ಥಾಣೆ: ಕೋವಿಡ್ ಮಾರ್ಗಸೂಚಿಯನ್ನು ಉಲ್ಲಂಘಿಸಿ ತಾನು ಪ್ರೀತಿಯಿಂದ ಸಾಕಿದ್ದ ಎಮ್ಮೆಯ ಹುಟ್ಟುಹಬ್ಬವನ್ನು ಆಚರಣೆ ಮಾಡಿದ ಹಿನ್ನೆಲೆಯಲ್ಲಿ ಮಹಾರಾಷ್ಟ ಮೂಲದ ವ್ಯಕ್ತಿಯ ಮೇಲೆ ಕೇಸ್ ದಾಖಲಾದ ಘಟನೆ ನಡೆದಿದೆ.
ವ್ಯಕ್ತಿಯನ್ನು ಕಿರಣ್ ಮಹಾತ್ರೆ (30) ಎಂದು ಗುರುತಿಸಲಾಗಿದ್ದು, ಈತ ತನ್ನ ಮನೆಯಲ್ಲಿ ತಾನು ಪ್ರೀತಿಯಿಂದ ಸಾಕಿದ್ದ ಎಮ್ಮೆಯ ಹುಟ್ಟುಹಬ್ಬದ ಸಂಭ್ರಮಾಚರಣೆಯನ್ನು ಮಾಡಿದ್ದಾನೆ. ಈ ಸಮಯದಲ್ಲಿ ತನ್ನ ಗೆಳೆಯರನ್ನು ಒಳಗೊಂಡಂತೆ ಹಲವರನ್ನು ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಆಮಂತ್ರಿಸಿದ್ದ ಎನ್ನಲಾಗಿದೆ.
ಆದರೆ ಈ ನಡುವೆ ಎಮ್ಮೆಯ ಹುಟ್ಟುಹಬ್ಬಕ್ಕೆ ಆಗಮಿಸಿವರು ಮಾಸ್ಕ್ ಧರಿಸಿಲ್ಲ ಹಾಗೂ ಸಾಮಾಜಿಕ ಅಂತರವನ್ನು ಒಳಗೊಂಡಂತೆ ಯಾವುದೇ ರೀತಿಯಾದ ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಲ್ಲ, ಇದರಿಂದ ಈಗಾಗಲೇ ಹೆಚ್ಚಳವಾಗುತ್ತಿರುವ ಸೋಂಕಿನ ಪ್ರಮಾಣದ ಜೊತೆ ಜೊತೆಗೆ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಗಳಿದೆ ಎಂದು ವಿಷ್ಣು ನಗರ್ ಪೋಲಿಸ್ ಠಾಣೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:
ಇದೀಗ ವ್ಯಕ್ತಿಯ ವಿರುದ್ಧ IPC ಸೆಕ್ಷನ್ 269 ದ ಅಡಿಯಲ್ಲಿ ಜೀವಕ್ಕೆ ಅಪಾಯಕಾರಿಯಾಗುವ ಸೋಂಕನ್ನು ಹರಡುತ್ತಿರುವ ಆರೋಪದ ಮೇಲೆ ಮತ್ತು ಸಾಂಕ್ರಾಮಿಕ ಕಾಯ್ದೆಯ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಸದ್ಯ ಭಾರತದಲ್ಲಿ 24,800 ಕ್ಕೂ ಅಧಿಕ ಹೊಸ ಕೋವಿಡ್ ಸೋಂಕಿನ ಹೊಸ ಪ್ರಕರಣಗಳು ದಾಖಲಾಗುವ ಮೂಲಕ ಒಟ್ಟು ಕೋವಿಡ್ ಸೋಂಕಿನ ಪ್ರಮಾಣ 11.33 ಮಿಲಿಯನ್ ನ ಗಡಿ ದಾಟಿದೆ.