ಬೆಂಗಳೂರು: ಸಿನಿಮಾದಲ್ಲಿ ನಟಿಸಬೇಕೆಂದು ಪ್ರತಿನಿತ್ಯ ನೂರಾರು ಮಂದಿ ಕನಸು ಕಾಣುತ್ತಾ, ಅವಕಾಶಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಒಂದಲ್ಲ ಒಂದು ದಿನ ತಾನು ಕೂಡ ಕಲಾವಿದೆಯಾಗಿ ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳುತ್ತೇನೆ ಎನ್ನುವ ನಂಬಿಕೆಯಲ್ಲಿ ದಿನ ದೂಡುವ ಅನೇಕರು ನಮ್ಮ ಸುತ್ತಮುತ್ತ ಕಾಣಸಿಗುತ್ತಾರೆ.
ಆದರೆ ಸಿನಿಮಾದಲ್ಲಿ ನಟಿಸಲು ಅವಕಾಶ ದೊರಕುವ ಬರದಲ್ಲಿ ವಂಚನೆಯ ಜಾಲಕ್ಕೆ ಸಿಲುಕಿಕೊಂಡು ಪಶ್ಚಾತಾಪ ಪಟ್ಟುಕೊಳ್ಳುವವರು ಕೂಡ ಇದ್ದಾರೆ. ಇಂಥದ್ದೇ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ತಮಿಳು ನಟ ರಾಘವ್ ಲಾರೆನ್ಸ್ (Raghava Lawrence) ಅವರ ʼಹಂಟರ್ʼ(Hunter) ಎನ್ನುವ ಸಿನಿಮಾದಲ್ಲಿ ನಟಿಸುವ ಅವಕಾಶ ನೀಡುತ್ತೇನೆಂದು ಯುವತಿಯೊಬ್ಬಳನ್ನು ನಂಬಿಸಿ ಆಕೆಯಿಂದ ಹಣ ಪೀಕಿಸಿ ವಂಚಿಸಿರುವ (Fraud) ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ನಂದಿತಾ ಕೆ ಶೆಟ್ಟಿ ಎನ್ನುವವರು ಸಿನಿಮಾದಲ್ಲಿ ನಟಿಸಲು ಅವಕಾಶಕ್ಕಾಗಿ ಕಾಯುತ್ತಿದ್ದರು. ಒಂದಷ್ಟು ರೀಲ್ಸ್ ಗಳನ್ನು ಹಾಕಿ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದರು. ಸೋಶಿಯಲ್ ಮೀಡಿಯಾ ಬಳಕೆ ವೇಳೆ ಮೂವಿ ಆ್ಯಡ್ ಲಿಂಕ್ ವೊಂದನ್ನು ಕ್ಲಿಕ್ ಮಾಡಿ, ಅದರಲ್ಲಿದ್ದ ನಂಬರ್ ಗೆ ಕರೆ ಮಾಡಿದ್ದಾರೆ.
ಈ ವೇಳೆ ನಂದಿತಾ ಅವರಿಗೆ ಸುರೇಶ್ ಕುಮಾರ್ ಎಂಬಾತನ ಪರಿಚಯವಾಗಿದೆ. ಸುರೇಶ್ ತಾನು ತಾನು ʼಹಂಟರ್ʼ ಮೂವಿ ಕಾಸ್ಟಿಂಗ್ ಡೈರೆಕ್ಟರ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಆ ಬಳಿಕ ನಂದಿತಾ ಅವರಿಗೆ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡುವುದಾಗಿ ಆಕೆಯಿಂದ ಹಂತ ಹಂತವಾಗಿ ಹಣವನ್ನು ಪಡೆದುಕೊಂಡಿದ್ದಾನೆ.
ಆರ್ಟಿಸ್ಟ್ ಕಾರ್ಡ್, ಅಗ್ರಿಮೆಂಟ್ ಸ್ಟಾಂಪ್ ಡ್ಯೂಟಿ, ವಿದೇಶದಲ್ಲಿ ಶೂಟಿಂಗ್ ಇರುತ್ತೆ ಪಾಸ್ ಪೋರ್ಟ್, ಟಿಕೆಟ್ ಚಾರ್ಜ್ ಗೆಂದು 12,500 ,35 ಸಾವಿರ , 90 ಸಾವಿರ ಹೀಗೆ ಹಂತ ಹಂತವಾಗಿ 1.71 ಲಕ್ಷ ರೂ. ಹಣವನ್ನು ಪಡೆದುಕೊಂಡಿದ್ದಾನೆ.
ಆನ್ ಲೈನ್ ಮೂಲಕ ಸುರೇಶ್ ಕುಮಾರ್ ಗೆ ಹಣ ಪಾವತಿಸಿದ್ದ ನಂದಿತಾ, ಈ ವಿಚಾರವಾಗಿ ಅನುಮಾನಗೊಂಡು ಪರಿಶೀಲನೆ ಮಾಡಿದಾಗ ವಂಚಕನ ಬಲೆಗೆ ಬಿದ್ದಿರುವುದು ಗೊತ್ತಾಗಿದೆ.
ಈ ಬಗ್ಗೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ನಂದಿತಾ ದೂರು ದಾಖಲಿಸಿದ್ದಾರೆ. ಯುವತಿ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ.