ನವದೆಹಲಿ: ದೇಶಾದ್ಯಂತ ಸ್ವಚ್ಛ ಭಾರತ ಅಭಿಯಾನದ ಕಹಳೆ ಮೊಳಗುತ್ತಿದ್ದರೆ, ಮತ್ತೊಂದೆಡೆ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡಬೇಡಿ ಎಂದು ಮನವಿ ಮಾಡಿಕೊಂಡ ವ್ಯಕ್ತಿಯನ್ನೇ ಗುಂಪೊಂದು ಹೊಡೆದು ಕೊಂದ ದಾರುಣ ಘಟನೆ ದೆಹಲಿಯಲ್ಲಿ ನಡೆದಿದೆ!
ಏನಿದು ಘಟನೆ:
ಶನಿವಾರ ಸಂಜೆ ಇಬ್ಬರು ಯುವಕರು ದೆಹಲಿ ಮುಖರ್ಜಿ ನಗರದ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡಬೇಡಿ ಎಂದು 33 ವರ್ಷದ ಇ ರಿಕ್ಷಾ ಡ್ರೈವರ್ ರವೀಂದ್ರ ಕುಮಾರ್ ತಡೆದು ಮನವಿ ಮಾಡಿಕೊಂಡಿದ್ದರು.
ಆದರೆ ಇದರಿಂದ ರೊಚ್ಚಿಗೆದ್ದ ಇಬ್ಬರು ಯುವಕರು(ಯುವಕರು ದೆಹಲಿ ಯೂನಿರ್ವಸಿಟಿ ವಿದ್ಯಾರ್ಥಿಗಳು ಎಂದು ಶಂಕಿಸಲಾಗಿದೆ) ನಿನಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಬೆದರಿಕೆ ಹಾಕಿ ಹೋಗಿದ್ದರು. ಬಳಿಕ ರಾತ್ರಿ 8.30ರ ವೇಳೆಗೆ ಗುಂಪಿನೊಂದಿಗೆ ಬಂದು ಇಟ್ಟಿಗೆಯನ್ನು ಟವೆಲ್ ನೊಳಗೆ ಸುತ್ತಿ ರವೀಂದ್ರ ಅವರನ್ನು ಮಾರಣಾಂತಿಕವಾಗಿ ಥಳಿಸಿದ್ದರು ಎಂದು ಸಹೋದರ ವಿಜೇಂದ್ರ ಕುಮಾರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಅಲ್ಲಿ ಮೂತ್ರ ಮಾಡಬೇಡಿ ನಾವು ಕುಳಿತು ಊಟ ಮಾಡುವ ಸ್ಥಳ ಎಂದು ರವೀಂದ್ರ ಅವರು ಮನವಿ ಮಾಡಿಕೊಂಡಿದ್ದರು. ಆದರೆ ಸಿಟ್ಟಿಗೆದ್ದ ವಿದ್ಯಾರ್ಥಿಗಳು ಚಿಲ್ಲರೆ ಹಣ ಅವರ ಮುಖಕ್ಕೆ ಎಸೆದು, ಇದನ್ನು ತೆಗೆದುಕೊಂಡು ಮೂತ್ರ ಮಾಡಲು ಬಿಡು ಎಂದಾಗ ವಾಗ್ವಾದ ನಡೆದಿತ್ತು ಎಂದು ಪ್ರತ್ಯಕ್ಷದರ್ಶಿ ಮನೋಜ್ ಎಂಬಾತ ಮಾಹಿತಿ ನೀಡಿದ್ದಾರೆ.
ನಾವೆಲ್ಲ ಗಲಾಟೆ ತಡೆಯಲು ಪ್ರಯತ್ನ ಪಟ್ಟೆವು ಆದರೆ, ಅವರು 20, 25 ಮಂದಿ ಇದ್ದಿದ್ದರು. ಮಾರಣಾಂತಿಕವಾಗಿ ಹೊಡೆದು ಹಾಕಿದ ರವೀಂದ್ರ ಅವರನ್ನು ರಸ್ತೆಯಲ್ಲೇ ಬಿಟ್ಟು ಹೊರಟು ಹೋಗಿದ್ದರು. ಬಳಿಕ ರವೀಂದ್ರ ಅವರನ್ನು ಸಹೋದರ ಹಾಗೂ ಕೆಲವರು ಸೇರಿ ಮನೆಗೆ ಕರೆ ತಂದಿದ್ದರು. ಆದರೆ ರವೀಂದ್ರ ಅವರ ಸ್ಥಿತಿ ಗಂಭೀರವಾಗಿದ್ದರಿಂದ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ರವೀಂದ್ರ ಅವರು ಸಾವನ್ನಪ್ಪಿರುವುದಾಗಿ ತಿಳಿಸಿದರು ಎಂದು ವಿಜೇಂದ್ರ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.