ಮಧ್ಯಪ್ರದೇಶ: ರಾತ್ರಿ ವೇಳೆ ಮನೆಗೆ ತಡವಾಗಿ ಆಗಮಿಸಿದ ಹತ್ತು ವರ್ಷದ ಮಗಳನ್ನು ಕೋಲಿನಿಂದ ಹೊಡೆದು ಕೊಲೆ ಮಾಡಿದ ಆರೋಪದಡಿ 40 ವರ್ಷದ ತಂದೆಯನ್ನು ಪೊಲೀಸರು ಬಂಧಿಸಿದ ಘಟನೆ ಮಧ್ಯಪ್ರದೇಶದ ಮೊರೆನಾದ ಉತ್ತಮ್ ಪುರಂ ಎಂಬಲ್ಲಿ ಭಾನುವಾರ (ಅ.10) ತಡರಾತ್ರಿ ನಡೆದಿದೆ.
ಸ್ನೇಹಿತರೊಂದಿಗೆ ದುರ್ಗಾ ಪೂಜೆಗೆ ತೆರಳಿದ್ದ ಮಗಳು, ತಡವಾಗಿ ಮನೆಗೆ ಬಂದ ಕಾರಣಕ್ಕೆ ಕುಪಿತಗೊಂಡ ತಂದೆ ರಾಕೇಶ್ ಜಾತವ್ ಕೋಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ.
ಕೊಲೆಯಾದ ಬಾಲಕಿ ನೆರೆಮನೆಯ ಸ್ನೇಹಿತೆಯರೊಂದಿಗೆ ದುರ್ಗಾ ಪೂಜೆಗೆ ತೆರಳಿದ್ದಳು. ಅಲ್ಲಿಂದ ಮನೆಗೆ ಮರಳುವಾಗ ತಡರಾತ್ರಿ 11 ಗಂಟೆಯಾಗಿತ್ತು. ಈ ಕಾರಣಕ್ಕಾಗಿ ತಂದೆ ಕೋಪಗೊಂಡು ಕೋಲಿನಿಂದ ಮನಬಂದಂತೆ ಹೊಡೆದಿದ್ದಾನೆ. ಹೊಡೆತದಿಂದ ತೀವ್ರವಾಗಿ ಗಾಯಗೊಂಡ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಇದನ್ನೂ ಓದಿ: ಕರ್ನಾಟಕದ 11 ಜನ ಮೀನುಗಾರರನ್ನು ವಶಕ್ಕೆ ಪಡೆದ ಗೋವಾ ಪೊಲೀಸರು
ಘಟನಾ ಸ್ಥಳಕ್ಕೆ ತೆರಳಿದ ಪೋಲಿಸರು, ಆರೋಪಿ ತಂದೆಯನ್ನು ಬಂಧಿಸಿದ್ದಾರೆ. ಜಾತವ್ ಕುಡಿತದ ಚಟ ಹೊಂದಿದ್ದ. ಪ್ರತಿ ದಿನ ಪತ್ನಿ ಮತ್ತು ಮಗಳಿಗೆ ಕಿರುಕುಳ ನೀಡುತ್ತಿದ್ದ ಎಂದು ಪೋಲಿಸರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.