಫ್ ಎಂದು ಬರುತ್ತಿದ್ದು, ಪೊಲೀಸರು ಅನುಮಾನಗೊಂಡು ಅಂಗಡಿಗೆ ದೌಡಾಯಿಸಿ, ಹುಡುಕಿದ ವೇಳೆ ವೀರೇಶನ ದೇಹ ಸಂಪೂರ್ಣ ಸುಟ್ಟು ಹೋಗಿತ್ತು. ಅಗ್ನಿಶಾಮಕಕ್ಕೂ ಮೃತದೇಹ ಗೊತ್ತಾಗಿಲ್ಲ: ಬೆಳಗಿನ ಜಾವ ಅಗ್ನಿಶಾಮಕಕ್ಕೆ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದೆ. ಆದರೆ ಹಣ್ಣಿನ ಬುಟ್ಟಿಗಳು ಯುವಕನ ಮೇಲೆ ಬಿದ್ದಿದ್ದ ಹಿನ್ನೆಲೆಯಲ್ಲಿ ಅವರೂ ಬುಡ್ಡೆಯ ಮೇಲೆ ನೀರು ಸಿಂಪಡಣೆ ಮಾಡಿದ್ದಾರೆ. ಆದರೆ ಮೃತದೇಹ ಇರುವುದು ಗೊತ್ತಾಗಿಲ್ಲ. ಸ್ಥಳದಲ್ಲಿದ್ದ ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಯಾರೋ ಉದ್ದೇಶಪೂರ್ವಕ ಈ ಕೃತ್ಯ ಮಾಡಿದ್ದಾರೆ ಎಂದು ಆಪಾದನೆ ಮಾಡುತ್ತಿದ್ದರು.
ಸ್ಥಳಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಆಗಮಿಸಿ ಕುಟುಂಬ ವರ್ಗಕ್ಕೆ ಸಾಂತ್ವಾನ ಹೇಳಿದರಲ್ಲದೇ, ಸರ್ಕಾರದಿಂದ ಮೃತ ಯುವಕನ ಕುಟುಂಬಕ್ಕೆ ಪರಿಹಾರ ಕೊಡಿಸುವ ಭರವಸೆ ನೀಡಿದರು. ಅಂಗಡಿ ಮಾಲಿಕರು ಒಟ್ಟು 15 ಲಕ್ಷ ಮೌಲ್ಯದಷ್ಟು ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿದೆ ಎಂದು ದೂರು ನೀಡಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.