Advertisement

ಭ್ರೂಣಹತ್ಯೆ ವಿರೋಧಿಸಿ ಸೈಕಲ್‌ ಮೂಲಕ ದೇಶಾದ್ಯಂತ ಜಾಗೃತಿ

05:30 AM May 25, 2018 | Team Udayavani |

ಪುತ್ತೂರು: ಭ್ರೂಣ ಹತ್ಯೆಯನ್ನು ವಿರೋಧಿಸಿ ಹಾಗೂ ಸಾಮಾಜಿಕ ವ್ಯವಸ್ಥೆ ಸುಧಾರಣೆಯ ಜಾಗೃತಿಗಾಗಿ ಬಿಹಾರದಿಂದ ಹೊರಟು ಸೈಕಲ್‌ ಸವಾರಿ ಮೂಲಕ ದೇಶಾದ್ಯಂತ ಜಾಗೃತಿ ಸಂಚಾರ ನಡೆಸುತ್ತಿರುವ ವ್ಯಕ್ತಿಯೊಬ್ಬರು 8ನೇ ರಾಜ್ಯವಾಗಿ ಕರ್ನಾಟಕದ ಪುತ್ತೂರು ತಾಲೂಕಿಗೆ ಆಗಮಿಸಿದ್ದರು. ಬಿಹಾರದ ಮುಹಮ್ಮದ್‌ ಜಾವೇದ್‌ (44) ಸೈಕಲ್‌ ಮೇಲೆ ದೊಡ್ಡದಾದ ತ್ರಿವರ್ಣ ಧ್ವಜ ಅಳವಡಿಸಿಕೊಂಡಿದ್ದು, ಸ್ಯಾನಿಟರಿ ನ್ಯಾಪ್‌ ಕಿನ್‌ ಮೇಲೆ ಸರಕಾರ ಶೇ. 12 ಜಿ.ಎಸ್‌.ಟಿ. ಹೇರಿರುವುದರ ಹಾಗೂ ಭ್ರೂಣ ಹತ್ಯೆ ವಿರುದ್ಧ ನನ್ನ ಅಭಿಯಾನ ಎಂದು ಬರೆದ ಬೋರ್ಡ್‌ ಅಳವಡಿಸಿದ್ದಾರೆ. ಜತೆಗೆ ಒಂದು ಪುಸ್ತಕವೂ ಇದ್ದು, ತಾವು ಹೋದಲ್ಲೆಲ್ಲ ಜನರ ಅಭಿಪ್ರಾಯ, ಸಹಿ ಸಂಗ್ರಹಿಸುತ್ತಿದ್ದಾರೆ.

Advertisement

2018 ಜನವರಿ 26ರಂದು ಪಾಟ್ನಾದಿಂದ ಹೊರಟಿರುವ ಇವರು ಕೇರಳ ರಾಜ್ಯದ ಮೂಲಕ ಕುಂಬ್ರ ತಲುಪಿದ್ದಾರೆ. ಮೋಜಿಗಾಗಿ ದೇಶ ಸುತ್ತಾಡುತ್ತಿಲ್ಲ. ದಾಖಲೆಯನ್ನು ನಿರ್ಮಿಸಬೇಕೆಂಬುದೂ ನನ್ನ ಉದ್ದೇಶವಲ್ಲ. ಭ್ರೂಣಹತ್ಯೆಯ ವಿರುದ್ಧ ಜನಜಾಗೃತಿ ಮೂಡಬೇಕು ಎಂಬ ಉದ್ದೇಶದಿಂದ ಪಾಟ್ನಾದಿಂದ ಹೊರಟು ಉತ್ತರ ಪ್ರದೇಶ, ಮಧ್ಯಪ್ರದೇಶ, ತಮಿಳುನಾಡು, ಕೇರಳ, ಆಂದ್ರಪ್ರದೇಶ, ತೆಲಂಗಾಣ ರಾಜ್ಯಗಳನ್ನು ಸುತ್ತಿದ್ದಾಗಿ ತಿಳಿಸಿದರು.


ಜನರ ಬೆಂಬಲ

ಎಲ್ಲ ಕಡೆಗಳಲ್ಲಿ ಜನರಿಂದ ಉತ್ತಮ ಸಹಕಾರ ಇದೆ. ಊಟ ಮತ್ತು ಆರ್ಥಿಕ ಸಹಾಯವನ್ನು ಕೆಲವರು ಮಾಡುತ್ತಿದ್ದಾರೆ. ತನ್ನ ಹೋರಾಟ ನ್ಯಾಯೋಚಿತ ಎಂದು ಜನರಿಂದ ಬೆಂಬಲ ವ್ಯಕ್ತವಾಗುತ್ತಿದೆ. ಭ್ರೂಣ ಹತ್ಯೆ ಮತ್ತು ಜಿ.ಎಸ್‌.ಟಿ. ತೆರಿಗೆ ಯಾರಿಗೂ ಬೇಡವಾಗಿದೆ. ಆದರೆ ಜನರು ಪ್ರತಿಭಟಿಸಲು ಏಕೆ ಹಿಂದೇಟು ಹಾಕುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎನ್ನುತ್ತಾರೆ ಜಾವೇದ್‌.

ಸಾಮಾಜಿಕ ಪಿಡುಗಿನ ವಿರುದ್ಧ
ನನ್ನ ಹೋರಾಟ ಯಾರ ವಿರುದ್ಧವೂ ಅಲ್ಲ. ಅದು ವ್ಯವಸ್ಥೆಯ ವಿರುದ್ಧ ಮಾತ್ರ ಎಂಬುದನ್ನು ಎಲ್ಲ ಕಡೆಯೂ ಹೇಳುತ್ತಿದ್ದೇನೆ. ನನ್ನ ಸೈಕಲ್‌ ಗೆ ತ್ರಿವರ್ಣ ಧ್ವಜವನ್ನು ಕಟ್ಟಿದ್ದೇನೆ. ನನ್ನ ಹೋರಾಟ ಅಪ್ಪಟ ಭಾರತೀಯನಾಗಿಯೇ ವಿನಃ ಯಾವುದೋ ಪಕ್ಷ, ಧರ್ಮದ ಅನುಯಾಯಿಯಾಗಿ ಅಲ್ಲ. ದೇಶದಲ್ಲಿ ಚಾಲ್ತಿಯಲ್ಲಿರುವ ಸಾಮಾಜಿಕ ಪಿಡುಗಿನ ವಿರುದ್ಧ ಯುವ ಸಮೂಹ ಎಚ್ಚೆತ್ತುಕೊಳ್ಳಬೇಕು. ನನ್ನ ಹೋರಾಟಕ್ಕೆ ಗೆಲುವು ಸಿಗಬಹುದೆಂಬ ನಿರೀಕ್ಷೆ ಇದೆ ಎಂದು ಮುಹಮ್ಮದ್‌ ಜಾವೇದ್‌ ತಿಳಿಸಿದ್ದಾರೆ.

ನಿದ್ದೆಗೆ ನಿಲ್ದಾಣ
ದಿನವಿಡೀ ಸೈಕಲ್‌ನಲ್ಲಿ ಪ್ರಯಾಣ ನಡೆಸಿ ರಾತ್ರಿ ವೇಳೆ ಬಸ್ಸು ನಿಲ್ದಾಣದಲ್ಲೇ ಮಲಗುತ್ತೇನೆ. ಐದು ತಿಂಗಳ ಯಾತ್ರೆಯಲ್ಲಿ ಎಲ್ಲೂ ನನಗೆ ತೊಂದರೆಯಾಗಿಲ್ಲ. ಜನರು ಮಾಡುವ ಸಣ್ಣ ಪುಟ್ಟ ಆರ್ಥಿಕ ಸಹಾಯದಿಂದಲೇ ನಾನು ಯಾತ್ರೆಯಲ್ಲಿ ಹೊಟ್ಟೆ ತುಂಬಿಸುತ್ತಿದ್ದೇನೆ ಎಂದು ಸೈಕಲ್‌ ಯಾತ್ರಿ ಜಾವೇದ್‌ ಹೇಳಿಕೊಂಡಿದ್ದಾರೆ.

Advertisement

29 ರಾಜ್ಯ ಸುತ್ತಾಟ
ದೇಶದ 29 ರಾಜ್ಯಗಳನ್ನು ಸುತ್ತಾಡಿ ಜಾಗೃತಿ ಮೂಡಿಸುತ್ತೇನೆ ಎನ್ನುವ ಮೊಹಮ್ಮದ್‌ ಜಾವೇದ್‌, ಪಾಟ್ನಾದಲ್ಲಿ ಬಡಗಿ ವೃತ್ತಿ ಮಾಡಿಕೊಂಡಿದ್ದಾರೆ. ಸಣ್ಣ ಪ್ರಾಯದಲ್ಲೇ ಸಾಮಾಜಿಕ ಪಿಡುಗಿನ ವಿರುದ್ಧ ಹೋರಾಟ ಮನೋಭಾವ ಹೊಂದಿದ್ದೇನೆ. ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದೆ. ಸ್ಯಾನಿಟರಿ ನ್ಯಾಪ್‌ ಕಿನ್‌ ಮೇಲೆ ಸರಕಾರ ಶೇ. 12 ಜಿ.ಎಸ್‌.ಟಿ. ಹಾಕಿರುವುದನ್ನು ವಿರೋಧಿಸಿ ಹಾಗೂ ಭ್ರೂಣಹತ್ಯೆ ತಡೆಗೆ ಆಗ್ರಹಿಸಿ, ದೇಶಾದ್ಯಂತ ಅಭಿಯಾನ ಕೈಗೊಂಡಿದ್ದೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next