ಚಂಡೀಗಢ್: ತಾನು ಕಳೆದ ಹತ್ತು ವರ್ಷಗಳಲ್ಲಿ ಇಬ್ಬರು ಯುವತಿಯರನ್ನು ಹತ್ಯೆಗೈದಿರುವುದಾಗಿ ನ್ಯೂಸ್ ಚಾನೆಲ್ ವೊಂದರ ಲೈವ್ ಟಿವಿ ಶೋನ ಸಂದರ್ಶನದಲ್ಲಿ ತಪ್ಪೊಪ್ಪಿಕೊಂಡಿದ್ದು, ಕಾರ್ಯಕ್ರಮದ ನಡುವೆಯೇ ಸ್ಟುಡಿಯೋಗೆ ಆಗಮಿಸಿದ ಪೊಲೀಸರು ವ್ಯಕ್ತಿಯನ್ನು ಬಂಧಿಸಿರುವ ಅಪರೂಪದ ಘಟನೆ ಬುಧವಾರ ನಡೆದಿದೆ ಎಂದು ವರದಿ ತಿಳಿಸಿದೆ.
ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಹೋಟೆಲ್ ವೊಂದರಲ್ಲಿ ನರ್ಸ್ ಒಬ್ಬಳ ಕೊಲೆ ಪ್ರಕರಣದಲ್ಲಿ ಆರೋಪಿ ಸೆರೆ ಹಿಡಿಯಲು ಚಂಡೀಗಢ ಪೊಲೀಸರು ಬಲೆ ಬೀಸಿದ್ದರು. ಏತನ್ಮಧ್ಯೆ ಮಂಗಳವಾರ 31 ವರ್ಷದ ಮಣಿಂದರ್ ಸಿಂಗ್ ನ್ಯೂಸ್ ಚಾನೆಲ್ ವೊಂದರ ಸ್ಟುಡಿಯೋಗೆ ಆಗಮಿಸಿ ಸಂದರ್ಶನ ನೀಡಿರುವುದಾಗಿ ವರದಿ ವಿವರಿಸಿದೆ.
ಮಣಿಂದರ್ ಸಿಂಗ್ 2010ರಲ್ಲಿ ಮತ್ತೊಬ್ಬ ಯುತಿಯನ್ನು ಹತ್ಯೆಗೈದ ಪ್ರಕರಣದಲ್ಲಿ 2010ರಲ್ಲಿ ದೋಷಿ ಎಂದು ಕೋರ್ಟ್ ತೀರ್ಪು ಕೊಟ್ಟಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಟಿವಿ ಚಾನೆಲ್ ಲೈವ್ ಶೋನಲ್ಲಿ 27 ವರ್ಷದ ನರ್ಸ್ ಸರ್ಬಜಿತ್ ಕೌರ್ ಕೊಂದಿರುವುದನ್ನು ತಪ್ಪೊಪ್ಪಿಕೊಂಡಿದ್ದ.
ಸರ್ಬಿಜಿತ್ ತನ್ನ ಸಹೋದರಿ ಗಂಡನ ತಮ್ಮನ ಜತೆ ಅನೈತಿಕ ಸಂಬಂಧ ಹೊಂದಿದ್ದಳು. ಈ ಕಾರಣಕ್ಕಾಗಿ ನಾನು ಆಕೆಯನ್ನು ಕೊಂದಿದ್ದೆ ಎಂದು ನ್ಯೂಸ್ ಚಾನೆಲ್ ಗೆ ತಿಳಿಸಿದ್ದ ವಿಷಯ ಪೊಲೀಸರಿಗೆ ತಲುಪಿತ್ತು.
ಆರೋಪಿ ಸಿಂಗ್ ಸಂದರ್ಶನ ಲೈವ್ ಪ್ರಸಾರ ಆಗುತ್ತಿದ್ದಾಗಲೇ ಪೊಲೀಸರು ಸ್ಟುಡಿಯೋ ಒಳಕ್ಕೆ ಬಂದು ಕಾರ್ಯಕ್ರಮದ ಮಧ್ಯೆಯೇ ಆತನನ್ನು ಬಂಧಿಸಿ ಎಳೆದೊಯ್ದಿರುವುದಾಗಿ ವರದಿ ತಿಳಿಸಿದೆ.